Home ದೆಹಲಿ ಸಫೀನಾ ಹುಸೇನ್‌ ಸ್ಥಾಪಿತ ‘ಎಜುಕೇಟ್‌ ಗರ್ಲ್ಸ್‌’ ಸಂಸ್ಥೆಗೆ ರಾಮನ್‌ ಮ್ಯಾಗ್ಸೆಸೆ: ಪ್ರಶಸ್ತಿ ಪಡೆದ ಮೊದಲ ಭಾರತೀಯ...

ಸಫೀನಾ ಹುಸೇನ್‌ ಸ್ಥಾಪಿತ ‘ಎಜುಕೇಟ್‌ ಗರ್ಲ್ಸ್‌’ ಸಂಸ್ಥೆಗೆ ರಾಮನ್‌ ಮ್ಯಾಗ್ಸೆಸೆ: ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಂಸ್ಥೆ

0

ದೆಹಲಿ: 2025ರ ಪ್ರತಿಷ್ಠಿತ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಭಾರತದ ಎನ್‌ಜಿಓ ‘ಎಜುಕೇಟ್‌ ಗರ್ಲ್ಸ್‌’ ಪಡೆದುಕೊಂಡಿದೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎನ್‌ಜಿಓ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ರಾಮನ್‌ ಮೆಗಸೆಸೆ ಅವಾರ್ಡ್‌ ಫೌಂಡೇಷನ್‌ (RMAF) ಭಾನುವಾರ ಈ ವಿಷಯವನ್ನು ಪ್ರಕಟಿಸಿದೆ.

ಇನ್ನಿಬ್ಬರಿಗೂ ಪ್ರಶಸ್ತಿ

ಈ ವರ್ಷದ ರಾಮನ್‌ ಮೆಗಸೆಸೆ ಪ್ರಶಸ್ತಿಯು ಪರಿಸರಕ್ಕಾಗಿ ಶ್ರಮಿಸುತ್ತಿರುವ ಮಾಲ್ಡೀವ್ಸ್‌ನ ಶಹೀನಾ ಅಲಿ ಮತ್ತು ಬಡವರು ಹಾಗೂ ತುಳಿತಕ್ಕೊಳಗಾದವರ ಅಭಿವೃದ್ಧಿಗೆ ದುಡಿಯುತ್ತಿರುವ ಫಿಲಿಪ್ಪೀನ್ಸ್‌ನ ಪ್ಲಾವಿಯಾನೊ ಆಂಟೋನಿಯೊ ಎಲ್‌ ವಿಲ್ಲಾನುಯೆವಾ ಅವರಿಗೂ ಲಭಿಸಿದೆ. 67ನೇ ರಾಮನ್‌ ಮೆಗಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್‌ 7ರಂದು ಮನಿಲಾದ ಮೆಟ್ರೋಪಾಲಿಟನ್‌ ಥಿಯೇಟರ್‌ನಲ್ಲಿ ನಡೆಯಲಿದೆ.

ಪ್ರಶಸ್ತಿಯು ಪದಕ, ಪ್ರಶಂಸಾ ಪತ್ರ ಮತ್ತು ನಗದು ಬಹುಮಾನವನ್ನು ಒಳಗೊಂಡಿದೆ. ಅಸಾಮಾನ್ಯ ಧೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರದರ್ಶಿಸುವ ಏಷ್ಯಾದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಏಷ್ಯಾದ ನೋಬೆಲ್‌ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ.

‘ಎಜುಕೇಟ್‌ ಗರ್ಲ್ಸ್‌’

‘ಎಜುಕೇಟ್‌ ಗರ್ಲ್ಸ್‌’ ಸಂಸ್ಥೆಯನ್ನು 2007ರಲ್ಲಿ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಪದವೀಧರೆ ಸಫೀನಾ ಹುಸೇನ್‌ ರಾಜಸ್ಥಾನದಲ್ಲಿ ಸ್ಥಾಪಿಸಿದರು. ಪ್ರಸ್ತುತ ಈ ಸಂಸ್ಥೆಯು ದೇಶದ 30 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿದೆ ಮತ್ತು 20 ಲಕ್ಷ ಜನರಿಗೆ ಶಿಕ್ಷಣ ನೀಡುತ್ತಿದೆ.

2015ರಲ್ಲಿ ಈ ಸಂಸ್ಥೆಯು ಡೆವಲಪ್‌ಮೆಂಟ್‌ ಇಂಪ್ಯಾಕ್ಟ್‌ ಬಾಂಡ್‌ (DIB) ಮತ್ತು ‘ಪ್ರಗತಿ’ ಎಂಬ ಮುಕ್ತ-ಶಾಲಾ ಕಾರ್ಯಕ್ರಮವನ್ನು ಪರಿಚಯಿಸಿತು. ಇದು 15 ರಿಂದ 29 ವರ್ಷ ವಯಸ್ಸಿನ ಯುವತಿಯರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಮತ್ತು ಜೀವನಪೂರ್ತಿ ಅವಕಾಶಗಳನ್ನು ಪಡೆಯಲು ನೆರವಾಗುತ್ತಿದೆ. 300 ಕಲಿಯುವವರೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಈಗ 31,500ಕ್ಕೂ ಹೆಚ್ಚು ಯುವತಿಯರು ಇದ್ದಾರೆ.

ಭಾರತಕ್ಕೆ ಐತಿಹಾಸಿಕ ಕ್ಷಣ: ಸಫೀನಾ ಹುಸೇನ್‌

‘ಎಡ್ಯುಕೇಟ್‌ ಗರ್ಲ್ಸ್‌’ಗೆ ಈ ಪ್ರಶಸ್ತಿ ಲಭಿಸಿರುವುದು ಭಾರತಕ್ಕೆ ಐತಿಹಾಸಿಕ ಕ್ಷಣ ಎಂದು ಸಂಸ್ಥಾಪಕಿ ಸಫೀನಾ ಹುಸೇನ್‌ ಹೇಳಿದ್ದಾರೆ. ‘ಶಿಕ್ಷಣವು ಮಾನವ ಅಭಿವೃದ್ಧಿಗೆ ಕೊಡುಗೆ ನೀಡುವ ಅಂಶಗಳಲ್ಲಿ ಒಂದಾಗಿದೆ. ಶಿಕ್ಷಣವು ಪ್ರತಿ ಹುಡುಗಿಯ ಮೂಲಭೂತ ಮತ್ತು ಸಹಜ ಹಕ್ಕು.

ಈ ಹಕ್ಕನ್ನು ಪಡೆಯುವಲ್ಲಿನ ಸಾಮಾಜಿಕ ಮತ್ತು ವ್ಯವಸ್ಥಿತ ಅಡೆತಡೆಗಳನ್ನು ಪರಿಹರಿಸಲು ಮತ್ತು ಹುಡುಗಿಯರಿಗೆ ಸಮಾನ ಹಾಗೂ ಸುಲಭವಾಗಿ ಲಭ್ಯವಾಗುವ ಶಿಕ್ಷಣವನ್ನು ಉತ್ತೇಜಿಸಲು ಸಂಸ್ಥೆಯು ಕೆಲಸ ಮಾಡುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅಭಿನಂದನೆ

ಶಾಲೆಯಿಂದ ಹೊರಗುಳಿದಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ ‘Educate Girls’ ಸಂಸ್ಥೆಯು 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನವಾದ ಸುದ್ದಿ ಕೇಳಿ ಖುಷಿಯಾಯಿತು. ಸಂಸ್ಥೆಯ ಸ್ಥಾಪಕಿ ಸಫೀನಾ ಹುಸೇನ್‌ರಿಗೆ ಅಭಿನಂದನೆಗಳು.

ರಾಜಸ್ಥಾನದ ಕುಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ‌ ಶಿಕ್ಷಣಕ್ಕಾಗಿ ಆರಂಭಗೊಂಡಿದ್ದ “Educate Girls” ಸಂಸ್ಥೆಯು, ಕಾಲ ಕಳೆದಂತೆ ಹೆಮ್ಮರವಾಗಿ ಬೆಳೆದು ಇಂದು ಸಾವಿರಾರು ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸಲು ನಿಸ್ವಾರ್ಥ ಶ್ರಮಿಸುತ್ತಿದೆ.

ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ‘Educate Girls’ ಸಂಸ್ಥೆಯ ಹಿಂದಿರುವ ನಿಸ್ವಾರ್ಥ ಜೀವಗಳಿಗೆ ಈ ಪ್ರಶಸ್ತಿ ಹೊಸ ಸ್ಪೂರ್ತಿ ತುಂಬಲಿದೆ ಎಂದು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

You cannot copy content of this page

Exit mobile version