Home ರಾಜ್ಯ ಧಾರವಾಡ ಒಳ್ಳೆಯ ಪುಸ್ತಕಗಳನ್ನು ಓದುವಿಕೆಯಿಂದ ನಕಾರಾತ್ಮಕ ಯೋಚನೆಗಳು ದೂರ: ಪರಶುರಾಮ ಎಫ್. ದೊಡ್ಡಮನಿ

ಒಳ್ಳೆಯ ಪುಸ್ತಕಗಳನ್ನು ಓದುವಿಕೆಯಿಂದ ನಕಾರಾತ್ಮಕ ಯೋಚನೆಗಳು ದೂರ: ಪರಶುರಾಮ ಎಫ್. ದೊಡ್ಡಮನಿ

0

ಧಾರವಾಡ (ಕರ್ನಾಟಕ ವಾರ್ತೆ) ಫೆಬ್ರವರಿ 15: ಮನುಷ್ಯರಲ್ಲಿ ಸಮಸ್ಯೆಗಳು ಸಹಜ. ಕೆಲವೊಂದು ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರವಾಗುತ್ತದೆ. ಆದರೆ ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ ನಮ್ಮಲ್ಲಿನ ನಕಾರಾತ್ಮಕ ಯೋಜನೆಗಳನ್ನು ದೂರ ಮಾಡಿ, ಸಕಾರಾತ್ಮಕ ಚಿಂತನೆಗಳನ್ನು ಬೆಳಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ್ ಎಫ್.ದೊಡ್ಡಮನಿ ಅವರು ಹೇಳಿದರು.

ಅವರು ನಿನ್ನೆ (ಫೆ.14) ಬೆಳಿಗ್ಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಧಾರವಾಡ ಕೇಂದ್ರ ಕಾರಾಗೃಹ ಅವರ ಸಂಯುಕ್ತ ಆಶ್ರಯದಲ್ಲಿ, ಮನೋನ್ಯಾಯ ಯೋಜನೆ-2024 ರ ಅಡಿಯಲ್ಲಿ ಧಾರವಾಡದ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಮಾನಸಿಕ ಆರೋಗ್ಯ ಸುರಕ್ಷತೆ ಹಾಗೂ ಒತ್ತಡ ನಿರ್ವಹಣೆ ಕುರಿತ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಕಾರಾಗೃಹದ ಬಂಧಿಗಳು ಒತ್ತಡಗಳನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಉತ್ತಮ ಬದುಕಿನ ಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಹಾಗೂ ಸಮಸ್ಯೆಗಳನ್ನು ನಮ್ಮಲ್ಲಿಯೇ ಇಟ್ಟುಕೊಂಡು ಕೊರಗುವುದಕ್ಕಿಂತ ವಿಶ್ವಾಸವುಳ್ಳ ಸಂಬಂಧಿಕರು, ಸ್ನೇಹಿತರು, ಮನೋವೈದ್ಯರು, ವೃತ್ತಿಪರ ಮಾನಸಿಕ ಆರೋಗ್ಯ ತಜ್ಞರು, ಆಪ್ತಸಮಾಲೋಚನೆಕಾರರೊಂದಗೆ ಹಂಚಿಕೊಂಡಾಗ ಒತ್ತಡಗಳಿಗೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಬಹುದೆಂದು ಹೇಳಿದರು.

ಜೀವನದಲ್ಲಿ ಒಳ್ಳೆಯ ಚಿಂತನೆ, ಒಳ್ಳೆಯ ಚಿಂತಕರ ನುಡಿಗಳನ್ನು ಕೇಳುವುದರಿಂದ, ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ನಮಗೆ ಬರುವ ನಕರಾತ್ಮಕ ಯೋಚನೆಗಳಿಂದ ದೂರವಿರಬಹುದಾಗಿದೆ. ಮನುಷ್ಯರು ತಪ್ಪುಗಳನ್ನು ಮಾಡುವುದು ಸಹಜ. ಅವುಗಳನ್ನು ತಿದ್ದಿಕೊಂಡು ಬದುಕುವುದು ಮುಖ್ಯ. ಕೇಂದ್ರ ಕಾರಾಗೃಹದಲ್ಲಿ ಇರುವಷ್ಟು ದಿನಗಳಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ವರ್ತನೆಗಳನ್ನು ಕಲಿತುಕೊಳ್ಳಬೇಕು. ಮಾನಸಿಕ ಸುರಕ್ಷತೆಗೆ ಆದ್ಯತೆಗೆ ನೀಡಬೇಕು. ಅತಿಯಾದ ಒತ್ತಡಗಳಿದ್ದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

ಕೇಂದ್ರ ಕಾರಾಗೃಹ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಎಮ್.ಹೊನಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಧಾರವಾಡದ ಕೇಂದ್ರ ಕಾರಾಗೃಹ ಅಧಿಕ್ಷಕ ಪಿ. ಮಹದೇವ ನಾಯ್ಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಸೋಮಶೇಖರ ಜಾಡರ, ಮನೋನ್ಯಾಯ ಸಮಿತಿಯ ಸದಸ್ಯರಾದ ಡಾ. ಮೋಹನಕುಮಾರ ಥಂಬದ ಅವರು ಕಾರ್ಯಾಗಾರದಲ್ಲಿ ಮಾತನಾಡಿದರು.

ಸಂಗೀತಗಾರ ಡಾ. ಶ್ರೀಧರ ಕುಲಕರ್ಣಿ, ಅಶೋಕ ಕೋರಿ ಸೇರಿದಂತೆ ವಿಷಯ ತಜ್ಞರು ಭಾಗವಹಿಸಿದ್ದರು. ಶಿಕ್ಷಕ ಪಿ.ಬಿ.ಕುರಬೇಟ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

You cannot copy content of this page

Exit mobile version