ಬೆಂಗಳೂರು : ಮಂಗಳವಾರ ರಾತ್ರಿ (ಜುಲೈ ೨೬) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರಿಗೆ ನಮ್ಮ ಸರ್ಕಾರ ನ್ಯಾಯ ಕೊಡಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂ. ಪಿ. ರೇಣುಕಾಚಾರ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಪದೇ ಪದೇ ರಾಜ್ಯದಲ್ಲಿ ಹಿಂದೂಗಳ ಕೊಲೆಯಾಗುತ್ತಿದ್ದು ಇದರ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಕೇವಲ ಸೊಶಿಯಲ್ ಮೀಡಿಯಾದಲ್ಲಿ ಓಂ ಶಾಂತಿ ಎಂದು ಸಂತಾಪ ಸೂಚಿಸಿದರೆ ಏನೂ ಪ್ರಯೋಜನವಿಲ್ಲವೆಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆಯುವ ಜೊತೆಗೆ ದುಷ್ಕರ್ಮಿಗಳಿಗೆ ನಡುರಸ್ತೆಯಲ್ಲಿಯೇ ಎನ್ ಕೌಂಟರ್ ಮಾಡಬೇಕೆಂಬ ಪ್ರಚೋದನಾ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ಸರ್ಕಾರದ ವಿರುದ್ಧವೇ ಹರಿಹಾಯ್ದಿರುವ ರೇಣುಕಾಚಾರ್ಯ ಪೋಲಿಸ್ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಸಮಾಜವನ್ನು ಉಳಿಸಲು ಸರ್ಕಾರ ನಿರ್ದಕ್ಷಿಣ್ಯ ಕ್ರಮ ತೆಗೆದುಕೊಂಡರೆ ಮಾತ್ರ ಬಿಜೆಪಿಯಲ್ಲಿ ಉಳಿಯುತ್ತೇನೆ, ಇಲ್ಲವಾದರೆ ತಕ್ಷಣವೇ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
“ನನಗೆ ವೈಯಕ್ತಿಕವಾಗಿ ಅಧಿಕಾರಕ್ಕಿಂತ ನಮ್ಮ ಹಿಂದೂ ಕಾರ್ಯಕರ್ತರ ರಕ್ಷಣೆಯೇ ಮುಖ್ಯ, ಆದ್ದರಿಂದ ನಮ್ಮ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಾನು ನನ್ನ ಮತ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಯೋಚಿಸುತ್ತಿದ್ದೇನೆ” : ಎಂ. ಪಿ. ರೇಣುಕಾಚಾರ್ಯ