(ಈ ವರೆಗೆ…)
ಚಂದ್ರಹಾಸನ ಮದುವೆಗೆ ಸಾಕವ್ವ ದೇವೀರಮ್ಮನನ್ನು ಕರೆದರೂ ದೇವೀರಮ್ಮ ಮದುವೆಗೆ ಹೋಗದೆ ಮನೆ ತುಂಬಿಸುವ ಶಾಸ್ತ್ರಕ್ಕೆ ಬರುತ್ತಾಳೆ. ಗಂಗೆಯ ತುಂಟಾಟದೊಂದಿಗೆ ಯಾವ ಅಡೆ ತಡೆಯೂ ಇಲ್ಲದೆ ಚಂದ್ರಹಾಸನ ಮದುವೆ ನಡೆಯುತ್ತದೆ. ತೀರಿಕೊಂಡ ಲಕ್ಷ್ಮಿಯದೇ ರೂಪಿನ ಸೊಸೆ ಯಶೋದೆ ಅತ್ತೆ ಸಾಕವ್ವನ ಪ್ರೀತಿಯಲ್ಲಿ ಮೀಯುತ್ತಾ ಒಳ್ಳೆಯ ಸೊಸೆಯಾಗುತ್ತಾಳೆ. ಗಂಗೆಯ ಕತೆ ಏನು? ಓದಿ.. ವಾಣಿ ಸತೀಶ್ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತ ಮೂರನೇಯ ಕಂತು.
ಹಳೇ ನಾರಿಪುರದಲ್ಲಿ “ಗಂಡುಬೀರಿ ಗಂಗೆ” ಎಂದೇ ಹೆಸರುವಾಸಿಯಾಗಿದ್ದ ಗಂಗಮ್ಮ, ತನ್ನ ಹತ್ತು ಹನ್ನೆರಡನೇಯ ವಯಸ್ಸಿನಲ್ಲಿಯೇ ಬೆನ್ನಿಗೆ ತನ್ನಂತವೇ ಕೆಲವು ಹೈಕಳ ಪಟಾಲಮ್ ಕಟ್ಟಿಕೊಂಡು ಕಂಡ ಕಂಡವರ ಮನೆಯ ಹಿತ್ತಿಲು, ಹೊಲಗಳಿಗೆ ನುಗ್ಗಿ ಹಲಸು, ಮಾವು, ಬಾಳೆ, ಕಬ್ಬು, ಕಡಲೆ, ಹುಣಸೆ, ಕೊನೆಗೆ ತರಕಾರಿಗಳನ್ನು ಬಿಡದೆ ಕಿತ್ತು ತಿಂದು, ಮಡಿಲಿಗಷ್ಟು ಕಟ್ಟಿ ತಂದು, ನಾಕು ಮಕ್ಕಳೊಂದಿಗೆ ಒಪ್ಪೊತ್ತಿನ ಕೂಳಿಗೂ ಹೈರಾಣ ಪಡುತ್ತಿದ್ದ ಹಿಂದಿನ ಓಣಿಯ ಗಂಡ ಸತ್ತ ಮಾದೇವಕ್ಕನ ಮನೆಗೆ ಸುರಿದು ಹೋಗಿಬಿಡುತ್ತಿದ್ದಳು.
ಪುರಾವೆ ಸಮೇತ ಹಿಡಿದು ಇವಳ ಮನೆಯವರಿಗೆ ಒಪ್ಪಿಸಿ ಸರಿಯಾದ ಶಾಸ್ತಿ ಮಾಡಿಸಬೇಕೆಂದು ಕಾದು ಕುಳಿತ ಮಾಲೀಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಮಂಗಮಾಯ ತಿಂಗಳ ಬೆಳಕಾಗಿ ಬಿಡುತ್ತಿದ್ದಳು. ಮನೆ ಬಾಗಿಲಿಗೆ ದಿನಂಪ್ರತಿ ಬರುತ್ತಿದ್ದ ಸಾಕ್ಷಿ ಇಲ್ಲದ ದೂರುಗಳಿಗೆ ಸಾಕವ್ವನ ಕಿವಿ ಕಿವುಡಾಗಿತ್ತಾದರು, ಮಾತೆತ್ತಿದರೆ ಕೈ ಮುಂದು ಮಾಡುತ್ತಿದ್ದ ಅಣ್ಣಂದಿರ ಮುಂಗೋಪದಿಂದ ಮಾತ್ರ ಅವಳಿಗೆ ತಪ್ಪಿಸಿ ಕೊಳ್ಳಲಾಗುತ್ತಿರಲಿಲ್ಲ. ಅದಾಗಲೇ ಅವರ ಕಲ್ಲೆದೆಯ ಒರಟುತನಕ್ಕೂ ಒಗ್ಗಿ ಹೋಗಿದ್ದ ಗಂಗೆ, ಅವರ ಹೊಡೆತಗಳನ್ನು ಅಂಡಿಗೆ ಒರೆಸಿ ಕೊಂಡು ಹೋಗುವುದನ್ನು ಕಲಿತಿದ್ದಳು.
