ಹಾಸನ: ಮ್ಯಾಗ್ನೆಟ್ ಶಾಲೆಗಳು ಎಂದು ಇರುವುದು ಸಣ್ಣ ಸಣ್ಣ ಸರ್ಕಾರಿ ಶಾಲೆಗಳ ಇರುವುದನ್ನೆಲ್ಲಾ ಎಳೆದುಕೊಂಡು ನುಂಗುತ್ತಿದ್ದು, ಒಂದು ರೀತಿ ದೊಡ್ಡ ದೊಡ್ಡ ಮೀನುಗಳು ಸಣ್ಣ ಮೀನುಗಳ ನುಂಗಿದಂತಾಗಿದೆ. ದೇಶದ ಅಭಿವೃದ್ಧಿಗೆ ಶಿಕ್ಷಣವೇ ಅಡಿಪಾಯ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ರಾಜಪ್ಪ ದಳವಾಯಿ ಸಲಹೆ ನೀಡಿ ಬೇಸರವ್ಯಕ್ತಪಡಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಿರಿಯ ಪ್ರಶಿಕ್ಷಣಾರ್ಥಿಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಡಾ. ಆರ್. ಓಬಳೇಶಘಟ್ಟಿಯವರ ನಾಲ್ಕು ಬೃಹತ್ ಕೃತಿಗಳ ಲೋಕಾರ್ಪಣೆ ಹಾಗೂ ಹಿರಿಯ ಪ್ರಶಿಕ್ಷಣಾರ್ಥಿಗಳ ಒಕ್ಕೂಟದ ವತಿಯಿಂದ ಅಭಿನಂದನಾ ಗ್ರಂಥ ಬಿಡುಗಡೆಯಲ್ಲಿ 2ನೇ ಸಂಪುಟವಾದ ಭಾಷೆ, ಕನ್ನಡ ಸಾಹಿತ್ಯದ ಸಂಪದ ಮತ್ತು ಕನ್ನಡ ಭಾಷಾ ಬೋಧನೆ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣವೇ ಮೊದಲ ಅಸ್ತ್ರ. ಅದರಲ್ಲೂ ಹೆಣ್ಣು ಮಕ್ಕಳಿಗೆ ಸಮರ್ಪಕ ಶಿಕ್ಷಣ ನೀಡುವುದು ಸಮಾಜದ ಪ್ರಗತಿಗೆ ಅನಿವಾರ್ಯ. ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸದೆ, ಈಗಲೇ ಓದಿಗೆ ಕಳುಹಿಸಬೇಕು. ಮದುವೆಯಾದ ಬಳಿಕ ಓದಲು ಅವಕಾಶ ಸಿಗುವುದಿಲ್ಲ ಎಂಬ ವಾಸ್ತವವನ್ನು ಅರಿತು, ಶಿಕ್ಷಣವನ್ನು ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು.
ಓದುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಓದು ಒಂದು ತಪಸ್ಸಿನಂತೆ. ಅದಕ್ಕೆ ಏಕಾಗ್ರತೆ, ಗುರಿ ಹಾಗೂ ಛಲ ಅಗತ್ಯ. ಬಲವಂತದಿಂದ ಯಾರನ್ನೂ ಓದಿಸಲು ಸಾಧ್ಯವಿಲ್ಲ. ಓದಿನಿಂದಲೇ ನಿಜವಾದ ಖುಷಿ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಒಳ್ಳೆಯ ಗುರುಗಳಾಗಿ ಗೆಲ್ಲಬೇಕೇ ಹೊರತು, ಜಾತಿ, ಶ್ರೀಮಂತಿಕೆ, ಕಾರು-ಬಂಗಲೆಗಳ ಮೂಲಕ ಉತ್ತಮ ಶಿಕ್ಷಣ ಸಾಧ್ಯವಿಲ್ಲ ಎಂದರು.
ನಾವು 20 ಕಡೆ ಓದಿ, 16 ಕಡೆ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡ ಅವರು, ಕರಾವಳಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದರು. ಎಲ್ಲ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಒಳ್ಳೆಯ ಪಾಠ ಮಾತ್ರ. ಕೆಲ ಪ್ರದೇಶಗಳಲ್ಲಿ ಶಿಕ್ಷಕರಿಂದ ಭಯೋತ್ಪಾದನೆಯಂತಹ ವರ್ತನೆ ನಡೆಯುತ್ತಿರುವುದು ಕಂಡುಬಂದಿದ್ದು, ಇದು ಕೆಲ ಶಿಕ್ಷಕರಿಗೂ ಕೆಲ ವಿದ್ಯಾರ್ಥಿಗಳಿಗೂ ಅನ್ವಯಿಸಬಹುದು. ಈ ಬಗ್ಗೆ ಗಂಭೀರ ಗಮನ ಅಗತ್ಯ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ತಮಗೆ ಆಳವಾದ ಅರಿವು ಇದೆ ಎಂದು ಹೇಳಿದರು.
39 ವರ್ಷಗಳ ಶಿಕ್ಷಣ ಕ್ಷೇತ್ರದ ಸೇವೆಯನ್ನು ಪಾವಿತ್ರತೆಯಿಂದ ನಿರ್ವಹಿಸಿದ್ದೇನೆ. ನಾವು ಬೇರೆಯವರ ಅವಕಾಶ ಕಿತ್ತುಕೊಳ್ಳಬಾರದು. ನೈತಿಕತೆ ಪಾಠ ಹೇಳುವುದರಲ್ಲಿ ಮಾತ್ರವಲ್ಲ, ಜೀವನದಲ್ಲಿ ಅನುಸರಿಸುವುದರಲ್ಲಿ ಇರಬೇಕು ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಹಲವಾರು ಶಿಕ್ಷಕರು ಕೃಷಿ, ಫಾರ್ಮ್‌ಹೌಸ್‌ಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಪಾಠಕ್ಕೆ ಸಮಯ ಕೊಡುವುದು ಕಡಿಮೆಯಾಗಿದೆ ಎಂಬ ಅಸಮಾಧಾನ ವ್ಯಕ್ತವಾಯಿತು. ಹಳ್ಳಿಗಳಲ್ಲಿನ ಸರಕಾರಿ ಶಾಲೆಗಳು ಕಣ್ಣೆದುರೇ ಮುಚ್ಚುತ್ತಿದ್ದು, ‘ಮ್ಯಾಗ್ನೆಟ್ ಶಾಲೆಗಳು’ ಸಣ್ಣ ಶಾಲೆಗಳನ್ನು ನುಂಗುತ್ತಿರುವುದು ಸಣ್ಣ ಮೀನು ದೊಡ್ಡ ಮೀನಿಂದ ನುಂಗಲ್ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಶಿಕ್ಷಣವನ್ನು ನಾವು ಸ್ವತಃ ಪಡೆಯಬೇಕು. ತಂದೆ-ತಾಯಿಗಳು ಮಾಡುವ ಕಷ್ಟದ ಅರಿವು ಇದ್ದರೆ ಮಕ್ಕಳು ಖಂಡಿತವಾಗಿ ಓದುತ್ತಾರೆ ಎಂದು ಅವರು ಸಲಹೆ ನೀಡಿದರು.
