Home ಬೆಂಗಳೂರು ರೈತರಿಗೆ ಸಿಎಂ ರಿಯಲ್ ಎಸ್ಟೇಟ್ ಏಜೆಂಟ್‌ ರೀತಿ ಕಾಣುತ್ತಿದ್ದಾರೆ: 100 ದಿನಗಳ ಸಂಭ್ರಮಾಚರಣೆ ವಿರುದ್ಧ ಆರ್....

ರೈತರಿಗೆ ಸಿಎಂ ರಿಯಲ್ ಎಸ್ಟೇಟ್ ಏಜೆಂಟ್‌ ರೀತಿ ಕಾಣುತ್ತಿದ್ದಾರೆ: 100 ದಿನಗಳ ಸಂಭ್ರಮಾಚರಣೆ ವಿರುದ್ಧ ಆರ್. ಅಶೋಕ್ ವಾಗ್ದಾಳಿ

0

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವುದನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದು, ಸಾಮಾನ್ಯ ಜನರು ಹಾಗೂ ರೈತರಿಗೆ ಮುಖ್ಯಮಂತ್ರಿ ರಿಯಲ್ ಎಸ್ಟೇಟ್ ಏಜೆಂಟ್‌ ರೀತಿ ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ರೈತರಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಡಿ. ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್ ಥರ ಕಾಣಿಸುತ್ತಿದ್ದಾರೆ. ಲಾಲ್‌ಬಾಗ್, ಸ್ಯಾಂಕಿ ಕೆರೆ, ಹೆಬ್ಬಾಳ ಕೆರೆ, ಬಿಡದಿಯ 9,000 ಎಕರೆ ಹಾಗೂ ಆನೇಕಲ್‌ನ 3,000 ಎಕರೆ ನುಂಗಿ ಹಾಕುವುದನ್ನು ಬಿಟ್ಟರೆ ಇವರು ಬೇರೇನೂ ಮಾಡಿಲ್ಲ. ರಾಜ್ಯದಲ್ಲಿ ಬರಗಾಲ ತಲೆದೋರಿ ನಾಲ್ಕು ತಿಂಗಳು ಕಳೆದರೂ ಜನರಿಗೆ ಯಾವುದೇ ಪರಿಹಾರ ದೊರೆತಿಲ್ಲ,” ಎಂದು ಆರೋಪಿಸಿದರು. ಜನರು ತಿರಸ್ಕರಿಸುವ ಭಯದಿಂದಲೇ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗಳನ್ನು ಮುಂದೂಡುತ್ತಿದೆ ಎಂದು ಅವರು ದೂರಿದರು.

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ನೀಡುತ್ತಿದ್ದ 4,000 ರೂಪಾಯಿ ಪ್ರೋತ್ಸಾಹಧನವನ್ನು ಕಸಿದುಕೊಳ್ಳಲಾಗಿದೆ ಮತ್ತು ರೈತ ವಿದ್ಯಾನಿಧಿ ಯೋಜನೆಯನ್ನು ರದ್ದುಗೊಳಿಸಿ ರೈತರಿಗೆ ದ್ರೋಹ ಬಗೆಯಲಾಗಿದೆ ಎಂದು ಅಶೋಕ್ ಕಿಡಿಕಾರಿದರು. ಪ್ರಚಾರದಲ್ಲಿ ನಂಬರ್ ಒನ್ ಮತ್ತು ಸಾಧನೆಯಲ್ಲಿ ಶೂನ್ಯವಾಗಿರುವ ಈ ಸರ್ಕಾರದಲ್ಲಿ ಈಗಾಗಲೇ ಒಬ್ಬ ಸಚಿವರು ರಾಜೀನಾಮೆ ನೀಡಿದ್ದಾರೆ; ಹೀಗಿರುವಾಗ ಸಂಭ್ರಮಾಚರಣೆಯ ಬದಲು ಸಂತಾಪ ಸಭೆ ನಡೆಸಬೇಕಿತ್ತು ಎಂದು ಅವರು ಟೀಕಿಸಿದರು.

ಬೆಂಗಳೂರಿನ ನೈರ್ಮಲ್ಯ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ‘ಕಸ ಮುಕ್ತ ನಗರ’ ಎಂಬ ಭರವಸೆ ಹುಸಿಯಾಗಿದ್ದು, ಸಿಎಂ ಮನೆ ಮುಂದೆಯೇ ಕಸದ ರಾಶಿ ಬಿದ್ದಿದೆ ಹಾಗೂ ಫ್ಲ್ಯಾಟ್ ನಿವಾಸಿಗಳು ಕಸ ವಿಲೇವಾರಿಗೆ ಪಾವತಿಸುತ್ತಿದ್ದ 40 ರೂಪಾಯಿ ಶುಲ್ಕವನ್ನು 400 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

You cannot copy content of this page

Exit mobile version