Tuesday, June 18, 2024

ಸತ್ಯ | ನ್ಯಾಯ |ಧರ್ಮ

ಸಾಲು ಸಾಲು ಪತ್ರಕರ್ತರ ಮನೆಗಳ ಮೇಲೆ ದಾಳಿ-ಬಂಧನ! ಏನಾಗುತ್ತಿದೆ?


ಬೆಂಗಳೂರು,ಅಕ್ಟೋಬರ್.‌4: ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ನಿರ್ವಾಹಕ ಅಮಿತ್ಚ ಕ್ರವರ್ತಿಯವರನ್ನು ದೆಹಲಿ ಪೊಲೀಸರು ಅಕ್ಟೋಬರ್ 3, ಮಂಗಳವಾರದಂದು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (Unlawful Activities (Prevention) Act – UAPA ) ಅಡಿಯಲ್ಲಿ ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸುದ್ದಿವಾಹಿನಿಯ ಜೊತೆಗೆ ಸಂಬಂಧವನ್ನು ಹೊಂದಿರುವ ಸುಮಾರು 50 ಪತ್ರಕರ್ತರ ಮನೆಗಳ ಮೇಲೆ ಮುಂಜಾನೆಯಿಂದಲೇ ದಾಳಿ ನಡೆಸಿ ಅವರ ಫೋನ್‌, ಲ್ಯಾಪ್‌ಟಾಪ್‌, ಡಿವಿಡಿ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳೂ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.  

ಒಟ್ಟು 37 ಪುರುಷ ಪತ್ರಕರ್ತರು ಮತ್ತು ಒಂಬತ್ತು ಮಹಿಳಾ ಪತ್ರಕರ್ತರ ಮೇಲೆ ಎಫ್‌ಐಆರ್ ಸಂಖ್ಯೆ 224/2023 ಯ ಸಂಬಂಧಿತವಾಗಿ ದಾಳಿ ನಡೆಸಿ ವಿಚಾರಣೆ ನಡೆಸಲಾಗಿದ್ದು, ರಾತ್ರಿ 8:30 ಹೊತ್ತಿಗೆ ಪುರುಷ ಪತ್ರಕರ್ತರನ್ನು ದೆಹಲಿ ಪೊಲೀಸ್ ವಿಶೇಷ ಕಚೇರಿಗೆ ಕರೆದೊಯ್ಯಲಾಗಿದೆ ಮತ್ತು ಮಹಿಳಾ ಪತ್ರಕರ್ತರನ್ನು ಮನೆಗಳಲ್ಲಿಯೇ ವಿಚಾರಣೆ ನಡೆಸಲಾಗಿದೆ. ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿಯನ್ನು ಹೊರತು ಪಡಿಸಿ ಇತರರನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ನ್ಯೂಸ್‌ಕ್ಲಿಕ್‌ ಮೇಲೆ ಮುಂದುವರೆದ ದಾಳಿ: ದೆಹಲಿ ಪೊಲೀಸರಿಂದ ಸಂಪಾದಕ ಪ್ರಬೀರ್ ಬಂಧನ

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಂತೆ ಆಗಸ್ಟ್ 17, 2023 ರಂದು ನ್ಯೂಸ್‌ಕ್ಲಿಕ್‌ ಮೇಲೆ ಕರಾಳ UAPA ಯ ಸೆಕ್ಷನ್‌  (13, 16, 17, 18, ಮತ್ತು 22) ಹಾಗೂ ಭಾರತೀಯ ದಂಡ ಸಂಹಿತೆಯ 153(ಎ) (ದ್ವೇಷ ಉತ್ತೇಜಿಸುವುದು) ಧರ್ಮ, ಜನಾಂಗ, ಜನ್ಮಸ್ಥಳ, ಪ್ರದೇಶ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ಸಾಮರಸ್ಯ ಕದಡುವುದು ಮತ್ತು 120 (ಬಿ) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ದೂರು ದಾಖಲಾಗಿದೆ. ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಅಗಸ್ಟ್‌ನಲ್ಲಿ ಪ್ರಕಟವಾಗಿರುವ ತನಿಖಾ ವರದಿಯ ಆಧಾರದ ಮೇಲೆ ಈ ಎಫ್‌ಐಆರ್‌ ದಾಖಲಿಸಲಾಗಿದೆ.

