ಜೈಪುರ: ಪ್ರಧಾನಿ ಮೋದಿ ಅವರು ಉದ್ಘಾಟಿಸಬೇಕಿದ್ದ ರಿಫೈನರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹತ್ತಾರು ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಉದ್ಘಾಟನೆಗೆ ಸಿದ್ಧವಾಗಿದ್ದ ಈ ರಿಫೈನರಿಗೆ ಭಾರಿ ನಷ್ಟವಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ರಾಜಸ್ಥಾನದ ಬಲೋತ್ರ ಜಿಲ್ಲೆಯ ಪಚ್‌ಪದ್ರದಲ್ಲಿ ಸುಮಾರು 80,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ದೇಶದ ಮೊದಲ ಗ್ರೀನ್‌ಫೀಲ್ಡ್ ಇಂಟಿಗ್ರೇಟೆಡ್ ರಿಫೈನರಿ ಕಮ್ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಅನ್ನು ಪ್ರಧಾನಿ ಮೋದಿ ಮಂಗಳವಾರ ಉದ್ಘಾಟಿಸಬೇಕಿತ್ತು.
ಆದರೆ, ಸೋಮವಾರ ಈ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದರಿಂದ ಕಪ್ಪು ಹೊಗೆ ಆಕಾಶಕ್ಕೆ ಎగಸಿತ್ತು. 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ರಾಜಸ್ಥಾನ ಸರ್ಕಾರವು ಜಂಟಿ ಉದ್ಯಮವಾಗಿ ದೇಶದ ಮೊದಲ ಗ್ರೀನ್‌ಫೀಲ್ಡ್ ಇಂಟಿಗ್ರೇಟೆಡ್ ರಿಫೈನರಿ ಕಮ್ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಅನ್ನು ನಿರ್ಮಿಸಿವೆ. ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ಅವಧಿಯಲ್ಲಿ 2013ರ ಸೆಪ್ಟೆಂಬರ್ 22ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈ ರಿಫೈನರಿಗೆ ಮೊದಲ ಬಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಮೂಲ ಅಂದಾಜು ವೆಚ್ಚ 37,230 ಕೋಟಿ ರೂ. ಇತ್ತು. ನಂತರ ಕೇಂದ್ರದಲ್ಲಿ ಸರ್ಕಾರ ಬದಲಾದ ಬಳಿಕ, 2018ರ ಜನವರಿ 16ರಂದು ಪ್ರಧಾನಿ ಮೋದಿ ಈ ಯೋಜನೆಗೆ ಪುನಃ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಜನೆಯ ಅಂದಾಜು ವೆಚ್ಚವನ್ನು 43,129 ಕೋಟಿ ರೂ.ಗೆ ಹೆಚ್ಚಿಸಲಾಯಿತು.
ಸುಮಾರು 80,000 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುವ ಈ ಪ್ಲಾಂಟ್‌ನಿಂದ ಪಾಲಿಪ್ರೊಪಿಲೀನ್, ಪಾಲಿಥಿಲೀನ್, ಬೆಂಜೀನ್, ಟೊಲುಯೀನ್ ಮತ್ತು ಬ್ಯುಟಾಡೀನ್‌ನಂತಹ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಇದರಿಂದ ಈ ಭಾಗದಲ್ಲಿ ಅನೇಕ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
