Home ದೇಶ ರಾಜಸ್ಥಾನ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಐವರು ಸಜೀವ ದಹನ

ರಾಜಸ್ಥಾನ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಐವರು ಸಜೀವ ದಹನ

0

ಅಲ್ವಾರ್: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಐವರು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

ಈ ದುರದೃಷ್ಟಕರ ಘಟನೆಯು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಮೌಜ್‌ಪುರ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಪ್ರಯಾಣಿಕರು ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿ ಮರಳುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಎಸ್ಪಿ ಪ್ರಿಯಾಂಕಾ ರಘುವಂಶಿ ಅವರು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನು ರವಾನಿಸಲಾಗಿದ್ದು, 15 ನಿಮಿಷಗಳಲ್ಲಿ ಮಂಟನ್ನು ಹತೋಟಿಗೆ ತರಲಾಯಿತು ಎಂದು ತಿಳಿಸಿದ್ದಾರೆ. ಆದರೂ ಅಷ್ಟರಲ್ಲಾಗಲೇ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮೃತರನ್ನು ಮೂವರು ಮಹಿಳೆಯರು, ಒಬ್ಬ ಅಪ್ರಾಪ್ತ ಬಾಲಕಿ ಮತ್ತು ಮತ್ತೊಬ್ಬರು ಎಂದು ಗುರುತಿಸಲಾಗಿದೆ.

ಮೃತರು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ನಿವಾಸಿಗಳು ಎಂದು ಶಂಕಿಸಲಾಗಿದೆ. “ವಾಹನವು ಸಿಎನ್‌ಜಿ (CNG) ಚಾಲಿತವಾಗಿದ್ದರಿಂದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಅತಿ ವೇಗವಾಗಿ ಹರಡಿದ್ದರಿಂದ ಪ್ರಯಾಣಿಕರಿಗೆ ಹೊರಬರಲು ಸಮಯವೇ ಸಿಗಲಿಲ್ಲ,” ಎಂದು ಡೆಪ್ಯುಟಿ ಎಸ್ಪಿ ಕೈಲಾಶ್ ಜಿಂದಾಲ್ ಹೇಳಿದ್ದಾರೆ.

ವಾಹನದಿಂದ ಕೇವಲ ಅಸ್ಥಿಪಂಜರಗಳನ್ನು ಹೊರತೆಗೆಯಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲು ಡಿಎನ್‌ಎ (DNA) ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರು ಚಾಲಕ ವಿನೋದ್ ಕುಮಾರ್ ಬೆಂಕಿ ಹತ್ತಿಕೊಂಡ ತಕ್ಷಣ ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅವರ ದೇಹ ಶೇ. 80 ರಷ್ಟು ಸುಟ್ಟುಹೋಗಿದೆ. ಈ ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version