ಪತ್ರಕರ್ತ ಅಭಿಸಾರ್ ಶರ್ಮಾ, ಹಿರಿಯ ಪತ್ರಕರ್ತ ಭಾಷಾ ಸಿಂಗ್, ಹಿರಿಯ ಪತ್ರಕರ್ತರಾದ ಊರ್ಮಿಲೇಶ್ ಮತ್ತು ಪರಂಜಯ್ ಗುಹಾ ಠಾಕುರ್ತಾ, ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಲೇಖಕಿ ಗೀತಾ ಹರಿಹರನ್, ಹೆಸರಾಂತ ಪತ್ರಕರ್ತೆ ಮತ್ತು ರಾಜಕೀಯ ಅರ್ಥಶಾಸ್ತ್ರದ ನಿರೂಪಕಿ ಔನಿಂದ್ಯೋ ಚಕ್ರವರ್ತಿ, ಇತಿಹಾಸಕಾರ ಸೊಹೈಲ್ ಹಶ್ಮಿ ಮತ್ತು ಸ್ಟ್ಯಾಂಡ್-ಅಪ್ ಕಮೀಡಿಯನ್ ಸಂಜಯ್ ರಾಜೌರಾ‌ ಮನೆಗಳ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆದಿವೆ. ಸತ್ಯಂ ತಿವಾರಿ, ನ್ಯೂಸ್‌ಕ್ಲಿಕ್‌ನ ಮಾಜಿ ವ್ಯವಸ್ಥಾಪಕ ಸಂಪಾದಕ ಪ್ರಾಂಜಲ್ ಮಾಜಿ ದಿ ಹಿಂದೂ ಪತ್ರಕರ್ತೆ ಮತ್ತು ನ್ಯೂಸ್‌ಕ್ಲಿಕ್‌ಗೆ ಕಾಂಟ್ರಿಬ್ಯೂಟ್‌ ಮಾಡುತ್ತಿದ್ದ ಅನುರಾಧಾ ರಾಮನ್, ಅದಿತಿ ನಿಗಮ್ ಮತ್ತು ಸುಮೇಧಾ ಪಾಲ್ ನಿವಾಸಗಳ ಮೇಲೆ ಕೂಡಾ ದಾಳಿ ನಡೆಸಲಾಗಿದೆ. ಹಿಂದೆ ಟೈಮ್ಸ್ ಆಫ್ ಇಂಡಿಯಾದ ಜೊತೆಗೆ ಕೆಲಸ ಮಾಡುತ್ತಿದ್ದ ಮತ್ತು ಈಗ ನ್ಯೂಸ್‌ಕ್ಲಿಕ್‌ ಜೊತೆಗಿರುವ ಪತ್ರಕರ್ತ ಸುಬೋಧ್ ವರ್ಮಾ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆಗಳ ಮೇಲೆ ದಾಳಿ: ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನ – ಎಡಿಟರ್ಸ್‌ ಗಿಲ್ಡ್‌ ಕಳವಳ

ಈ ಇಡೀ ಪ್ರಕ್ರಿಯೆ 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ. ಅಲ್ಲದೇ, ನ್ಯೂಸ್‌ಕ್ಲಿಕ್‌ನ ನವದೆಹಲಿಯ ಕಚೇರಿಗೆ ಬೀಗ ಜಡಿಯಲಾಗಿದೆ.

ಕೃಪೆ: The Wire

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್  ಅವರ ಮುಂಬೈ ಮನೆ ಮೇಲೂ ದಾಳಿ ನಡೆದಿದ್ದು, ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತೀಸ್ತಾ ಥಿಂಕ್ ಟ್ಯಾಂಕ್ ಟ್ರೈಕಾಂಟಿನೆಂಟಲ್: ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ರಿಸರ್ಚ್‌ನ ನಿರ್ದೇಶಕರಾಗಿದ್ದು, ಇದರ ಲೇಖನಗಳು ನ್ಯೂಸ್‌ಕ್ಲಿಕ್‌ನಲ್ಲಿ ಪ್ರಕಟವಾಗಿವೆ.

ದಿ ವೈರ್‌ ವರದಿಯ ಪ್ರಕಾರ ಸಂಜೆ 5:30  ಗಂಟೆಯ ಹೊತ್ತಿಗೆ ಊರ್ಮಿಳೇಶ್ ಮತ್ತು ಚಕ್ರವರ್ತಿ ಅವರನ್ನು ವಿಶೇಷ ಸೆಲ್ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ. ಅಭಿಸಾರ್ ಶರ್ಮಾ ಅವರನ್ನು ಸಂಜೆ 6 ರ ಸುಮಾರಿಗೆ, ಪರಂಜಾಯ್ ಗುಹಾ ಠಾಕುರ್ತಾ ಅವರನ್ನು ಸಂಜೆ 6:30 ರ ಸುಮಾರಿಗೆ  ಸುಬೋಧ್ ವರ್ಮಾರನ್ನು ಸಂಜೆ 7 ಗಂಟೆ ಸುಮಾರಿಗೆ ಬಿಡುಗಡೆ ಮಾಡಲಾಗಿದೆ. ಬಪ್ಪಾದಿತ್ಯ ಸಿನ್ಹಾ, ಸತ್ಯಂ ತಿವಾರಿ ಮತ್ತು ಪ್ರಬೀರ್ ಪುರ್ಕಾಯಸ್ಥ ಅವರ ಮಗ ಪ್ರತೀಕ್‌ರನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸ್‌ ದಾಳಿ: ನ್ಯೂಸ್‌ಕ್ಲಿಕ್‌ ಮೇಲೆ UAPA ಅಡಿಯಲ್ಲಿ ಕೇಸ್

