ಬೆಂಗಳೂರು: ಕಚೇರಿಯೊಳಗೆ ಮಹಿಳೆಗೆ ಮುತ್ತಿಟ್ಟು, ಚೇರ್ ಮೇಲೆ ಕೂರಿಸಿಕೊಂಡಿರುವ ರಾಸಲೀಲೆ ವಿಡಿಯೋ ಭಾರಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರರಾವ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ರಾಮಚಂದ್ರರಾವ್ ಅವರ ಅಸಭ್ಯ ವರ್ತನೆಯ ವಿಡಿಯೋ ವ್ಯಾಪಕವಾಗಿ ಹರಡಿದ ಬೆನ್ನಲ್ಲೇ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ರಾಮಚಂದ್ರರಾವ್ ಅವರು ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ಯತ್ನಿಸಿದ್ದರಾದರೂ, ಅವರಿಗೆ ಭೇಟಿಗೆ ಅವಕಾಶ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.
ಇದೀಗ ಡಿಜಿಪಿ ರಾಮಚಂದ್ರರಾವ್ ಅವರು ಅಜ್ಞಾತ ಸ್ಥಳದಲ್ಲಿ ಇದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಚರ್ಚೆ ನಡೆಸಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಕಾನೂನುಗಿಂತ ಯಾರು ದೊಡ್ಡವರಲ್ಲ. ತಪ್ಪು ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದರು.
ಸಿಎಂ ಅವರ ಹೇಳಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರ ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ಕ್ರಮಗಳ ಕುರಿತು ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
