ಲೋಕಸಭೆ ಕಲಾಪದ ಮೊದಲ ದಿನವೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನರೇಂದ್ರ ಮೋದಿ ಕಡೆಗೆ ಸಂವಿಧಾನದ ಪ್ರತಿ ತೋರಿಸುವ ಮೂಲಕ ‘ನಾವು ಸಂವಿಧಾನದ ಪರ’ ಎಂಬ ಸಂದೇಶ ರವಾನಿಸಿದ್ದಾರೆ. ಮೊದಲ ದಿನ ನೂತನ ಸಂಸದರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮೊದಲು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೇ ಇದು ನಡೆದಿದೆ.
ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಮಾಣ ವಚನ ಸ್ವೀಕರಿಸಲು ಕರೆಯಲಾಯಿತು. ವಾರಣಾಸಿ ಕ್ಷೇತ್ರದಿಂದ ಆಯ್ಕೆಯಾದ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆಯೇ, ರಾಹುಲ್ ಗಾಂಧಿ ತಾವು ಕುಳಿತ ಜಾಗದಿಂದಲೇ ಸಂವಿಧಾನ ಪ್ರತಿ ತೋರಿಸಿ ನರೇಂದ್ರ ಮೋದಿಗೆ ಮುಜುಗರ ತರಿಸಿದ್ದಾರೆ.
ಕಲಾಪ ಆರಂಭಕ್ಕೆ ಮುನ್ನ ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸಿ ಎಂದು ಪಾರ್ಲಿಮೆಂಟ್ ಬಳಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಎಲ್ಲಾ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸಂವಿಧಾನ ಹಿಡಿದು ಪ್ರತಿಭಟನೆ ನಡೆಸಿದ್ದರು.
ಸಂಸತ್ ನ ಒಳಗೂ ಮೋದಿ ವಿರುದ್ಧ ಸಂವಿಧಾನ ಪುಸ್ತಕ ಪ್ರದರ್ಶಿಸುವ ಮೂಲಕ ನಾವು ಪ್ರಜಾಪ್ರಭತ್ವ ಉಳಿಸಲು ಬಂದಿದ್ದೇವೆ ಎಂದು ರಾಹುಲ್ ಸೂಚನೆ ನೀಡಿದರು. ಆದರೆ ಮೋದಿ ರಾಹುಲ್ ಕಡೆ ಕಿಡಿ ನೋಟ ಬೀರಿ ಪ್ರಮಾಣವಚನ ಸ್ವೀಕರಿಸಲು ತೆರಳಿದ್ದು ಇಂದಿನ ಸದನ ಸ್ವಾರಸ್ಯ ವಿಚಾರವಾಗಿದೆ.
ಕಳೆದ ಅವಧಿಯಲ್ಲಿ ನರೇಂದ್ರ ಮೋದಿ ಸಂಪುಟದ ಸಚಿವರು ಹಾಗೂ ಅನೇಕ ಬಿಜೆಪಿ ಸಂಸದರು ಸಂವಿಧಾನ ಬದಲಾಯಿಸಿಯೇ ತೀರುತ್ತೇವೆ ಎಂದು ಉದ್ಧಟತನದ ಮಾತನ್ನಾಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಭಾರತ್ ಐಕ್ಯತಾ ಯಾತ್ರೆ”ಯುದ್ದಕ್ಕೂ ಸಂವಿಧಾನ ಪ್ರತಿ ಹಿಡಿದುಕೊಂಡೇ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಅಷ್ಟೇ ಅಲ್ಲದೇ ತಮ್ಮ ಚುನಾವಣಾ ಪ್ರಚಾರದುದ್ದಕ್ಕೂ ನರೇಂದ್ರ ಮೋದಿ ವಿರುದ್ಧದ ತಮ್ಮ ಭಾಷಣಗಳಲ್ಲಿ ಸಂವಿಧಾನ ಪ್ರತಿಯ ಪ್ರದರ್ಶನ ಮಾಡುವ ಮೂಲಕ ನಾವು ಸಂವಿಧಾನ ಉಳಿಸಲು ಬರುತ್ತಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದರು. ಅದು ಸಂಸತ್ ಅಧಿವೇಶನದ ಸಂದರ್ಭದಲ್ಲೂಮುಂದುವರೆದಿರುವುದು ವಿಶೇಷ.