ಮಾದಲಾಪುರದಲ್ಲಿ ಮೂರು ವರ್ಷಕ್ಕೊಮ್ಮೆ ಕಟ್ಟುತ್ತಿದ್ದ ದನದ ಜಾತ್ರೆ ಎಂದರೆ ಸುತ್ತಲ ಹತ್ತು ಹಳ್ಳಿಗೆ ಎಲ್ಲಿಲ್ಲದ ಸುಗ್ಗಿ. ವಯಸ್ಸಿನ ಚಿಗುರು ಮೀಸೆಯ ಹುಡುಗರಂತೂ, ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಾ ಮುಂದು ತಾ ಮುಂದು ಎಂಬಂತೆ ಬಹುಮಾನ ಗಿಟ್ಟಿಸುವ ಪೈಪೋಟಿಗೆ ಬಿದ್ದು, ವರ್ಷವಿಡೀ ತಮ್ಮ ಹಸು ಕರುಗಳನ್ನು ದಷ್ಟಪುಷ್ಟವಾಗಿ ಬೆಳೆಸುವುದರಲ್ಲಿಯೇ ಮಗ್ನರಾಗಿ ಬಿಡುತ್ತಿದ್ದರು. ಜಾತ್ರೆಯ ದಿನ ಬಂತೆಂದರೆ ನೋಡುಗರ ಕಣ್ಣಿಗೆ ಹಬ್ಬವಾಗುವಂತೆ ಅವುಗಳನ್ನು ಅಲಂಕರಿಸಿ ತಂದು, ಇಡೀ ಜಾತ್ರೆ ರಂಗೇರುವಂತೆ ಮಾಡುತ್ತಿದ್ದರು.
ಬುದ್ಧಿ ಬಂದಾಗಿನಿಂದಲೂ ಈ ಜಾತ್ರೆಯ ರಂಗನ್ನು ಸಂಭ್ರಮಿಸುತ್ತಲೇ ಬೆಳೆದ ಗಂಗೆ, ಅಂದು ತನ್ನ ಜೊತೆಗಾತಿಯರೊಂದಿಗೆ ದನದಜಾತ್ರೆಗೆ ಹೊರಟವಳು ಮಾತಿಗೆ ಮಾತು ಬಂದು “ಮುಂದಿನ್ದಪ ನಾನು ಹಿಂಗೊಂದು ದನ ಹೊಡ್ಕೊಂಡು ಬಂದು ಬವ್ಮಾನ ಗಿಟ್ಟುಸ್ಕೊಂಡೆ ಗಿಟ್ಟುಸ್ಕೊತಿನಿ ನೋಡ್ತಿರಿ” ಎಂದು ಎದೆಯುಬ್ಬಿಸಿ ತೊಡೆತಟ್ಟಿ ಬಂದಿದ್ದಳು. ಆ ಮಾತನ್ನು ಉಳಿಸಿ ಕೊಳ್ಳುವ ಜಿದ್ದಿಗೆ ಬಿದ್ದು ಜಾತ್ರೆ ಮುಗಿಸಿ ಬಂದ ಆ ದಿನವೇ ಸೀದ ಕೊಟ್ಟಿಗೆಗೆ ಹೋಗಿ ಎಲ್ಲಾ ದನಗಳನ್ನು ಅಳೆದು ಸುರಿದು ತೂಗಿ ಕೊನೆಗೆ ಒಂದು ಕಂದು ಬಣ್ಣದ ಕರುವನ್ನು ಆರಿಸಿ ಅದಕ್ಕೆ “ಸಣ್ಣಿ” ಎಂದು ಹೆಸರಿಟ್ಟು ವರ್ಷ ಪೂರ್ತಿ ಅದನ್ನು ಜತನ ಮಾಡಿದ್ದಳು. ಅದೇನಾಯಿತೋ ಏನೋ ಹೀಗೆ ಒಂದು ದಿನ ಮೇಯಲು ಎಲ್ಲಾ ಹಸುಗಳ ಜೊತೆ ಮಂಟಿಕೊಪ್ಪಲ ಹುಲ್ಲು ತೋಪಿಗೆ ಹೋಗಿದ್ದ ಸಣ್ಣಿ ಮನೆಗೆ ಮರಳಲೇ ಇಲ್ಲ. ಗಂಗೆಯ ರಂಪಾಟವನ್ನು ನೋಡಲಾರದ ಬೋಪಯ್ಯ ಸುತ್ತಮುತ್ತಲ ಊರುಗಳಲ್ಲೆಲ್ಲಾ ಹುಡುಕಾಡಿ ಸೋತು ಸುಣ್ಣವಾದ. ಕೊನೆಗೆ ಮನೆಯವರೆಲ್ಲಾ ಸೇರಿ ಏನೇನೋ ಹೇಳಿ ಪುಸುಲಾಯಿಸಿ ಬೇರೊಂದು ಕರುವನ್ನು ಇವಳ ಸುಪರ್ದಿಗೆ ಒಪ್ಪಿಸಿ ನಿರಾಳವಾದರು.
ಈಚಲಗೆರೆಯ ಚಿನ್ನಸ್ವಾಮಿ ಬಡತನದ ಬೇಗೆ ತಾಳಲಾರದೆ ತನ್ನ ಇಬ್ಬರು ಹೆಂಡಿರು ಮತ್ತು ಐದು ಜನ ಮಕ್ಕಳೊಂದಿಗೆ ಅನ್ನ ಅರಸುತ್ತ ನಾರಿಪುರಕ್ಕೆ ಬಂದು ಬೋಪಯ್ಯನ ಆಶ್ರಯ ಪಡೆದಿದ್ದ. ಚಿನ್ನಸ್ವಾಮಿಗೆ ತನ್ನ ಎರಡು ಎಕ್ರೆ ಹೊಲವನ್ನು ಗುತ್ತಿಗೆಗೆ ಬಿಟ್ಟು ಕೊಟ್ಟಿದ್ದ ಬೋಪಯ್ಯ, ಆ ಊರಿನಲ್ಲಿ ಚಿನ್ನಸ್ವಾಮಿಯ ಕುಟುಂಬ ಘನತೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದ. ದಿನ ಕಳೆದಂತೆಲ್ಲಾ ಈ ಹಣ ಆಸ್ತಿಯ ಅಮಲನ್ನು ತಲೆಗೇರಿಸಿಕೊಳ್ಳುತ್ತಾ ನಡೆದ ಚಿನ್ನಸ್ವಾಮಿ, ಕೆಲವೇ ವರ್ಷಗಳಲ್ಲಿ ಒಳಗೊಳಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಇದು ತನ್ನದೇ ಜಾಗವೆಂದು ಪಟ್ಟು ಹಾಕಿಕೊಂಡು ಕುಳಿತ. ಇವನ ನಡವಳಿಕೆಯಿಂದ ಬೇಸತ್ತ ಬೋಪಯ್ಯ ದಾವೆ ಹೂಡಿ ಕೋರ್ಟು ಕಛೇರಿ ಎಂದು ಬಿಸಿಲು ಮಳೆ ಎನ್ನದೆ ಅಲೆಯ ತೊಡಗಿದರೆ, ಇತ್ತ ಚಿನ್ನಸ್ವಾಮಿ, ಕಷ್ಟಾಪಟ್ಟು ಸಂಪಾದಿಸಿದ್ದ ಬೋಪಯ್ಯನ ಹೊಲದಲ್ಲಿ ಬೆಳೆ ಮೇಲೆ ಬೆಳೆ ತೆಗೆದು ಕೊಳ್ಳುತ್ತಾ ಹಾಯಾಗಿ ಸಂಸಾರ ನಡೆಸುತ್ತಿದ್ದ.
ಹೀಗೆ, ಉಂಡ ಮನೆಗೆ ದ್ರೋಹ ಬಗೆದು ರಾಜಾರೋಷವಾಗಿ ಓಡಾಡುತ್ತಿದ್ದ ಚಿನ್ನಸ್ವಾಮಿಯ ಕುಟುಂಬ ಕಂಡರೆ ಗಂಗೆಯಾದಿಯಾಗಿ ಮನೆಯ ಎಲ್ಲಾ ಮಕ್ಕಳಿಗೂ ಕೋಪ ಒತ್ತರಿಸಿ ಬರುತ್ತಿತ್ತು. ಎರಡು ಕುಟುಂಬಗಳ ನಡುವೆ ಆಗಾಗ ಹೊಡೆದಾಟ ಬಡಿದಾಟಗಳು ನಡೆಯುತ್ತಿದ್ದು, ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿಳಿದು ಬರುವುದು ಕೂಡ ಮಾಮೂಲಾಗಿತ್ತು.
ಇಂತಹ ಹೊತ್ತಿನಲ್ಲಿ ಗಂಗೆ ತುಸು ಹೆಚ್ಚಾಗಿಯೇ ಬಡಕಲಾಗಿದ್ದ ತನ್ನ ಕರುವನ್ನು ಹೇಗಾದರೂ ಮಾಡಿ ದಷ್ಟ-ಪುಷ್ಟವಾಗಿ ಬೆಳೆಸಬೇಕೆಂದು ನಿಶ್ಚಯಿಸಿ ಹೊಸ ದಾರಿಯೊಂದನ್ನು ಹುಡುಕಿದಳು. ಆ ವರ್ಷ ಚಿನ್ನಸ್ವಾಮಿ ಆಕ್ರಮಿಸಿಕೊಂಡಿದ್ದ ತಮ್ಮ ಹೊಲದಲ್ಲಿ ಹುರುಳಿಯನ್ನು ಹುಲುಸಾಗಿ ಬೆಳೆಸಿದ್ದ. ಆ ಬೆಳೆಯನ್ನು ಕಂಡು ಒಳಗೊಳಗೆ ಕುದಿಯುತ್ತಿದ್ದ ಗಂಗೆ, ಪ್ರತೀ ರಾತ್ರಿ ಮೂರು ಗಂಟೆಯ ಹೊತ್ತಿಗೆ ಸರಿಯಾಗಿ ಎದ್ದು, ಸದ್ದಾಗದಂತೆ ಕೊಟ್ಟಿಗೆಗೆ ಬಂದು ಕಟ್ಟಿದ್ದ ಕರುವನ್ನು ಮೆಲ್ಲಗೆ ಬಿಚ್ಚಿ, ಮೈಲು ದೂರದಲ್ಲಿ ಮನೆಗಳೇ ಇಲ್ಲದೆ ನಿರ್ಜನವಾಗಿದ್ದ ಆ ಹೊಲಕ್ಕೆ ಬರುತ್ತಿದ್ದಳು. ಸುಮಾರು ಬೆಳಗಿನ ಐದು ಗಂಟೆಯವರೆಗೂ ಕರುವನ್ನು ಹೊಟ್ಟೆ ಬಿರಿಯುವಂತೆ ಮೇಯಿಸಿ ಮನೆಗೆ ವಾಪಸಾಗುತ್ತಿದ್ದಳು.
ನೋಡ ನೋಡುತ್ತಿದ್ದಂತೆ ಬಡಕಲಾಗಿದ್ದ ಆ ಕರು ಕೆಲವೇ ದಿನಗಳಲ್ಲಿ ಮೈತುಂಬಿಕೊಂಡು ನಳನಳಿಸುತ್ತಾ ಜಿಗಿದಾಡ ತೊಡಗಿತ್ತು. ಇದನ್ನು ಕಂಡ ಮನೆಯವರೆಲ್ಲರು ಆಶ್ಚರ್ಯ ಗೊಂಡು ಗಂಗೆಯ ಬಾಯಿ ಬಿಡಿಸಲು ನೋಡಿದರು. ಘಾಟಿ ಗಂಗೆ ಬಾಯಿಬಿಟ್ಟಾಳ..? ಏನೇನೋ ಕತೆ ಹೊಡೆದು ಅವರೆಲ್ಲರ ಗಮನವನ್ನೇ ಬೇರೆಡೆಗೆ ತಿರುಗಿಸಿ ಬಿಟ್ಟಿದ್ದಳು. ಇತ್ತ ಹೊಲದ ಬೆಳೆ ಮೇಯುತಿದ್ದ ಕಳ್ಳರನ್ನು ಹಿಡಿದೇ ತೀರಬೇಕೆಂದು ಹಗಲು ರಾತ್ರಿ ಕಾದು ಕುಳಿತ ಚಿನ್ನಸ್ವಾಮಿಯ ಮನೆಯವರು ಸರಿ ರಾತ್ರಿ ಒಂದು, ಒಮ್ಮೊಮ್ಮೆ ಎರಡು ಗಂಟೆಯ ವರೆಗೂ ಕಾದಿದ್ದು ಯಾರ ಸುಳಿವು ಇಲ್ಲದಿರುವುದನ್ನು ಕಂಡು ಮನೆಗೆ ವಾಪಸಾಗುತ್ತಿದ್ದರು. ಕೊನೆಗೂ ಅವರು ಎಷ್ಟೇ ತಿಣುಕಾಡಿದರು ಕಳ್ಳರ ಸುಳಿವು ಮಾತ್ರ ಸಿಗಲೇ ಇಲ್ಲ. ಯಾಕೋ ದಯ್ಯ, ಭೂತ, ಚೌಡಿ ಚಾಮುಂಡಿಯರೆಲ್ಲ ತಮ್ಮ ಬೆನ್ನತ್ತಿದಂತೆ ಊಹಿಸಿ ರಾತ್ರಿಹೊತ್ತು ಆ ಹೊಲಕ್ಕೆ ಹೋಗುವುದನ್ನೆ ಬಿಟ್ಟುಬಿಟ್ಟರು.
ಇದನ್ನೂ ಓದಿ-ಮನೆಗೆ ಬಂದ ಲಕ್ಷ್ಮಿಯಂಥ ಲಕ್ಷ್ಮಿ
ಹಾಗೂ ಹೀಗೂ ಗಂಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಮಾದಲಾಪುರದ ದನದ ಜಾತ್ರೆ ಬಂದೇ ಬಿಟ್ಟಿತು, ಗಂಗೆಯ ಸಂತಸಕ್ಕೆ ಪಾರವೇ ಇಲ್ಲ. ವಾರದ ಮುಂಚೆಯೇ ಅವ್ವನಿಗೆ ಹೇಳಿ ಆ ಕರುವಿನ ಮೇಲೆ ಹೊದ್ದಿಸಲು ಬಣ್ಣ ಬಣ್ಣದ ಗೌಸು ಹೊಲಿಸಿಕೊಂಡಳು, ಎರಡು ದಿನ ಮುಂಚೆಯೇ ಅಪ್ಪನ ಬಳಿ ಅದರ ಕೊಂಬುಗಳನ್ನು ನಯವಾಗಿ ಉಜ್ಜಿಸಿ ಎಣ್ಣೆ ಹಾಕಿ ನೀವಿ ಪಳಪಳಿಸುವಂತೆ ಮಾಡಿದಳು. ಕೊಂಬುಗಳಿಗೆ ಬಣ್ಣ ಬಣ್ಣದ ಟೇಪು ಕಟ್ಟಿಸಿಕೊಂಡು ತನ್ನ ಪುಂಡು ಪಟಾಲಮ್ಮನ್ನು ಬೆನ್ನಿಗೆ ಹಾಕಿಕೊಂಡು ಕರುವಿನೊಂದಿಗೆ ಹತ್ತು ಮೈಲು ದೂರದ ಮಾದಲಾಪುರವನ್ನು ನಡೆದು ಕೊಂಡೇ ಸೇರಿದಳು. ಅಲ್ಲಿ ಸೇರಿದ್ದ ನೂರಾರು ದನ ಕರುಗಳ ನಡುವೆ ಇವಳ ದಷ್ಟ ಪುಷ್ಟವಾಗಿ ಹೊಳೆಯುತ್ತಿದ್ದ ಕರು ಪೈಪೋಟಿ ನಡೆಸಿ ಬಹುಮಾನವನ್ನು ಗೆದ್ದಿತು. ಹೀಗೆ ಮೂರನೇ ಬಹುಮಾನವಾಗಿ ಒಂದು ಕಂಚಿನ ಗಂಗಾಳವನ್ನು ಗೆದ್ದ ಗಂಗೆ ಕುಣಿದಾಡುತ್ತಾ ಊರವರಿಗೆಲ್ಲಾ ಅದನ್ನು ಪ್ರದರ್ಶಿಸುತ್ತಾ ಮನೆ ಸೇರಿದಳು.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.