ಹಾಸನ : ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ‘ರಾಮ ಕೃಷ್ಣ ಶಿವ’ ನಾಟಕವು ಹಾಸನಾಂಬ ಕಲಾಕ್ಷೇತ್ರದಲ್ಲಿ ಇದೇ ಮಾ.30 ರಂದು ಸೋಮವಾರ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ ಎಂದು ಚಲಂ ಹಾಡ್ಲಹಳ್ಳಿ ಅವರು ತಿಳಿಸಿದರು.
ಖ್ಯಾತ ನಟ ಹಾಗೂ ಚಿಂತಕ ಪ್ರಕಾಶ್ ರೈ ಅವರ ಕನಸಿನ ನಿರ್ದಿಗಂತ ತಂಡದಿಂದ ಈ ನಾಟಕವನ್ನು ರಂಗಕ್ಕೆ ತರಲಾಗುತ್ತಿದೆ. ಸುಮಾರು ಎರಡು ಗಂಟೆಗಳ ಅವಧಿಯ ಈ ನಾಟಕಕ್ಕೆ ಗಣೇಶ್ ಮಂದಾರ್ತಿ ರಂಗರೂಪ, ಸಂಗೀತ ಹಾಗೂ ನಿರ್ದೇಶನ ನೀಡಿದ್ದಾರೆ ಎಂದರು.
ಡಾ. ರಾಮಮನೋಹರ ಲೋಹಿಯಾ ಅವರ ‘ರಾಜಕೀಯದ ಮಧ್ಯೆ ಬಿಡುವು’ ಕೃತಿಯಲ್ಲಿನ ‘ರಾಮ ಕೃಷ್ಣ ಶಿವ’ ಲೇಖನವನ್ನು ಆಧಾರವಾಗಿಸಿಕೊಂಡು ಈ ನಾಟಕ ರೂಪುಗೊಂಡಿದೆ. ಈ ಲೇಖನವನ್ನು ಕನ್ನಡಕ್ಕೆ ಅನುವಾದಿಸಿರುವುದು ಪ್ರಸಿದ್ಧ ರಂಗಕರ್ಮಿ ಕೆ.ವಿ. ಸುಬ್ಬಣ್ಣ. ಲೋಹಿಯಾ ಅವರು ದೇವರು, ಸಂಸ್ಕೃತಿ, ಅಸಮಾನತೆ ಹಾಗೂ ರಾಜಕೀಯ ಕುರಿತಂತೆ ನೀಡಿದ ಆಳವಾದ ಚಿಂತನೆಗಳನ್ನು ನಾಟಕದಲ್ಲಿ ಸೂಕ್ಷ್ಮವಾಗಿ ಪ್ರಸ್ತುತಪಡಿಸಲಾಗಿದೆ.
ಇಂದಿನ ಸಮಾಜದಲ್ಲಿ ಒಂದು ಕಡೆ ದೇವರ ಬಗ್ಗೆ ನಿರ್ಲಕ್ಷ್ಯ, ಮತ್ತೊಂದೆಡೆ ಕುರುಡು ಭಕ್ತಿಯ ಅತಿರೇಕ ಹೆಚ್ಚುತ್ತಿರುವ ಹಿನ್ನೆಲೆ, ‘ರಾಮ ಕೃಷ್ಣ ಶಿವ’ ನಾಟಕವು ಸಮತೋಲನದ ದೃಷ್ಟಿಕೋನವನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ಹೊಸ ಆಲೋಚನೆಗಳನ್ನು ಮೂಡಿಸುವುದಾಗಿ ತಿಳಿಸಿದರು. ನೀನಾಸಂ ಹಾಗೂ ರಂಗಾಯಣದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದ ಕಲಾವಿದರು ಈ ನಾಟಕದಲ್ಲಿ ಅಭಿನಯಿಸುತ್ತಿದ್ದು, ರಂಗಾಸಕ್ತರಿಗೆ ವಿಭಿನ್ನ ಅನುಭವ ನೀಡಲಿದೆ ಎಂದು ಚಿನ್ನೇನಹಳ್ಳಿ ಸ್ವಾಮಿ ಅವರು ತಿಳಿಸಿದರು.
ರಂಗಾಸಕ್ತರು, ಸಾಹಿತ್ಯಪ್ರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ಆಸ್ವಾದಿಸಬೇಕೆಂದು ಮನವಿ ಮಾಡಿದರು. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಚಿನ್ನೇನಹಳ್ಳಿ ಸ್ವಾಮಿ, ಚಲಂ ಹಾಡ್ಲಹಳ್ಳಿ, ಆರ್.ಪಿ. ವೆಂಕಟೇಶಮೂರ್ತಿ, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
