ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಉತ್ತರಾಖಂಡದ ಯುವಕ ಮೊಹಮ್ಮದ್ ದೀಪಕ್ ಅವರನ್ನು ಭೇಟಿಯಾಗಿ, ಅವರೊಂದಿಗಿನ ಸಂಭಾಷಣೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಮಾನತೆ ಮತ್ತು ಏಕತೆಯ ಸಂದೇಶವನ್ನು ಸಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರವನ್ನು ಹಂಚಿಕೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕರು ಹಿಂದಿಯಲ್ಲಿ ಹೀಗೆ ಬರೆದಿದ್ದಾರೆ, “ಪ್ರತಿಯೊಬ್ಬ ಮನುಷ್ಯನೂ ಸಮಾನ. ಇದೇ ಭಾರತೀಯತೆ, ಇದೇ ಪ್ರೀತಿಯ ಅಂಗಡಿ (ಮೊಹಬ್ಬತ್ ಕಿ ದುಕಾನ್). ಉತ್ತರಾಖಂಡದ ನಮ್ಮ ಸಹೋದರ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದೆ, ಇಂತಹ ಏಕತೆ ಮತ್ತು ಧೈರ್ಯದ ಜ್ಯೋತಿ ಪ್ರತಿ ಭಾರತೀಯ ಯುವಕರಲ್ಲಿ ಬೆಳಗಬೇಕು.”
ಉತ್ತರಾಖಂಡದ ಕೋಟದ್ವಾರದಲ್ಲಿ ಮೊಹಮ್ಮದ್ ದೀಪಕ್ ಅವರು ವಿವಾದದ ಕೇಂದ್ರಬಿಂದುವಾದ ಕೆಲವು ವಾರಗಳ ನಂತರ ಈ ಭೇಟಿ ನಡೆದಿದೆ.
ಜನವರಿ 26 ರಂದು, ಕೋಟದ್ವಾರದ ಪಟೇಲ್ ಮಾರ್ಗದಲ್ಲಿರುವ ‘ಬಾಬಾ’ ಬಟ್ಟೆ ಅಂಗಡಿಯ 70 ವರ್ಷದ ಮಾಲೀಕ ವಕೀಲ್ ಅಹ್ಮದ್ ಅವರ ಮೇಲೆ ಅಂಗಡಿಯ ಹೆಸರನ್ನು ಬದಲಾಯಿಸುವಂತೆ ಒತ್ತಡ ಹೇರಲು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಯಕರ್ತರು, ಅಂಗಡಿ ಮಾಲೀಕರು ಮತ್ತು ಅವರ ಮಗನ ಸ್ನೇಹಿತ ದೀಪಕ್ ಕುಮಾರ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ದೀಪಕ್ ಕುಮಾರ್ ಅವರು ತಮ್ಮನ್ನು ಮೊಹಮ್ಮದ್ ದೀಪಕ್ ಎಂದು ಗುರುತಿಸಿಕೊಂಡು ಪ್ರತಿಭಟನಾಕಾರರನ್ನು ಅಲ್ಲಿಂದ ಹೊರಹೋಗುವಂತೆ ಕೇಳಿದ್ದರು.
ಜನವರಿ 31 ರಂದು ಕಾರ್ಯಕರ್ತರ ದೊಡ್ಡ ಗುಂಪು ಮತ್ತೆ ಅಹ್ಮದ್ ಅವರ ಅಂಗಡಿ ಮತ್ತು ಕುಮಾರ್ ಅವರ ಜಿಮ್ ಮುಂದೆ ಜಮಾಯಿಸಿ ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದಿದ್ದರು.
