ತಿರುವನಂತಪುರಂ : ಹಿರಿಯ ನಾಗರಿಕರ ಕಲ್ಯಾಣಕ್ಕೆ ಒತ್ತು ನೀಡುವ (Good News) ಉದ್ದೇಶದಿಂದ ಕೇರಳ ಸರ್ಕಾರ (Kerala Govt) ಪ್ರತ್ಯೇಕ ಬಜೆಟ್ (Budget) ಘೋಷಿಸಿದೆ. ಈ ಮೂಲಕ ಹಿರಿಯ ನಾಗರಿಕರಿಗಾಗಿ ವಿಶೇಷ ಬಜೆಟ್ ಮಂಡಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
ಕೇರಳ ಸರ್ಕಾರವು 2026–27ನೇ ಸಾಲಿನ ಬಜೆಟ್ ಅನ್ನು ವಿಧಾನಸಭೆಯಲ್ಲಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ಮಂಡಿಸಿದರು. ಇದು ಸಿಪಿಐಎಂ ನೇತೃತ್ವದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರದ ಕೊನೆಯ ಬಜೆಟ್ ಆಗಿದೆ. ಮೇ ತಿಂಗಳಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಜೆಟ್‌ಗೆ ವಿಶೇಷ ಮಹತ್ವ ದೊರೆತಿದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಕೇರಳ ಸರ್ಕಾರ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಬಜೆಟ್ ಅನ್ನು ಮಂಡಿಸಿದೆ. ಈ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಅಗತ್ಯವಾದ ವಿಶೇಷ ಗಮನ ನೀಡಬೇಕಾದ ಸಮಯ ಬಂದಿದೆ ಎಂದು ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ರಾಜ್ಯದಲ್ಲಿ ಹಿರಿಯ ನಾಗರಿಕರ ಆಯೋಗ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಅದಕ್ಕಾಗಿ ವರ್ಷಕ್ಕೆ 30 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಅಲ್ಲದೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸ್ವಯಂಸೇವಕ ಪಡೆಗಳನ್ನು ರಚಿಸಿ, ಅವರ ಮೂಲಕ ಹಿರಿಯ ನಾಗರಿಕರಿಗೆ 24×7 ಸಹಾಯ ಸೇವೆ ಒದಗಿಸಲಾಗುತ್ತದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗಾಗಿ ವಿಶೇಷ ಡಿಜಿಟಲ್ ಪೋರ್ಟಲ್ ಸ್ಥಾಪಿಸಲಾಗುತ್ತಿದ್ದು, ಇದರ ಮೂಲಕ ಕಲ್ಯಾಣ ಯೋಜನೆಗಳ ಮಾಹಿತಿ, ಕುಂದುಕೊರತೆಗಳ ಪರಿಹಾರ, ವೈದ್ಯಕೀಯ ನೆರವು, ಕಾನೂನು ಸೇವೆಗಳು ಹಾಗೂ ಭದ್ರತೆ ಕುರಿತ ನಿಗಾವನ್ನು ವಹಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಸ್ವಯಂಸೇವಕ ಪಡೆಗಳಿಗೆ ಸುಮಾರು ₹10 ಕೋಟಿ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.
ಕೇರಳದ ಒಟ್ಟು ಜನಸಂಖ್ಯೆ (ಸುಮಾರು 3.5 ಕೋಟಿ)ಯಲ್ಲಿ ಶೇ.18.7ರಷ್ಟು ಜನರು ಹಿರಿಯ ನಾಗರಿಕರಾಗಿದ್ದು, ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಆರ್ಥಿಕತೆಯ ದೃಷ್ಟಿಯಿಂದಲೂ ಹಿರಿಯ ನಾಗರಿಕರು ರಾಜ್ಯಕ್ಕೆ ಅತ್ಯಂತ ಮಹತ್ವದ್ದಾಗಿದ್ದಾರೆ. ಅವರನ್ನು ಕೇಂದ್ರವಾಗಿಸಿಕೊಂಡು ಪ್ರತ್ಯೇಕ ಬಜೆಟ್ ಮಂಡಿಸುವುದು, ಆ ಕ್ಷೇತ್ರದ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿದೆ ಎಂದು ಬಾಲಗೋಪಾಲ್ ಸ್ಪಷ್ಟಪಡಿಸಿದರು. ಈ ವಿಶೇಷ ಬಜೆಟ್‌ನಲ್ಲಿ ಹಿರಿಯ ನಾಗರಿಕರ ಆರೋಗ್ಯ, ಸಾಮಾಜಿಕ ಭದ್ರತೆ, ಆರ್ಥಿಕ ಸಹಾಯ, ವಸತಿ ಮತ್ತು ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೃದ್ಧಾಪ್ಯ ಪಿಂಚಣಿ, ಆರೋಗ್ಯ ಸೇವೆಗಳ ಸುಧಾರಣೆ ಮತ್ತು ಸಾಮಾಜಿಕ ರಕ್ಷಣಾ ಯೋಜನೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
