Saturday, June 15, 2024

ಸತ್ಯ | ನ್ಯಾಯ |ಧರ್ಮ

ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ: ರಾಹುಲ್‌ ದ್ರಾವಿಡ್‌ ಪಾತ್ರ ಎಷ್ಟು ಗೊತ್ತೇ?


ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ಫೈನಲ್‌ ಗೇರಿದೆ. ಎಲ್ಲರ ಬಾಯಲ್ಲೂ ಕೊಹ್ಲಿ-ರೋಹಿತ್‌, ಬುಮ್ರಾ-ಶಮಿ, ರಾಹುಲ್-ಶ್ರೇಯಸ್‌ ಹೆಸರುಗಳು ಕೇಳಿಬರುತ್ತಿವೆ. ನಿಜ, ಈ ಬಾರಿಯ ಭಾರತ ಕ್ರಿಕೆಟ್‌ ತಂಡದ ಪ್ರತಿಯೊಬ್ಬ ಆಟಗಾರನೂ ಎಲ್ಲರ ಮನಗೆದ್ದಿದ್ದಾರೆ. ಅವರೆಲ್ಲರೂ ಒಂದು ತಂಡವಾಗಿ ಆಡಿದ್ದಾರೆ. ಅಸಾಧ್ಯಗಳನ್ನು ಸಾಧಿಸಿದ್ದಾರೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಗೆದ್ದಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸತತ ಹತ್ತು ಗೆಲುವುಗಳು ಅಷ್ಟು ಸುಲಭವಲ್ಲ. ಎಲ್ಲ ವಿಭಾಗಗಳಲ್ಲೂ ಬಲಶಾಲಿಯಾಗಿರುವ ತಂಡವಷ್ಟೇ ಹೀಗೆ ಗೆಲ್ಲಲು ಸಾಧ್ಯ

ಆದರೆ ಕೇವಲ ಆಡುವ ಹನ್ನೊಂದು ಆಟಗಾರರಿಂದ ಇದೆಲ್ಲ ಸಾಧನೆ ಸಾಧ್ಯವೇ? ಭಾರತ ತಂಡ ಇವತ್ತು ಎದುರಾಳಿಗಳಿಗೆ ನಡುಕ ಹುಟ್ಟಿಸುವ ಪಡೆಯಾಗಿ ನಿಲ್ಲಲು ಮುಖ್ಯಕಾರಣ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್.‌ ಹೀಗಾಗಿ ಭಾರತ ತಂಡದ ಸಾಧನೆಯನ್ನು ದ್ರಾವಿಡ್‌ ಹೆಸರು ಹೇಳದೇ ಶ್ಲಾಘಿಸುವುದು ಅನ್ಯಾಯ. ಹಾಗೆ ನೋಡಿದರೆ ದ್ರಾವಿಡ್‌ ಎಂದೂ ತನ್ನ ಬಗ್ಗೆ ತಾನು ಕೊಚ್ಚಿಕೊಂಡು ಮಾತನಾಡಿದ್ದಿಲ್ಲ. ತಂಡದ ನಾಯಕನನ್ನು ಹಿಂದೆ ಸರಿಸಿ ಎಲ್ಲ ತನ್ನಿಂದನೇ ಆಗುತ್ತಿದೆ ಎಂಬಂತೆ ಫೋಜು ಕೊಟ್ಟವರೂ ಅಲ್ಲ. ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ, ತಂಡದ ಗೆಲುವಿಗೆ ಏನೇನು ಸ್ಟ್ರಾಟರ್ಜಿಗಳನ್ನು ಮಾಡಬೇಕೋ ಮಾಡುತ್ತ, ಆಟಗಾರರನ್ನು ತಿದ್ದುತ್ತ ವಿಶ್ವಕಪ್‌ ಗೆಲ್ಲುವ ಹಂತಕ್ಕೆ ತಂದುನಿಲ್ಲಿಸಿರುವ ದ್ರಾವಿಡ್‌ ನಿಜವಾದ ಅರ್ಥದಲ್ಲಿ ನಿಸ್ವಾರ್ಥಿ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಕಾಲಕ್ಕೆ ದ್ರಾವಿಡ್‌ ʻದಿ ವಾಲ್‌ʼ (ಗೋಡೆ) ಎಂದೇ ಹೆಸರಾದವರು. ಸಾಧಾರಣವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ದ್ರಾವಿಡ್‌ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡುತ್ತಿದ್ದವರು. ಯಾರನ್ನು ಬೇಕಾದರೂ ಔಟ್‌ ಮಾಡಬಹುದು, ಆದರೆ ರಾಹುಲ್‌ ಅವರನ್ನಲ್ಲ ಎಂದು ಇತರೆ ದೇಶಗಳ ಬೌಲರ್‌ ಗಳು ಪರಿತಪಿಸುವಷ್ಟು ಅವರು ಕ್ರೀಜ್‌ ಗೆ ಅಂಟಿ ನಿಲ್ಲುತ್ತಿದ್ದರು. 2011ರಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಾಗ ಅತ್ಯಂತ ಹೀನಾಯವಾಗಿ 4-0 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಸೋತಿತ್ತು. ಆದರೆ ರಾಹುಲ್‌ ದ್ರಾವಿಡ್‌ ಆ ಸರಣಿಯಲ್ಲಿ ಗಳಿಸಿದ ರನ್‌ ಗಳ ಸಂಖ್ಯೆ 602! ಛಲ ಬಿಡದೆ ಹೋರಾಡುವುದು ರಾಹುಲ್‌ ಸ್ವಭಾವ.

