ದೆಹಲಿ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ‘ಶುದ್ಧೀಕರಣ’ ಮಾಡಿದವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಬೇಕೆಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ರಾಜಸ್ಥಾನದಲ್ಲಿ ದಲಿತ ಸಂಸದರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬಿಜೆಪಿ ಮುಖಂಡರು ಶುದ್ಧೀಕರಣ ನಡೆಸುತ್ತಾರೆ; ತಮ್ಮ ಇಡೀ ಜೀವನವನ್ನೇ ದೇಶ ಮತ್ತು ಸಂವಿಧಾನಕ್ಕಾಗಿ ಮುಡಿಪಾಗಿಟ್ಟಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆ ನಡೆಸಿದ ಸ್ಥಳದಲ್ಲೂ ಇಂತಹ ಆಚರಣೆಗಳನ್ನು ಮಾಡಲಾಗುತ್ತದೆ. ಇಂತಹ ಅಸ್ಪೃಶ್ಯತೆಯ ಕೃತ್ಯಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ನಿರಂತರವಾಗಿ ನಡೆಸುತ್ತಿದ್ದು, ಇದು ಸಂವಿಧಾನದ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ.
‘ಶುದ್ಧೀಕರಣ’ ಎಂಬುದು ಅಸ್ಪೃಶ್ಯತೆಯ ಇನ್ನೊಂದು ಮುಖವಾಗಿದ್ದು, ದಲಿತರು ಅಪವಿತ್ರರು ಮತ್ತು ಮುಟ್ಟಿಸಿಕೊಳ್ಳಬಾರದವರು ಎಂಬ ಸಂದೇಶವನ್ನು ಇಂತಹ ಕೃತ್ಯಗಳ ಮೂಲಕ ರವಾನಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ತಾವು ಎಲ್ಲ ಸಮುದಾಯಗಳ ಹಾಗೂ ಇಡೀ ದೇಶದ ಪ್ರಧಾನಿ ಎಂದು ಹೇಳಿಕೊಳ್ಳುತ್ತಾರೆ, ಆದರೆ ಅವರ ಪಕ್ಷದ ನಾಯಕರೇ ಇಂತಹ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ; ಹೀಗಾಗಿ ಆರೋಪಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಿ ಖರ್ಗೆ ಅವರಿಗೆ ನ್ಯಾಯ ಕೊಡಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರೊಬ್ಬರ ವಿಷಯವಲ್ಲ, ಬದಲಿಗೆ ದೇಶದ ಪ್ರತಿಯೊಬ್ಬ ದಲಿತ ನಾಗರಿಕನ ಹಾಗೂ ಮಹಿಳೆಯ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದು ತಿಳಿಸಿದ ರಾಹುಲ್ ಗಾಂಧಿ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೇ ಈ ಸ್ಥಿತಿ ಎದುರಾದರೆ ಸಾಮಾನ್ಯ ಶಾಲಾ ಮಕ್ಕಳ ಗತಿ ಏನು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಬಿಜೆಪಿಯ ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿ, ಹಳೆಯ ಅಥವಾ ಹೊಸ ಸಂಘಟನೆ ನಮಗೆ ಮುಖ್ಯವಲ್ಲ, ನಮ್ಮ ಹೋರಾಟವು ಸಂವಿಧಾನ ರಕ್ಷಣೆ ಮತ್ತು ಆರ್‌ಎಸ್‌ಎಸ್-ಬಿಜೆಪಿ ಸಿದ್ಧಾಂತದ ವಿರುದ್ಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ಉತ್ತರಾಖಂಡದ ಸಚಿವ ಖಜಾನ್ ದಾಸ್, ಹಲ್ದ್ವಾನಿಯಲ್ಲಿ ನಡೆದ ಘಟನೆಯಿಂದ ಬಿಜೆಪಿ ದೂರವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಈ ವಿಚಾರದಲ್ಲಿ ದಲಿತ ಸಮುದಾಯವನ್ನು ದಾರಿತಪ್ಪಿಸಲು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದು, ಮೈದಾನದಲ್ಲಿ ಯಾವುದೇ ಸಂಘಟನೆ ಧಾರ್ಮಿಕ ಹವನ ನಡೆಸಿದ್ದರೆ ಅದು ಅವರ ವೈಯಕ್ತಿಕ ವಿಚಾರವೇ ಹೊರತು ಅದಕ್ಕೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಪ್ರತ್ಯಾರೋಪ ಮಾಡಿದ್ದಾರೆ.
