ಮೋದಿ ಸರ್ಕಾರ ಎಂದೂ ಟ್ರಂಪ್‌ ಮಾತನ್ನು ಮೀರಿಲ್ಲ: ಅಮೆರಿಕದಲ್ಲಿ ಬಿಜೆಪಿ ಹಿರಿಯ ನಾಯಕ ರಾಮ್ ಮಾಧವ್ ಹೇಳಿಕೆ

ನಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಸರ್ಕಾರ ತಲೆಬಾಗಿದೆ ಮತ್ತು ಅಮೆರಿಕದ ಹಿತಾಸಕ್ತಿಗಾಗಿ ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿ ಕೊಡಲಾಗಿದೆಯೇ? ಬಿಜೆಪಿ ಹಿರಿಯ ನಾಯಕ ರಾಮ್ ಮಾಧವ್ ಇತ್ತೀಚೆಗೆ ಅಮೆರಿಕದಲ್ಲಿ ನೀಡಿದ ಹೇಳಿಕೆ ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಅಮೆರಿಕ ಸರ್ಕಾರವು ಭಾರತದ ಪ್ರಯತ್ನಗಳನ್ನು ಗುರುತಿಸದಿದ್ದರೂ, ಇರಾನ್ ಮತ್ತು ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸುವ ಮೂಲಕ ಭಾರತವು ಅಮೆರಿಕದ ಹಿತಾಸಕ್ತಿಗಳಿಗೆ ಅನುಗುಣವಾಗಿ ನಡೆದುಕೊಂಡಿದೆ ಎಂದು ರಾಮ್ ಮಾಧವ್ ಅವರು ನ್ಯೂಯಾರ್ಕ್‌ನ ಹಡ್ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಸಭೆಯಲ್ಲಿ ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ಇದು ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ಮೋದಿ ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಹೂಡಲು ಹೊಸ ಅವಕಾಶವನ್ನು ನೀಡಿದೆ. ವಿವಾದ ಮಿತಿಮೀರುತ್ತಿದ್ದಂತೆಯೇ, ತಮ್ಮ ಹೇಳಿಕೆಯಲ್ಲಿ ತಪ್ಪಿದೆ ಎಂದು ಒಪ್ಪಿಕೊಂಡ ರಾಮ್ ಮಾಧವ್ ಕ್ಷಮೆಯಾಚಿಸಿದ್ದಾರೆ.

ಮಾಧವ್ ಹೇಳಿದ್ದೇನು?

ಸುಂಕಗಳು ಮತ್ತು ಇಂಧನ ಆಮದಿನಂತಹ ಪ್ರಮುಖ ವಿಷಯಗಳಲ್ಲಿ ಭಾರತವು ಅಮೆರಿಕದ ನೀತಿಗಳಿಗೆ ಅನುಗುಣವಾಗಿ ವರ್ತಿಸಿದೆ ಎಂದು ರಾಮ್ ಮಾಧವ್ ಈ ಸಂದರ್ಭದಲ್ಲಿ ವಾದಿಸಿದ್ದರು. “ಭಾರತ ಇರಾನ್‌ನಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿತು. ವಿರೋಧ ಪಕ್ಷಗಳ ತೀವ್ರ ಟೀಕೆಗಳಿದ್ದರೂ ರಷ್ಯಾದಿಂದ ತೈಲ ಖರೀದಿಯನ್ನು ತಗ್ಗಿಸಲು ಭಾರತ ಸಮ್ಮತಿಸಿತು. ಯಾವುದೇ ಪ್ರತಿಭಟನೆ ಇಲ್ಲದೆ 50% ಸುಂಕವನ್ನೂ ಭಾರತ ಒಪ್ಪಿಕೊಂಡಿತು. ಅಮೆರಿಕದೊಂದಿಗೆ ಕೆಲಸ ಮಾಡದಿರಲು ಭಾರತಕ್ಕೆ ಇರುವ ಕಾರಣವೇನು?” ಎಂದು ಅವರು ಪ್ರಶ್ನಿಸಿದ್ದರು.

ರಷ್ಯಾ ಮತ್ತು ಇರಾನ್‌ನಂತಹ ದೇಶಗಳೊಂದಿಗೆ ಭಾರತ ವ್ಯವಹರಿಸಿದ ರೀತಿಯ ಕುರಿತು ಟ್ರಂಪ್ ವ್ಯಕ್ತಪಡಿಸಿದ್ದ ಅಸಮಾಧಾನವನ್ನು ಶಮನಗೊಳಿಸಲು ಭಾರತ ಯಾವ ರೀತಿ ಹೊಂದಾಣಿಕೆ ಮಾಡಿಕೊಂಡಿತು ಎಂಬುದನ್ನು ಮಾಧವ್ ವಿವರಿಸಿದ್ದರು. 2019ರಲ್ಲಿ ಅಮೆರಿಕದ ನಿರ್ಬಂಧಗಳ ನಂತರ ಭಾರತ ಇರಾನ್‌ನಿಂದ ತೈಲ ಆಮದನ್ನು ನಿಲ್ಲಿಸಿತು. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದ ತೈಲ ಖರೀದಿಯ ವಿಚಾರವೂ ಭಾರತಕ್ಕೆ ಮುಜುಗರ ತಂದಿತ್ತು. ಟ್ರಂಪ್ ಆಡಳಿತವು ಭಾರತದ ಉತ್ಪನ್ನಗಳ ಮೇಲೆ 50% ಸುಂಕ ವಿಧಿಸಿದ್ದಾಗ ಸಂಬಂಧಗಳು ಹದಗೆಟ್ಟಿದ್ದರೂ, ಭಾರತವು ಟ್ರಂಪ್ ಮೇಲೆ ನೇರ ವಾಗ್ದಾಳಿ ನಡೆಸದೆ ಮೌನವಾಗಿತ್ತು.

ಕಾಂಗ್ರೆಸ್ ವಾಗ್ದಾಳಿ ನಂತರ ಕ್ಷಮೆಯಾಚಿಸಿದ ಮಾಧವ್

ಈ ಹೇಳಿಕೆಯು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಲು ಕಾರಣವಾಯಿತು. “ಟ್ರಂಪ್ ಸರ್ಕಾರವನ್ನು ಮೆಚ್ಚಿಸಲು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಲಿ ಕೊಡಲಾಗುತ್ತಿದೆ. ನರೇಂದ್ರ ಮೋದಿ ಅವರ ‘ಪೂಸಿ ಹೊಡೆಯುವ’ ನೀತಿಯನ್ನು ಬಿಜೆಪಿಯವರೇ ಒಪ್ಪಿಕೊಳ್ಳುತ್ತಿದ್ದಾರೆ. ‘ವಿಶ್ವಗುರು’ ಎಂಬ ಬಿರುದು ಈಗ ವಿಪರ್ಯಾಸವಾಗಿ ಕಾಣುತ್ತಿದೆ. ಒಂದು ಕಾಲದಲ್ಲಿ ಬ್ರಿಟಿಷರಿಗೆ ಗುಲಾಮರಾಗಿದ್ದವರು ಈಗ ಅಮೆರಿಕಕ್ಕೆ ದಾಸರಾಗುತ್ತಿದ್ದಾರೆ” ಎಂದು ಕಾಂಗ್ರೆಸ್ ‘ಎಕ್ಸ್’ (ಟ್ವಿಟರ್) ತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿತು.

ವಿವಾದ ಹೆಚ್ಚಾಗುತ್ತಿದ್ದಂತೆ, ರಾಮ್ ಮಾಧವ್ ತಮ್ಮ ತಪ್ಪನ್ನು ಅರಿತು ತಕ್ಷಣ ಕ್ಷಮೆಯಾಚಿಸಿದರು. “ನಾನು ಹೇಳಿದ್ದು ತಪ್ಪು. ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಲು ಭಾರತ ಎಂದಿಗೂ ಒಪ್ಪಿಕೊಂಡಿರಲಿಲ್ಲ. ಅಮೆರಿಕ ವಿಧಿಸಿದ್ದ 50% ಸುಂಕವನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ನಾನು ಭಾರತದ ನಿಲುವನ್ನು ಸಮರ್ಥಿಸಲು ಹೋಗಿ ತಪ್ಪು ಮಾಹಿತಿ ನೀಡಿದ್ದೇನೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು