Home ದೆಹಲಿ UPI ವಹಿವಾಟಿಗೆ MDR; ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

UPI ವಹಿವಾಟಿಗೆ MDR; ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0

ನವದೆಹಲಿ: 2,000ಕ್ಕಿಂತ ಹೆಚ್ಚಿನ ಮೌಲ್ಯದ ಮರ್ಚೆಂಟ್ UPI ವಹಿವಾಟುಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ವಿಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ.ಹೊಸ ಎಂಡಿಆರ್ ನಿಯಮಗಳು ಅನ್ಯಾಯವಾಗಿದ್ದು ಮತ್ತು ಕಾನೂನಾತ್ಮಕವಾಗಿ ದುರ್ಬಲವಾಗಿವೆ. ಇದು ದೇಶಾದ್ಯಂತ ಲಕ್ಷಾಂತರ ವಹಿವಾಟುಗಳ ಮೇಲೆ ತೀವ್ರ ಆರ್ಥಿಕ ಹೊರೆ ಉಂಟುಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿ ಅಂಗೀಕೃತ ವಕೀಲರಾದ ಅಂಜನ್ ದತ್ತಾ ಪರವಾಗಿ ವಕೀಲ ಅಶೋತ್ ದುಬೆ ಅವರು ಈ ಪಿಐಎಲ್ ದಾಖಲಿಸಿದ್ದಾರೆ.ಅಕ್ಟೋಬರ್ 15, 2026ರಿಂದ ಜಾರಿಗೆ ಬರಲಿರುವ ಹೊಸ MDR ವ್ಯವಸ್ಥೆಯಡಿ, ₹2,000ಕ್ಕಿಂತ ಹೆಚ್ಚಿನ ಪರ್ಸನ್-ಟು-ಮರ್ಚೆಂಟ್‌ (P2M) UPI ವಹಿವಾಟುಗಳಿಗೆ ಶೇ.0.4ರಷ್ಟು MDR ವಿಧಿಸಲಾಗುತ್ತದೆ. ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ ಗರಿಷ್ಠ ₹300ರ ಮಿತಿ ಇರಲಿದೆ. ಪರ್ಸನ್-ಟು-ಪರ್ಸನ್‌ (P2P) ವಹಿವಾಟುಗಳು ಹಾಗೂ ₹2,000ರವರೆಗಿನ P2M ಪಾವತಿಗಳು MDRನಿಂದ ಹೊರತಾಗಿವೆ.

ಅರ್ಜಿಯಲ್ಲಿ ಏನು ಪ್ರಶ್ನಿಸಲಾಗಿದೆ?

ಹೊಸ ಶುಲ್ಕ ವ್ಯವಸ್ಥೆ ಜಾರಿಗೆ ತರುವ ನಿರ್ಧಾರಕ್ಕೆ ಸಂಬಂಧಿಸಿದ ವೆಚ್ಚ ಅಧ್ಯಯನ, ಶುಲ್ಕ ನಿಗದಿಯ ವಿಧಾನ ಹಾಗೂ ವ್ಯಾಪಾರಿಗಳು ಗ್ರಾಹಕರ ಮೇಲೆ ಈ ವೆಚ್ಚವನ್ನು ವರ್ಗಾಯಿಸದಂತೆ ತಡೆಯುವ ಜಾರಿಗೊಳಿಸಬಹುದಾದ ವ್ಯವಸ್ಥೆಗಳ ಬಗ್ಗೆ ಸಮರ್ಪಕ ಮಾಹಿತಿ ಬಹಿರಂಗಪಡಿಸಲಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.2007 ರ ಪಾವತಿ ಮತ್ತು ಸೆಟಲ್‌ಮೆಂಟ್ ವ್ಯವಸ್ಥೆಗಳ ಕಾಯ್ದೆಯ ಸೆಕ್ಷನ್ 10ಎ ಅಡಿಯಲ್ಲಿ ಸೆಪ್ಟೆಂಬರ್ 14 ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆ ಹಾಗೂ ಸೆಪ್ಟೆಂಬರ್ 15 ರಂದು ಘೋಷಿಸಲಾದ ಎಂಡಿಆರ್ ಚೌಕಟ್ಟನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ₹2,000 ಮೇಲ್ಪಟ್ಟ ಪಿ2ಎಂ (P2M) ವಹಿವಾಟುಗಳಿಗೆ ಶೇ 0.4 ರಷ್ಟು ಎಂಡಿಆರ್ ವಿಧಿಸುವುದು, ₹75,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ₹300 ರಂತೆ ಶುಲ್ಕವನ್ನು ಮಿತಿಗೊಳಿಸುವುದು ಹಾಗೂ ವಿವಿಧ ವಲಯಗಳಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.ಪಾವತಿ ಮೂಲಸೌಕರ್ಯದ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಸರ್ಕಾರದ ಉದ್ದೇಶವನ್ನು ತಾವು ವಿರೋಧಿಸುವುದಿಲ್ಲವಾದರೂ, ಯಾವುದೇ ಅಧಿಕೃತ ದಾಖಲೆಗಳು, ಪ್ರಾಯೋಗಿಕ ಅಧ್ಯಯನಗಳು, ಅಂಕಿಅಂಶಗಳು ಅಥವಾ ಸಮಾಲೋಚನೆಗಳಿಲ್ಲದೆ ಏಕಪಕ್ಷೀಯವಾಗಿ ಈ ಶುಲ್ಕ ಹೊರೆಯನ್ನು ಹೇರಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

₹2,000 ವರೆಗಿನ ವಹಿವಾಟಿಗೆ ಯಾವುದೇ ಶುಲ್ಕವಿಲ್ಲದೆ, ₹2,001 ಕ್ಕೆ ಶೇ 0.4 ರಷ್ಟು ಶುಲ್ಕ ವಿಧಿಸುವುದು ವರ್ತಕರಲ್ಲಿ ತಾರತಮ್ಯ ಮತ್ತು ಗೊಂದಲ ಸೃಷ್ಟಿಸುತ್ತದೆ ಎಂದು ತಿಳಿಸಲಾಗಿದೆ. ಈ ನಿರ್ಧಾರದ ಸಂಪೂರ್ಣ ದಾಖಲೆಗಳು, ಸಮಿತಿಯ ಅಧಿಕಾರ ವ್ಯಾಪ್ತಿ ಹಾಗೂ ತತ್ವಗಳನ್ನು ಬಹಿರಂಗಪಡಿಸುವಂತೆ ಮತ್ತು ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ ಈ ಚೌಕಟ್ಟನ್ನು ರದ್ದುಗೊಳಿಸುವಂತೆ ಅಥವಾ ಮರುಪರಿಶೀಲಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.ತಿಂಗಳಿಗೆ ₹1 ಲಕ್ಷದವರೆಗೆ UPI ಮೂಲಕ ಪಾವತಿ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ MDR ವಿನಾಯಿತಿ ನೀಡಿರುವುದಕ್ಕೂ ಸೂಕ್ತ ಅಂಕಿ-ಅಂಶ ಅಥವಾ ಅಧ್ಯಯನದ ಆಧಾರವನ್ನು ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ. ಹೊಸ ವ್ಯವಸ್ಥೆಯಲ್ಲಿ ಇಂತಹ ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ವರದಿಯಾಗಿದೆ.

ಗ್ರಾಹಕರ ಮೇಲೆ ಶುಲ್ಕ ಬೀಳುತ್ತದೆಯೇ?

ಹೊಸ ವ್ಯವಸ್ಥೆಯಲ್ಲಿ MDR ಅನ್ನು ಗ್ರಾಹಕರಿಂದ ನೇರವಾಗಿ ವಸೂಲಿ ಮಾಡಲಾಗುವುದಿಲ್ಲ. ಈ ಶುಲ್ಕವನ್ನು ಮರ್ಚೆಂಟ್ ಪಾವತಿಸಬೇಕಾಗಿದ್ದು, ಗ್ರಾಹಕರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸದಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಆದರೆ, ಈ ಶುಲ್ಕದ ಪರಿಣಾಮವಾಗಿ ವ್ಯಾಪಾರಿಗಳು ಬೆಲೆ ಹೆಚ್ಚಿಸಬಹುದು, ತಮ್ಮ ಕಾರ್ಯನಿರ್ವಹಣಾ ಬಂಡವಾಳದ ಮೇಲೆ ಪರಿಣಾಮ ಬೀಳಬಹುದು ಅಥವಾ UPI ಪಾವತಿಗಳನ್ನು ನಿರಾಕರಿಸುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಕಡಿಮೆ ಲಾಭಾಂಶದಲ್ಲಿ ಕಾರ್ಯನಿರ್ವಹಿಸುವ ವ್ಯಾಪಾರಿಗಳಲ್ಲಿ ವಹಿವಾಟುಗಳನ್ನು ವಿಭಜಿಸುವಂತಹ ಪ್ರವೃತ್ತಿಗೂ ಇದು ಕಾರಣವಾಗಬಹುದು ಎಂದು ಅರ್ಜಿದಾರರು ಹೇಳಿದ್ದಾರೆ.

ಬಹು ಹಂತದ ಶುಲ್ಕ ವ್ಯವಸ್ಥೆಗೂ ಆಕ್ಷೇಪ

₹2,000ಕ್ಕಿಂತ ಹೆಚ್ಚಿನ ಸಾಮಾನ್ಯ P2M ವಹಿವಾಟುಗಳಿಗೆ ಶೇ.0.4 MDR ಅನ್ವಯಿಸಿದರೆ, ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ ₹300 ಮಾತ್ರ ವಿಧಿಸಲಾಗುತ್ತದೆ. ಉದಾಹರಣೆಗೆ, ₹50,000ರ ವಹಿವಾಟಿಗೆ ₹200 MDR ಬಂದರೆ, ₹75,000ರ ವಹಿವಾಟಿಗೆ ₹300 ಆಗುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೂ ₹300ಕ್ಕಿಂತ ಹೆಚ್ಚಾಗುವುದಿಲ್ಲ. ಈ ಹಂತವಾರು ಶುಲ್ಕ ವ್ಯವಸ್ಥೆ ಸಮಾನ ಪರಿಸ್ಥಿತಿಯಲ್ಲಿರುವ ವ್ಯಾಪಾರಿಗಳ ನಡುವೆ ವ್ಯತ್ಯಾಸ ಉಂಟುಮಾಡುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಸಂವಿಧಾನದ ವಿಧಿಗಳ ಉಲ್ಲಂಘನೆ ಆರೋಪ

MDR ವಿಧಿಸುವ ಈ ವ್ಯವಸ್ಥೆ ಸಂವಿಧಾನದ ವಿಧಿ 14 ಮತ್ತು 19(1)(g)ಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಹಣಕಾಸು ಶುಲ್ಕಗಳನ್ನು ಕೇವಲ ಪತ್ರಿಕಾ ಪ್ರಕಟಣೆಗಳು, FAQಗಳು ಅಥವಾ ನೋಂದಾಯಿತವಲ್ಲದ ಸ್ಟೀರಿಂಗ್ ಸಮಿತಿಯ ನಿರ್ಧಾರಗಳ ಮೂಲಕ ಜಾರಿಗೊಳಿಸುವುದಕ್ಕೂ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.₹2,000 ಮಿತಿಯ ಮೇಲಿನ MDR ವ್ಯವಸ್ಥೆಯನ್ನು ರದ್ದುಪಡಿಸುವಂತೆ ಅಥವಾ ಪರ್ಯಾಯವಾಗಿ, ಪರಿಣಾಮದ ಕುರಿತು ಸಮಗ್ರ ಅಧ್ಯಯನ ನಡೆಸಿ, ಪಾರದರ್ಶಕ ಮರುಸಮಾಲೋಚನೆ ಪ್ರಕ್ರಿಯೆ ಕೈಗೊಳ್ಳುವಂತೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನ ಸ್ವತಂತ್ರ ಪರಿಶೀಲನೆ ನಡೆಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.ಇದೇ ವೇಳೆ, ಹೊಸ MDR ವ್ಯವಸ್ಥೆಯ ಉದ್ದೇಶ UPI ಪಾವತಿ ಮೂಲಸೌಕರ್ಯ, ಸೈಬರ್ ಭದ್ರತೆ, ನವೀನತೆ ಮತ್ತು ಗ್ರಾಹಕ ಸೇವೆಗಳಿಗೆ ಅಗತ್ಯವಾದ ಹೂಡಿಕೆಗೆ ಆರ್ಥಿಕ ವ್ಯವಸ್ಥೆ ರೂಪಿಸುವುದಾಗಿದೆ ಎಂದು ವರದಿಯಾಗಿದೆ.

You cannot copy content of this page

Exit mobile version