ದ್ರಾವಿಡ್‌ ಕೋಚ್‌ ಹುದ್ದೆಗೆ ದಿಢೀರನೇ ಬರಲಿಲ್ಲ. ಅದಕ್ಕೆ ಅವರು ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದರು. ಮೊದಲು ಅವರು 2016ರಲ್ಲಿ ಅಂಡರ್‌-19 ಭಾರತ ತಂಡಕ್ಕೆ ಕೋಚ್‌ ಆದರು. ಆ ಹುದ್ದೆಗೆ ಅಂಥ ಡಿಮ್ಯಾಂಡೇನೂ ಇರಲಿಲ್ಲ. ಆದರೆ ದ್ರಾವಿಡ್‌ ಹೊಸ ತಲೆಮಾರಿನ ಕ್ರಿಕೆಟಿಗರನ್ನು ತಯಾರು ಮಾಡುವ ಕಾರ್ಯದಲ್ಲಿ ತಾವೇ ಆಸಕ್ತಿ ವಹಿಸಿ ಈ ಹುದ್ದೆಗೆ ಬಂದಿದ್ದರು. ಈಗ ಭಾರತ ಕ್ರಿಕೆಟ್‌ ತಂಡದಲ್ಲಿ ಆಡುತ್ತಿರುವ ಹಲವು ಆಟಗಾರರು ದ್ರಾವಿಡ್‌ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. ಮೂರು ವರ್ಷಗಳ ಕಾಲ ಹೊಸ ಹುಡುಗರಿಗೆ ತರಬೇತಿ ನೀಡಿದ ನಂತರ ದ್ರಾವಿಡ್‌ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ (ಎನ್‌ ಸಿ ಎ) ನಿರ್ದೇಶಕರಾಗಿ ಬಂದರು. ಎನ್.ಸಿ.ಎ ಒಂದು ಬಗೆಯಲ್ಲಿ ಆಟಗಾರರಿಗೆ ಸಂಜೀವಿನಿ ಇದ್ದಂತೆ. ಗಾಯಗೊಂಡವರು, ಫಿಟ್ನೆಸ್‌ ಕಳೆದುಕೊಂಡವರು ಇಲ್ಲಿ ಬಂದು ಪರಿಪೂರ್ಣವಾಗಿ ಸಿದ್ಧರಾಗುತ್ತಾರೆ. ಎನ್‌.ಸಿ.ಎ ಯನ್ನು ಸಮರ್ಥವಾಗಿ ಕಟ್ಟುವಲ್ಲಿ ದ್ರಾವಿಡ್‌ ಯಶಸ್ವಿಯಾದರು.

