ಮುಂಬಯಿ | ಸಿದ್ಧಿ ವಿನಾಯಕ ದೇವಸ್ಥಾನದ ಹುಂಡಿಯಿಂದ ವರ್ಷಕ್ಕೆ 18 ಕೋಟಿ ಕದಿಯಲಾಗುತ್ತಿದೆ: ರಾಜ್ ಠಾಕ್ರೆ ಆರೋಪ

ಮುಂಬೈ: ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನದಿಂದ ವರ್ಷಕ್ಕೆ 18 ಕೋಟಿ ರೂಪಾಯಿ ದೇಣಿಗೆ ಕಳುವು ಆಗುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ರವಿವಾರ ಸಂಚಲನ ಆರೋಪ ಮಾಡಿದ್ದಾರೆ.

ಅಯೋಧ್ಯೆಯ ರಾಮ ಮಂದಿರದಲ್ಲೂ 1,400 ಕೋಟಿ ರೂಪಾಯಿ ದೇಣಿಗೆಯನ್ನು ಕದಿಯಲಾಗಿದೆ ಎಂದಿರುವ ಅವರು, ಈ ಅಪರಾಧಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ. ದೇವಸ್ಥಾನಗಳೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸಿಬ್ಬಂದಿ ಕಳುವು ಮಾಡುತ್ತಿದ್ದ ಪ್ರಕರಣವು ಧರ್ಮದರ್ಶಿಗಳ (ಟ್ರಸ್ಟಿಗಳ) ಪರಿಶೀಲನೆ ವೇಳೆ ಬಯಲಿಗೆ ಬಂದಿದೆ ಎಂದಿದ್ದಾರೆ.

ಇದರ ನಂತರ ದೇವಸ್ಥಾನಕ್ಕೆ ಬರುವ ವಾರದ ದೇಣಿಗೆಯು 50 ಲಕ್ಷ ರೂಪಾಯಿಯಿಂದ 1.5 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಸದಾ ಸರ್ವಂಕರ್ ಪ್ರತಿಕ್ರಿಯಿಸಿ, ದೇಣಿಗೆ ಕಳುವು ಪ್ರಕರಣದಲ್ಲಿ ಒಂಬತ್ತು ಮಂದಿ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಧರ್ಮದರ್ಶಿ ಮಂಡಳಿ ಕೈಗೊಂಡ ಬಿಗಿ ಕ್ರಮಗಳಿಂದಾಗಿಯೇ ದೇಣಿಗೆಯ ಮೊತ್ತ ಹೆಚ್ಚಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೇವಸ್ಥಾನದ ಆದಾಯವು ಪ್ರಸ್ತುತ 182 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು