ಅಹ್ಮದಾಬಾದ್: ಮುಂದಿನ ತಿಂಗಳು ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬುಧವಾರ ಅಹ್ಮದಾಬಾದ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಸದ್ದಾಂ ಹುಸೇನ್ ಅವರಂತೆ ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಗುಜರಾತ್ ಗೆ ಭೇಟಿ ನೀಡಿದ್ದನ್ನು ಪ್ರಶ್ನಿಸಿದ ಶರ್ಮಾ ಅವರು, ʼರಾಹುಲ್ ಗಾಂಧಿ ಗುಜರಾತ್ ನಲ್ಲಿ ಅದೃಶ್ಯರಾಗಿದ್ದಾರೆ. ಆಗಾಗ ಸಂದರ್ಶಕ ಬೋಧಕರಂತೆ ರಾಜ್ಯಕ್ಕೆ ಬರುತ್ತಾರೆ. ಅವರು ಹಿಮಾಚಲ ಪ್ರದೇಶದಲ್ಲೂ ಪ್ರಚಾರ ಮಾಡಲಿಲ್ಲ. ಏಕೆಂದರೆ ಅವರಿಗೆ ಸೋಲಿನ ಭಯ ಇರಬಹುದು, ಹಾಗಾಗಿಯೇ ಅವರು ಚುನಾವಣೆಗಳಿಲ್ಲದ ಸ್ಥಳಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಬಾಲಿವುಡ್ ತಾರೆಯರಿಗೆ ಹಣ ಪಾವತಿಸಿರಬೇಕು ಎಂದು ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ, ಇದು ಯಾತ್ರೆಗೆ ಕೈಜೋಡಿಸಿದ ನಟರಾದ ಪೂಜಾ ಭಟ್ ಮತ್ತು ಅಮೋಲ್ ಪಾಲೇಕರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಧನ್ಸುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಶ್ರದ್ಧಾ ವಾಕರ್ ಮತ್ತು ಅಫ್ತಾಬ್ ಅಮೀನ್ ಅವರನ್ನು ಉಲ್ಲೇಖಿಸಿ, ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ತನ್ನ ಲಿವಿಂಗ್ ಟುಗೆದರ್ ಪಾರ್ಟ್ನರ್ ಶ್ರದ್ಧಾ ವಾಕರ್ ಅವರನ್ನು ಕೊಂದ ಆರೋಪ ಎದುರಿಸುತ್ತಿರುವ ಅಫ್ತಾಬ್ ಅಮೀನ್ ಪೂನಾವಾಲಾ ಅವರು ವಿಚಾರಣೆಯ ಸಮಯದಲ್ಲಿ, ತಾವು ಕೇವಲ ಹಿಂದೂ ಹುಡುಗಿಯರೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಲವ್ ಜಿಹಾದ್ ಅನ್ನು ನಿಗ್ರಹಿಸಲು ಕಠಿಣ ಕಾನೂನು ಜಾರಿಗೆ ತರುವಂತೆ ಕರೆ ನೀಡಿದ್ದರು.