ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆ ಮೂಲಕ ರಾಮನಗರದ ಜಿಲ್ಲಾ ಕೇಂದ್ರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ, ಆದರೆ ಜಿಲ್ಲೆಯ ಹೆಸರಷ್ಟೇ ಬದಲಾವಣೆ ಮಾಡಲಾಗಿದೆ ಎಂದು ಸಂಪುಟ ಸಭೆ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ರಾಮನಗರವೇ ಜಿಲ್ಲಾ ಕೇಂದ್ರ ಸ್ಥಾನ ಆಗಿರುತ್ತದೆ. ರಾಮನಗರದ ಜಿಲ್ಲಾ ಕೇಂದ್ರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
2024ರ ಜುಲೈ ತಿಂಗಳಿನಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿತ್ತು. ನಂತರ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಮನವಿ ಸಲ್ಲಿಸಿತ್ತು. ಆದರೆ ಕೇಂದ್ರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ರಾಜ್ಯ ಸಚಿವ ಸಂಪುಟ ಈ ನಿರ್ಧಾರಕ್ಕೆ ಬಂದಿದೆ.
ರಾಮನಗರದ ಜನರ ಬೇಡಿಕೆಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ರಾಮನಗರ ಜಿಲ್ಲೆಯು ಪ್ರಸ್ತುತ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಹೊಂದಿದ್ದು, ಅದು ಈಗ ಬೆಂಗಳೂರು ದಕ್ಷಿಣ ಜಿಲ್ಲೆಯ ಭಾಗವಾಗಲಿದೆ. ಬ್ರಾಂಡ್ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.