ಸಕಲೇಶಪುರ: ಮಲೆನಾಡು ಪ್ರದೇಶವಾದ ಸಕಲೇಶಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಸ್ಥಾಪನೆ ಅತ್ಯಾವಶ್ಯಕವಾಗಿದೆ ಎಂದು ಸದನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರ ಗಮನ ಸೆಳೆದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿ ಮಲೆನಾಡು ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿದ್ದು ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು 75 ವರ್ಷಗಳ ಇತಿಹಾಸ ಹೊಂದಿರುವ ಸಕಲೇಶಪುರ ತಾಲೂಕು ಆಸ್ಪತ್ರೆ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿದ್ದು, ಇಂದಿಗೂ ಹಳೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ಮಲೆನಾಡು ಪ್ರದೇಶದಲ್ಲಿ ಮಳೆಯ ಸಮಸ್ಯೆ, ಕಾಫಿ ತೋಟ ಕಾರ್ಮಿಕರ ಹೆಚ್ಚಳ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದ ದೂರದ ಹಳ್ಳಿಗಳಿಂದ ಹಾಸನಕ್ಕೆ ತೆರಳುವ ಅನಿವಾರ್ಯತೆ ಇರುವುದರಿಂದ ಸಕಲೇಶಪುರದಲ್ಲಿ ತಾಯಿ–ಮಕ್ಕಳ ಆಸ್ಪತ್ರೆ ಸ್ಥಾಪನೆ ಅಗತ್ಯವಾಗಿದೆ ಎಂದು ಶಾಸಕ ಮಂಜು ಸದನದ ಗಮನ ಸೆಳೆದರು.
ತಾಲ್ಲೂಕು ಕೇಂದ್ರವಾಗಿರುವ ಸಕಲೇಶಪುರದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಜನಸಂಖ್ಯೆಗೆ ಅನುಗುಣವಾಗಿ ಹೆರಿಗೆ ಪ್ರಕರಣಗಳು ನಡೆಯುತ್ತಿವೆ. ಆದರೆ 150 ಹಾಸಿಗೆಗಳ ಆಸ್ಪತ್ರೆ ಎಂಬ ಹೆಸರಿದ್ದರೂ ಗೈನಕಾಲಜಿಸ್ಟ್, ಅನೆಸ್ಥೇಷಿಯಾ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ತುರ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿರುವುದರಿಂದ ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ತುರ್ತು ಚಿಕಿತ್ಸೆಗೆ ಕನಿಷ್ಠ ನಾಲ್ವರು ವೈದ್ಯರು ತಕ್ಷಣವೇ ಬೇಕಾಗಿದ್ದಾರೆ. ಅಗತ್ಯ ಕಟ್ಟಡಗಳು ಇದ್ದರೂ ವೈದ್ಯರಿಲ್ಲದೆ ಸೇವೆ ಕುಂಠಿತವಾಗುತ್ತಿದೆ ಎಂದು ಶಾಸಕ ಮಂಜು ವಿವರಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವರು, ಸದ್ಯ ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಹಾಸಿಗೆ ಬಳಕೆ ಪ್ರಮಾಣ ಕೇವಲ ಶೇಕಡಾ 20%ರಷ್ಟಿದ್ದು, ತಾಯಿ–ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಅಗತ್ಯವಿರುವ ಶೇಕಡಾ 70%ರ ಮಾನದಂಡ ಪೂರೈಸಿಲ್ಲ ಎಂದು ತಿಳಿಸಿದರು.
ಮೊದಲು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿ ಗೈನಕಾಲಜಿಸ್ಟ್, ಮಕ್ಕಳ ತಜ್ಞರು, ಅನೆಸ್ಥೇಷಿಯಾ ತಜ್ಞರನ್ನು ನಿಯೋಜಿಸಿ 24×7 ಸೇವೆ ಒದಗಿಸಲಾಗುವುದು. ಸಿಬ್ಬಂದಿ ಕೊರತೆ ನಿವಾರಣೆಯಾದ ನಂತರ ಹಾಸಿಗೆ ಬಳಕೆ ಪ್ರಮಾಣ ಹೆಚ್ಚಿದರೆ ಮುಂದಿನ ಹಂತದಲ್ಲಿ ಎಂಸಿಎಚ್ ಆಸ್ಪತ್ರೆ ಸ್ಥಾಪನೆ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. ಇದಲ್ಲದೆ ಸಕಲೇಶಪುರ ತಾಲೂಕಿನ ವಿವಿಧ ಹೋಬಳಿಗಳಿಗೆ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಪ್ರಸ್ತಾವನೆ ಪರಿಗಣನೆಯಲ್ಲಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.
