Home ದೇಶ ಮಣಿಪುರಿ ಸಂಗೀತಜ್ಞನ ಹತ್ಯೆ: ‘ದೆಹಲಿಯಲ್ಲಿ ಈಶಾನ್ಯ ರಾಜ್ಯಗಳ ಕುಟುಂಬಗಳು ಸುರಕ್ಷಿತವಾಗಿವೆಯೇ?’ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ

ಮಣಿಪುರಿ ಸಂಗೀತಜ್ಞನ ಹತ್ಯೆ: ‘ದೆಹಲಿಯಲ್ಲಿ ಈಶಾನ್ಯ ರಾಜ್ಯಗಳ ಕುಟುಂಬಗಳು ಸುರಕ್ಷಿತವಾಗಿವೆಯೇ?’ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ

0

ಆಗ್ನೇಯ ದೆಹಲಿಯಲ್ಲಿ ಮಣಿಪುರದ ಖ್ಯಾತ ಸಂಗೀತಜ್ಞ ಹಾಗೂ ಸಂಗೀತ ಶಿಕ್ಷಕ ಚೊಂಗ್ಥಮ್ ವಿಕ್ರಮ್ ಸಿಂಗ್ ಅವರನ್ನು ಥಳಿಸಿ ಹತ್ಯೆ ಮಾಡಲಾದ ಘಟನೆಯ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರ ರಾಜಧಾನಿಯಲ್ಲಿ ಈಶಾನ್ಯ ರಾಜ್ಯಗಳ ಜನರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ವಿಕ್ರಮ್ ಸಿಂಗ್ ಅವರು ತಮ್ಮ ಮನೆಯ ಹೊರಗೆ ಗದ್ದಲ ಮಾಡುತ್ತಿದ್ದ ಕೆಲವರಿಗೆ ಶಬ್ದ ಕಡಿಮೆ ಮಾಡುವಂತೆ ಕೇಳಲು ಕೆಳಗೆ ಇಳಿದು ಬಂದಾಗ ಅವರ ಮೇಲೆ ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ. “ತನ್ನದೇ ದೇಶದ ರಾಜಧಾನಿಯಲ್ಲಿ, ತನ್ನದೇ ಮನೆಯ ಹೊರಗೆ ಓರ್ವ ತಂದೆಯನ್ನು ಹತ್ಯೆ ಮಾಡಲಾಗಿದೆ.

ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದನ್ನು ಕಂಡ ನಂತರ, ‘ನಾವು ಇಲ್ಲಿ ಸುರಕ್ಷಿತವಾಗಿದ್ದೇವೆಯೇ?’ ಎಂಬ ಒಂದೇ ಪ್ರಶ್ನೆಯನ್ನು ದೆಹಲಿಯಲ್ಲಿರುವ ಪ್ರತಿಯೊಂದು ಈಶಾನ್ಯ ಕುಟುಂಬವೂ ಇಂದು ಕೇಳುತ್ತಿದೆ,” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಈಶಾನ್ಯ ರಾಜ್ಯಗಳ ಜನರ ವಿರುದ್ಧ ಹೆಚ್ಚುತ್ತಿರುವ ಕಾನೂನುಬಾಹಿರ ಕೃತ್ಯಗಳನ್ನು ತಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಪ್ರಕರಣದ ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕ ಸೇರಿದಂತೆ ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಈಶಾನ್ಯ ಸಮುದಾಯದವರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅವರ ಭದ್ರತೆಯ ಕುರಿತು ತೀವ್ರ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ದೆಹಲಿ ಪೊಲೀಸರು ಏಳು ಮಂದಿ ವಯಸ್ಕರನ್ನು ಬಂಧಿಸಿದ್ದು, 15 ವರ್ಷದ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ ತಡರಾತ್ರಿ ಆಶ್ರಮ್ ಪ್ರದೇಶದ ಕಿಲೋಕರಿ ಗ್ರಾಮದಲ್ಲಿರುವ ತಮ್ಮ ನಿವಾಸದ ಹೊರಗೆ ಜೋರಾಗಿ ಕಿರುಚಾಡುತ್ತಾ ಗಲಾಟೆ ಮಾಡುತ್ತಿದ್ದದ್ದನ್ನು ಆಕ್ಷೇಪಿಸಿದ ನಂತರ ಸಿಂಗ್ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಡೆಲಿವರಿ ಬಾಯ್‌ಗಳು ಮತ್ತು ಸಮೀಪದ ಉಪಹಾರ ಗೃಹಗಳ ಸಿಬ್ಬಂದಿ ಗಲಾಟೆ ಮಾಡುತ್ತಿದ್ದಾಗ ಸಿಂಗ್ ಕೆಳಗೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವೇಳೆ ಮಾತಿಗೆ ಮಾತು ಬೆಳೆದು ಅವರ ಮೇಲೆ ಮುಷ್ಟಿ ಮತ್ತು ಬಲವಾದ ಹೊಡೆತಗಳಿಂದ ಹಲ್ಲೆ ನಡೆಸಲಾಗಿತ್ತು. ಕುಟುಂಬಸ್ಥರು ಅವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ಹತ್ಯೆಯು ದೆಹಲಿಯಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ಜನರಲ್ಲಿ ಭೀತಿ ಮೂಡಿಸಿದ್ದು, ಸಮುದಾಯದ ಮುಖಂಡರು ತ್ವರಿತ ನ್ಯಾಯ ಮತ್ತು ಹೆಚ್ಚಿನ ಭದ್ರತೆಗೆ ಆಗ್ರಹಿಸಿದ್ದಾರೆ. ಕುಟುಂಬವು ಆಘಾತದಲ್ಲಿದೆ ಎಂದು ಸಮುದಾಯದ ಸದಸ್ಯೆ ಸಂಗೀತಾ ದೇವಿ ಹೇಳಿದ್ದು, ಸಿಂಗ್ ಅವರ ಕುಟುಂಬದ ಭವಿಷ್ಯವನ್ನು ಅಧಿಕಾರಿಗಳು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಮತ್ತೊಬ್ಬ ಸದಸ್ಯೆ ನರ್ಮದಾ ದೇವಿ ಮಾತನಾಡಿ, “ನಮ್ಮ ನೋಟದ ಆಧಾರದ ಮೇಲೆ ಕೆಲವೊಮ್ಮೆ ನಮ್ಮೊಂದಿಗೆ ತಾರತಮ್ಯ ಎಸಗಲಾಗುತ್ತದೆ. ನಾವೂ ಭಾರತೀಯರೇ,” ಎಂದು ಹೇಳುತ್ತಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಸಿಂಗ್ ಅವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಅನಗತ್ಯ ಜಗಳಗಳಿಗೆ ಹೋಗುತ್ತಿರಲಿಲ್ಲ ಎಂದು ನೆರೆಹೊರೆಯವರು ಸ್ಮರಿಸಿದ್ದಾರೆ.

ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, “ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನಿಮಗೆ ನ್ಯಾಯ ದೊರಕಲಿ; ಇಡೀ ಈಶಾನ್ಯ ಭಾರತವು ನಿಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸುತ್ತದೆ,” ಎಂದಿದ್ದಾರೆ. ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಮಾತನಾಡಿ, ತಮ್ಮ ಕಚೇರಿಯು ಪೊಲೀಸ್ ಮತ್ತು ಏಮ್ಸ್ ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಮುಖ್ಯಮಂತ್ರಿ ಖೇಮ್‌ಚಂದ್ ಯುಮ್ನಾಮ್ ಅವರು ದೆಹಲಿ ಪೊಲೀಸರು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದು, ರಾಜ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಿಂಗ್ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ಈ ಕೃತ್ಯವನ್ನು ಖಂಡಿಸಿದ್ದು, ಸಾಮಾನ್ಯ ನಾಗರಿಕರಿಗೆ ಸೂಕ್ತ ರಕ್ಷಣೆ ಸಿಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಖ್ಯಾತ ಗಿಟಾರ್ ವಾದಕ ಹಾಗೂ ಸಂಗೀತ ಶಿಕ್ಷಕರಾಗಿದ್ದ ಚೊಂಗ್ಥಮ್ ವಿಕ್ರಮ್ ಸಿಂಗ್ ಅವರು ಹಲವು ವರ್ಷಗಳ ಕಾಲ ಮಣಿಪುರದ ಸಂಗೀತ ರಂಗದಲ್ಲಿ ಗುರುತಿಸಿಕೊಂಡು, ನಂತರ ದೆಹಲಿಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

You cannot copy content of this page

Exit mobile version