ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಪಕ್ಷದ ಶಾಸಕರನ್ನು “ಖರೀದಿ” ಮಾಡಿದ್ದಾರೆ ಮತ್ತು ಮಧ್ಯಪ್ರದೇಶದಲ್ಲಿ ಸರ್ಕಾರವನ್ನೇ “ಕದಿಯುತ್ತಿದ್ದಾರೆ” ಎಂದು ಕಾಂಗ್ರೆಸ್ ಹಿರಿಯ ಸಂಸದ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಕಮಲನಾಥ್ ನೇತೃತ್ವದ ಹಿಂದಿನ ಅವಧಿಯ ಸರ್ಕಾರದಲ್ಲಿ 22 ಶಾಸಕರನ್ನು ಖರೀದಿ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ನಾಯಕರು ಮುಂದಾಗಿದ್ದರು. ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣವಾದ 22 ಶಾಸಕರ ಬಂಡಾಯವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಜನಸಾಮಾನ್ಯರ ಧ್ವನಿಯನ್ನು ಬಿಜೆಪಿ “ನುಚ್ಚು ನೂರು ಮಾಡಿದೆ” ಎಂದು ಹೇಳಿದ್ದಾರೆ.
2018 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 114 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ವತಂತ್ರರ ಬೆಂಬಲವನ್ನು ಪಡೆದ ನಂತರ ಸರ್ಕಾರವನ್ನು ರಚಿಸಿತು. ಆದರೆ, ಕಮಲ್ ನಾಥ್ ಮುಖ್ಯಮಂತ್ರಿಯಾದ 15 ತಿಂಗಳ ನಂತರ 22 ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನವಾಯಿತು. ನಂತರ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು.
ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ “ಐದು ವರ್ಷಗಳ ಹಿಂದೆ ನೀವೆಲ್ಲರೂ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದೀರಿ. ಆದರೆ ಬಿಜೆಪಿ ನಾಯಕರಾದ ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಮಿತ್ ಶಾ ಸೇರಿ ನಿಮ್ಮಿಂದ ಚುನಾಯಿತರಾದ ಶಾಸಕರುಗಳನ್ನೇ ಕದ್ದು ಸರ್ಕಾರ ರಚಿಸಿದ್ದಾರೆ” ಎಂದು ಅವರು ಮಧ್ಯಪ್ರದೇಶದ ವಿದಿಶಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.
“ಶಾಸಕರ ಖರೀದಿಗೆ ಕೋಟ್ಯಂತರ ರೂಪಾಯಿ ವ್ಯಯಿಸಿ, ನಿಮ್ಮ ನಿರ್ಧಾರ, ನಿಮ್ಮ ಹೃದಯದ ಧ್ವನಿಯನ್ನು ಬಿಜೆಪಿ ನಾಯಕರು, ಪ್ರಧಾನಿ ಪುಡಿ ಮಾಡಿದ್ದಾರೆ. ನಿಮಗೆ ಮೋಸ ಮಾಡಲಾಗಿದೆ” ಎಂದು ಅವರು ಎಎನ್‌ಐಗೆ ತಿಳಿಸಿದ್ದಾರೆ.
“ಮಧ್ಯಪ್ರದೇಶದಲ್ಲಿ 145 ರಿಂದ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಇಲ್ಲಿ ಬಲಿಷ್ಠ ಸರ್ಕಾರ ರಚಿಸಲಿದೆ. ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಕರ್ನಾಟಕದಲ್ಲಿ ನಾವು ಅವರನ್ನು ಓಡಿಸಿದ್ದೇವೆ. ಹಿಮಾಚಲ ಪ್ರದೇಶದಲ್ಲಿ ನಾವು ಅವರನ್ನು ಓಡಿಸಿದ್ದೇವೆ – ಆದರೆ ದ್ವೇಷದಿಂದ ಅಲ್ಲ. ನಾವು ‘ನಫ್ರತ್ ಕಾ ಬಜಾರ್’ನಲ್ಲಿ ‘ಮೊಹಬ್ಬತ್ ಕಿ ದುಕಾನ್’ ತೆರೆದಿದ್ದೇವೆ. ನಾವು ಅಹಿಂಸೆಯ ಸೈನಿಕರು, ನಾವು ಅವರನ್ನು ಪ್ರೀತಿಯಿಂದ ಓಡಿಸಿದೆವು, ಅವರಿಗೆ ಇಲ್ಲಿ ಸ್ಥಾನವಿಲ್ಲ ಎಂಬುದನ್ನು ಜನರೇ ಸಾಭೀತುಪಡಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.