ದಿ ವೈರ್‌ ವರದಿಯಲ್ಲಿ ಪೊಲೀಸ್‌ ಹೇಳಿಕೆ ವರದಿಯಾಗಿದ್ದು, ಸ್ಪೆಷಲ್‌ ಸೆಲ್‌ನ ಡಿಸಿಪಿ (ಪಿಆರ್‌ಒ) ಸುಮನ್ ನಲ್ವಾ , “ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆಸಲಾದ ಶೋಧ  ಹಾಗೂ ವಿಚಾರಣೆಯಲ್ಲಿ ಒಟ್ಟು 37 ಪುರುಷ ಶಂಕಿತರನ್ನೂ, ಒಂಬತ್ತು ಮಹಿಳಾ ಶಂಕಿತರನ್ನು ಪ್ರಶ್ನಿಸಲಾಗಿದೆ. ಅವರ ನಿವಾಸಗಳಿಂದ ಡಿಜಿಟಲ್ ಉಪಕರಣಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದಿದ್ದಾರೆ.

ಈ ಸಂದರ್ಭದಲ್ಲಿ ನ್ಯೂಸ್‌ಕ್ಲಿಕ್‌ನ ಪತ್ರಕರ್ತರಲ್ಲಿ ಭಾರತದಲ್ಲಿ ನಡೆದ ರೈತರ ಪ್ರತಿಭಟನೆ ಮತ್ತು ಕೋವಿಡ್ ಸಾಂಕ್ರಾಮಿಕದಂತಹ ಘಟನೆಗಳ ಕುರಿತು ವರದಿ ಮಾಡಿದ್ದಾರೆಯೇ….ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ.  

ನ್ಯೂಸ್‌ಕ್ಲಿಕ್ ಪತ್ರಕರ್ತ ಊರ್ಮಿಳೇಶ್ ಅವರ ವಕೀಲ ಗೌರವ್ ಯಾದವ್, “ನಾವು ಬೆಳಿಗ್ಗೆ 10 ಗಂಟೆಯಿಂದ ದೆಹಲಿಯ ಪೊಲೀಸ್ ವಿಶೇಷ ಕಚೇರಿಯ ಹೊರಗಿದ್ದೇವೆ. ಮತ್ತು ನಮ್ಮ ಕ್ಲೈಂಟನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ, ನಮಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಎಫ್‌ಐಆರ್‌ನ ಪ್ರತಿ ಸೇರಿದಂತೆ ನಮಗೆ ಯಾವುದೇ ದಾಖಲೆಗಳನ್ನು ಒದಗಿಸಲಾಗಿಲ್ಲ- ಸಿಕ್ಕಿಲ್ಲ,” ಎಂದು ಹೇಳುತ್ತಾರೆ.

ಶಬ್ನಮ್ ಹಶ್ಮಿ, ಅಕ್ಟೋಬರ್‌ 3, 2023 ತಮ್ಮ Xನಲ್ಲಿ – “ಇಂದು ಮುಂಜಾನೆ 6 ಗಂಟೆಗೆ ದೆಹಲಿ ಪೊಲೀಸರ ವಿಶೇಷ ದಳ ಸೋಹೈಲ್ ಹಶ್ಮಿ ನಿವಾಸದ ಮೇಲೆ ದಾಳಿ ನಡೆಸಿದೆ. 6 ಜನರಿರುವ ಮನೆಯ ಮಲಗುವ ಕೋಣೆಗೂ ನುಗ್ಗಿದ್ದಾರೆ. ಎರಡು ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಲಾಗಿದೆ. ಅವರ ಕಂಪ್ಯೂಟರ್, ಫೋನ್, ಹಾರ್ಡ್ ಡಿಸ್ಕ್ ಮತ್ತು ಫ್ಲ್ಯಾಷ್ ಡ್ರೈವ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮುಂಜಾನೆ ವಿಶೇಷ ಸೆಲ್‌ನಿಂದ ದಾಳಿಗೆ ಒಳಗಾದ ಅನೇಕ ಪತ್ರಕರ್ತರ ಮನೆಗಳಲ್ಲಿ ಇದೂ ಒಂದಾಗಿದೆ. ಪತ್ರಕರ್ತರು, ಬುದ್ಧಿಜೀವಿಗಳು, ಕಲಾವಿದರು ಮತ್ತು ಸಾಮಾನ್ಯ ನಾಗರಿಕರ ಪ್ರಜಾಸತ್ತಾತ್ಮಕ ಧ್ವನಿಗಳನ್ನು ಉಸಿರುಗಟ್ಟಿಸುವುದು ಈ ಸರ್ಕಾರದ ಅಡಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳ ಹೆಸರಿನಲ್ಲಿ ಇಂದು ಸಾಮಾನ್ಯ ಜನರು ಎದುರಿಸುತ್ತಿರುವುದು ಬೆದರಿಕೆ, ಕಿರುಕುಳ ಮತ್ತು ಭಯ. ಸಂವಿಧಾನದ ಹಕ್ಕುಗಳನ್ನು ಚಲಾಯಿಸುವ ನಾಗರಿಕರನ್ನು ತಡೆಯಲು ಸರ್ಕಾರದ ಇಂತಹ ಬೆದರಿಸುವ ತಂತ್ರಗಳಿಂದ ನಾವು ಮೌನವಾಗುವುದಿಲ್ಲ. ನಮ್ಮೊಂದಿಗೆ ನಿಂತಿರುವ ಸ್ನೇಹಿತರಿಗೆ ಮತ್ತು ಇತರರಿಗೆ ನಮ್ಮ ಕೃತಜ್ಞತೆ ಮತ್ತು ಧನ್ಯವಾದಗಳು”

ಪತ್ರಕರ್ತ ಅಭಿಸಾರ್‌ ಶರ್ಮಾರವರ ಮನೆ ಮೇಲೆ ಕೂಡ ದಾಳಿ ನಡೆಸಲಾಗಿದ್ದು, ಅವರ ಫೋನ್‌ ಹಾಗೂ ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿರುವ ಬಗ್ಗೆ X ನಲ್ಲಿ ತಿಳಿಸಿದ್ದಾರೆ.

ಪತ್ರಕರ್ತೆ ಭಾಷಾ ಸಿಂಗ್‌ ಅವರ ಫೋನನ್ನೂ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದು, ತನ್ನ ಕೊನೆಯ ಟ್ವೀಟನ್ನು X ನಲ್ಲಿ ಹಂಚಿಕೊಂಡಿದ್ದಾರೆ.

ನ್ಯೂಸ್‌ ಕ್ಲಿಕ್‌ನ ಪತ್ರಕರ್ತೆ ಅರಿತ್ರಿ X ನಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ, “ ದೆಹಲಿ ಪೊಲೀಸರು ಬೆಳಿಗ್ಗೆ 6 ಗಂಟೆಗೆ ನನ್ನ ಮನೆಗೆ ನುಗ್ಗಿದರು. ನನ್ನ ಲ್ಯಾಪ್‌ಟಾಪ್, ಫೋನ್, ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ತೆಗೆದುಕೊಂಡು ನಾನು ಮಾಡಿದ ವರದಿಯ ಬಗ್ಗೆ ಪ್ರಶ್ನಿಸಿದರು. ಇದು @NewsClick ವಿರುದ್ದ ದಾಖಲಾಗಿರುವ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದೆ.ಪತ್ರಕರ್ತರಾಗಲು ಇದು ಒಳ್ಳೆಯ ಸಂದರ್ಭ. #PressFreedom”

ಕಾರ್ಟೂನಿಸ್ಟ್ಇರ್ಫಾನ್ಕೆ ತಮ್ಮ ಮನೆಯ ದೆಹಲಿ ಪೊಲೀಸರು ಮೇಲೆ ದಾಳಿ ನಡೆಸಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿರುವ ಬಗ್ಗೆ Xನಲ್ಲಿ ಟ್ವೀಟ್ಮಾಡಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಈ ದಾಳಿಗಳ ಬಗ್ಗೆ ನೀಡಿರುವ ಹೇಳಿಕೆ ದಿ ವೈರ್‌ ನಲ್ಲಿ ವರದಿಯಾಗಿದ್ದು, “ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಮತ್ತು ಅವರು ನಿಯಮಗಳನ್ನು ಅನುಸರಿಸಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ… ನಾನು ದಾಳಿಗಳನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ, ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತವೆ. ತಪ್ಪು ಮೂಲಗಳಿಂದ ನಿಮಗೆ ಹಣ ಬಂದಿದ್ದರೆ ಅಥವಾ ಆಕ್ಷೇಪಾರ್ಹ ಏನಾದರೂ ನಡೆದಿದ್ದರೆ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಬರೆಯಲಾಗಿಲ್ಲ,” ಎಂದು ಹೇಳಿದ್ದಾರೆ.

ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ಈ ದಾಳಿಯನ್ನು ಖಂಡಿಸಿ ಟ್ವೀಟ್‌ ಮಾಡಿದೆ.

DIGIPUB News India Foundation ಈ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ನಡೆಯನ್ನು ಖಂಡಿಸಿ ಟ್ವೀಟ್‌ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು