ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಮಟ್ಟಹಾಕಲು ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಬುಧವಾರ ದೊಡ್ಡ ಯಶಸ್ಸು ಸಿಕ್ಕಿದೆ. ಶೋಪಿಯಾನ್‌ನ ಹಣ್ಣಿನ ತೋಟವೊಂದರಲ್ಲಿ ಅಡಗಿದ್ದ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಮೃತನನ್ನು ಲಷ್ಕರ್-ಎ-ತೊಯ್ಬಾ (LeT) ಉನ್ನತ ಕಮಾಂಡರ್ ಜಾಕಿರ್ ಅಹ್ಮದ್ ಘನಿ ಎಂದು ಗುರುತಿಸಲಾಗಿದೆ. ಈತನಿಗೆ ಪಹಲ್ಗಾಮ್ ಉಗ್ರರ ದಾಳಿಯೊಂದಿಗೆ ನಿಕಟ ಸಂಬಂಧವಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ.
ಶೋಪಿಯಾನ್‌ನ ಹಣ್ಣಿನ ತೋಟದಲ್ಲಿ ಉಗ್ರರು ನಡೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಇತ್ತೀಚೆಗೆ ಕಣ್ಗಾವಲು ಕ್ಯಾಮೆರಾಗಳಲ್ಲಿ ದಾಖಲಾಗಿದ್ದವು. ಇದರ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಪಡೆಗಳು ಜುಲೈ 3 ರಂದು ಜಂಟಿ ಕಾರ್ಯಾಚರಣೆ ಆರಂಭಿಸಿದ್ದವು. ಉಗ್ರರು ಅಡಗಿದ್ದ ಪ್ರದೇಶವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು ತಲಾಷ್ ನಡೆಸಲಾಗಿತ್ತು.
ಕಳೆದ ಐದು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಈ ಕಾರ್ಯಾಚರಣೆಯಲ್ಲಿ ಬುಧವಾರ ಮುಂಜಾನೆ ಎನ್‌ಕೌಂಟರ್ ನಡೆದಿದೆ. ಭದ್ರತಾ ಪಡೆಗಳನ್ನು ಗಮನಿಸಿದ ಉಗ್ರರು ಮೊದಲು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಪಡೆಗಳು ನಡೆಸಿದ ಎದುರು ದಾಳಿಯಲ್ಲಿ ಉಗ್ರ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಉಗ್ರನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದ್ದು, ಆತ ಜಾಕಿರ್ ಅಹ್ಮದ್ ಘನಿ ಎಂದು ಖಚಿತಪಡಿಸಲಾಗಿದೆ. ಈತನೊಂದಿಗೆ ಇದ್ದ ಮತ್ತೊಬ್ಬ ಉಗ್ರ ಲತೀಫ್ ಭಟ್ ಪತ್ತೆಗಾಗಿ ಭದ್ರತಾ ಪಡೆಗಳು ಗಾಳಿ ನಡೆಸುತ್ತಿವೆ. ಆತ ಆ ಪ್ರದೇಶದಿಂದ ಹೊರಗೆ ತಪ್ಪಿಸಿಕೊಳ್ಳದಂತೆ ತೋಟದ ಸುತ್ತಲೂ ವಿಕ್ಟರ್ ಫೋರ್ಸ್ ಪಡೆಗಳನ್ನು ನಿಯೋಜಿಸಲಾಗಿದೆ. ಈ ಎನ್‌ಕೌಂಟರ್ ಕುರಿತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ‘ಎಕ್ಸ್’ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ನೀವು ಓಡಿಹೋಗಬಹುದು, ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ” ಎಂದು ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಕುಲ್ಗಾಮ್ ನಿವಾಸಿಯಾದ ಜಾಕಿರ್ ಘನಿ ಕಳೆದ ಕೆಲವು ವರ್ಷಗಳಿಂದ ಲಷ್ಕರ್-ಎ-ತೊಯ್ಬಾ ಸಂಘಟನೆಯಲ್ಲಿ ಅತ್ಯಂತ ಸಕ್ರಿಯನಾಗಿದ್ದ. ಈ ಹಿಂದೆ ಭದ್ರತಾ ಸಿಬ್ಬಂದಿಯ ಮೇಲಿನ ದಾಳಿಗಳು ಮತ್ತು ನಾಗರಿಕರ ಕೊಲೆ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದರಿಂದ ತನಿಖಾ ಸಂಸ್ಥೆಗಳು ಈತನ ಮೇಲೆ ನಿಗಾ ಇರಿಸಿದ್ದವು.
2025 ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದಿದ್ದ ಭೀಕರ ಉಗ್ರರ ದಾಳಿಯ ತನಿಖೆಯಲ್ಲೂ ಜಾಕಿರ್ ಹೆಸರು ಮುನ್ನೆಲೆಗೆ ಬಂದಿತ್ತು. ಆ ಪ್ರಕರಣದ ತನಿಖೆಯ ಭಾಗವಾಗಿ ಅಂದು ಆತನಿಗೆ ಸೇರಿದ ಮನೆಯೊಂದನ್ನು ಧ್ವಂಸಗೊಳಿಸಲಾಗಿತ್ತು ಎಂಬುದು ಗಮನಾರ್ಹ.