ಇದಾದ ನಂತರವೇ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್‌ ಆದರು. ಅವರು ಕೋಚ್‌ ಆದಾಗ ವಿರಾಟ್‌ ಕೊಹ್ಲಿ ತಂಡದ ನಾಯಕರಾಗಿದ್ದರು. ಆದರೆ ಕೊಹ್ಲಿಯನ್ನು ಒಂದು ಬಗೆಯಲ್ಲಿ ಅಪಮಾನಿಸಿ ನಾಯಕತ್ವದಿಂದ ಇಳಿಯುವಂತೆ ಮಾಡಿತು ಬಿಸಿಸಿಐ. ರೋಹಿತ್‌ ಶರ್ಮಾ ನಾಯಕರಾದರು. ಇಂಥ ಸಂದರ್ಭದಲ್ಲಿ ತಂಡವನ್ನು ಕಟ್ಟುವುದು ಕಷ್ಟದ ಕೆಲಸ. ದ್ರಾವಿಡ್‌ ಸವಾಲಾಗಿ ತೆಗೆದುಕೊಂಡು ಸತತ ಶ್ರಮವಹಿಸಿ ತಂಡ ಕಟ್ಟುತ್ತ ಹೋದರು. ಹೊಸಹೊಸ ಪ್ರಯೋಗಗಳನ್ನು ಮಾಡಿದರು. ಫಾರ್ಮ್‌ ಕಳೆದುಕೊಂಡಿದ್ದ ಕೆ.ಎಲ್.ರಾಹುಲ್‌ ಕೈಗೆ ಗ್ಲೌಸ್‌ ಕೊಟ್ಟು ವಿಕೆಟ್‌ ಕೀಪಿಂಗ್‌ ಗೆ ಹಚ್ಚಿದರು. ತಂಡದ ನಾಯಕ ರೋಹಿತ್‌ ಶರ್ಮಾ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡರು. ಭಾರತ ತಂಡದ ಡ್ರೆಸಿಂಗ್‌ ರೂಮ್‌ ಲವಲವಿಕೆಯಿಂದ ತುಂಬಿ ತುಳುಕಿತು. ದ್ರಾವಿಡ್‌ ಎಲ್ಲರಿಗೂ ಸ್ಪೂರ್ತಿಯಾಗಿ ನಿಂತರು.

ದ್ರಾವಿಡ್‌ ಎಂದರೆ ಹಾಗೆಯೇ. ಸದ್ದುಗದ್ದಲವಿಲ್ಲದೆ ತಮ್ಮ ಕೆಲಸ ತಾವು ಮಾಡುವವರು. ಅವರು ಜೋರಾಗಿ ಮಾತಾಡಿದ್ದನ್ನು ನೋಡಿದವರೇ ವಿರಳ. ಎಲ್ಲಿ ಯಾವಾಗ ಎಷ್ಟು ಮಾತಾಡಬೇಕು ಎಂಬುದು ಅವರಿಗೆ ಗೊತ್ತು. ಅಷ್ಟೆಲ್ಲ ದೊಡ್ಡ ಸಾಧನೆ ಮಾಡಿಯೂ ಅವರು ಎಲೆಮರೆಯ ಕಾಯಿಯಂತೆ ಉಳಿದವರು. ಈಗಲೂ ಅಷ್ಟೆ. ಭಾರತ ವಿಶ್ವಕಪ್‌ ಗೆದ್ದು ನಿಂತಾಗ ಅವರು ಇದು ನನ್ನ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಮೀಡಿಯಾಗಳ ಕಣ್ಣಿಗೂ ಪದೇಪದೇ ಬೀಳುವುದಿಲ್ಲ. ಅವರು ಹಿನ್ನೆಲೆಯಲ್ಲೇ ನಿಂತು ಸಂಭ್ರಮಿಸುವ ಜೀವ. ದ್ರಾವಿಡ್‌ ಅಂದರೆ ಹಾಗೆಯೇ, ʻಕಾಣ್ತಿದೆ, ಆದರೆ ಕಾಣಾಕಿಲ್ಲʼ!

Related Articles

ಇತ್ತೀಚಿನ ಸುದ್ದಿಗಳು