Monday, June 17, 2024

ಸತ್ಯ | ನ್ಯಾಯ |ಧರ್ಮ

‘ದರ್ಶನ್ ಜೊತೆಯಾಗಲು ಸಿದ್ಧ, ಆದರೆ..!’ ; ಕಿಚ್ಚ ಸುದೀಪ್ ಹೇಳಿದ್ದೇನು?

ತನ್ನ ಹುಟ್ಟು ಹಬ್ಬದ ವಿಶೇಷವಾಗಿ ಅಭಿಮಾನಿಗಳು ಮತ್ತು ಮಾಧ್ಯಮ ಸ್ನೇಹಿತರ ಜೊತೆಗೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್ ಮಾಧ್ಯಮದವರೊಟ್ಟಿಗೆ ಮಾತಾಡಿದ್ದಾರೆ. ವಿಶೇಷ ಎಂದರೆ ತನ್ನ ಸಹನಟ ದರ್ಶನ್ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ ಕಿಚ್ಚ ಸುದೀಪ್.

ಇತ್ತೀಚೆಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಂದೇ ವೇದಿಕೆ ಹಂಚಿಕೊಂಡರೂ ಮುಖ ನೋಡಿಕೊಳ್ಳದ ದರ್ಶನ್ ಮತ್ತು ಸುದೀಪ್ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸುದ್ದಿಗಳು ಗರಿಗೆದರಿತ್ತು. ಅದರ ಬೆನ್ನಲ್ಲೇ ಬಂದ ಸುದೀಪ್ ಹುಟ್ಟುಹಬ್ಬ ಆ ಒಂದು ಸನ್ನಿವೇಶದ ಬಗ್ಗೆ ಪ್ರಶ್ನಿಸಲು ಮಾಧ್ಯಮಗಳಿಗೆ ಒಂದು ಒಳ್ಳೆಯ ವೇದಿಕೆ ಕೂಡಾ ಆಗಿದ್ದು ವಿಶೇಷ.

ಇನ್ನೂ ಒಂದು ಮುಖ್ಯ ವಿಚಾರ ಎಂದರೆ ಸುದೀಪ್ ಬೇರೆಲ್ಲಾ ದಿನಗಳಂತೆ ದರ್ಶನ್ ವಿಚಾರವಾಗಿ ಬಂದ ಪ್ರಶ್ನೆಗಳನ್ನು ತಿರಸ್ಕರಿಸದೇ, ಮುಕ್ತವಾಗಿ ಸ್ವೀಕರಿಸಿ ಬಹುತೇಕರಿಗೆ ಸಮಾಧಾನ ಆಗುವಂತೆ ಉತ್ತರಿಸಿದ್ದಾರೆ. ಸಮಾಧಾನ ಎನ್ನುವುದಕ್ಕಿಂತ ತನ್ನ ಮನದ ಮಾತನ್ನು ಹೊರಹಾಕಿದ್ದಾರೆ.

ಸುಮಲತಾ ಅಂಬರೀಶ್ ಹುಟ್ಟು ಹಬ್ಬದ ಸಂದರ್ಭದಲ್ಲಿ ದರ್ಶನ್ ಸುದೀಪ್ ವೇದಿಕೆ ಹಂಚಿಕೊಂಡ ಬಗ್ಗೆ, ಇಬ್ಬರೂ ಮುಖ ನೋಡಿಕೊಳ್ಳದೇ ನಿರ್ಗಮಿಸಿದ ಬಗ್ಗೆ ಮಾಧ್ಯಮಗಳು ಮೊದಲ ಪ್ರಶ್ನೆಯಾಗಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್.. ಮೊದಲಿಗೆ ದರ್ಶನ್ ಹಾಗೂ ಮಾಧ್ಯಮಗಳು ಒಂದಾಗಿದ್ದು ಒಳ್ಳೆಯ ವಿಷಯ. ಎಷ್ಟು ದಿನ ಅಂತ ದ್ವೇಷ ಇಟ್ಟು ಇರುವುದಕ್ಕೆ ಆಗುತ್ತದೆ.. ಒಂದು ಕೆಟ್ಟ ಗಳಿಗೆಯಲ್ಲಿ ಮಾತು ಬರುತ್ತೆ, ಹೋಗುತ್ತೆ.. ಅದನ್ನು ಬೆಳೆಸದೇ ಒಂದಾಗಿದ್ದು ನನಗಂತೂ ಖುಷಿ ಇದೆ ಎಂದು ಸುದೀಪ್ ಹೇಳಿದ್ದಾರೆ.

ನಂತರ ‘ನಂಗೆ ಅವರ ಮೇಲೆ ಕೋಪ ಇಲ್ಲ. ನಾವಿಬ್ಬರೂ ಒಂದಾಗುವುದಕ್ಕೆ ಸ್ವಲ್ಪ ಸಮಯ ಬೇಕು. ನಾವಿಬ್ಬರೂ ಪರಸ್ಪರ ಗೌರವ ಕೊಡ್ತೀವಿ. ಪರಸ್ಪರ ಕೈಕುಲುಕಿದ ಮಾತ್ರಕ್ಕೆ ಎಲ್ಲಾ ಸರಿಹೋಯ್ತು ಅನ್ನೋಕಾಗಲ್ಲ. ನನ್ನಲ್ಲೂ ಕೆಲವು ಪ್ರಶ್ನೆಗಳಿವೆ, ಅವರಲ್ಲೂ ಕೆಲವು ಪ್ರಶ್ನೆಗಳಿರಬಹುದು.. In fact ಸುಮಾರು 6 ವರ್ಷಗಳ ನಂತರ ನಾನು ದರ್ಶನ್ ಮುಖಾಮುಖಿ ಆದದ್ದು. ಈ ಬಗ್ಗೆ ಖುಷಿ ಇದೆ. ಆದರೆ ಒಂದಾಗಲು ಕಾಲ ಬರಬೇಕು. ಅದಕ್ಕೆ ಸಮಯ ಬೇಕು. ಆ ಸಮಯ ಕೊಡಿ’ ಎಂದು ಸುದೀಪ್ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಈ ವಿಷಯ ಸುದ್ದಿ ಆದಾಗ ಖುಷಿ ತಂದಿತ್ತು. ದರ್ಶನ್ ದೊಡ್ಡ ನಟ. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಕೋಪವಿಲ್ಲ. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನುವುದು ಕಲ್ಪನೆ ಅಷ್ಟೇ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ಇಬ್ಬರೂ ಒಂದೇ ಪಾರ್ಟಿಯಲ್ಲಿ ಭೇಟಿ ಆಗಿದ್ದು ಖುಷಿ ತಂದಿದೆ. ನಂಗೂ ಕೆಲವು ಪ್ರಶ್ನೆಗಳು ಇವೆ. ದರ್ಶನ್‌ಗೂ ಇವೆ. ಇಬ್ಬರೂ ಮುಖಾಮುಖಿ ಆದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗೋದು. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ ಎಂದು ಸುದೀಪ್‌ ಹೇಳಿದ್ದಾರೆ.

ಸುಮಲತಾ (Sumalatha) ಅವರ ಮೇಲೆ ಗೌರವ ಇದೆ, ಹಾಗಾಗಿ ಪಾರ್ಟಿ ಹೋಗಿದ್ದೆ. ತುಂಬಾ ವರ್ಷಗಳ ನಂತರ ಪಾರ್ಟಿಗೆ ಹೋಗಿದ್ದೆ. ನಾನು ಪಾರ್ಟಿ ಮಾಡುವ ವ್ಯಕ್ತಿ ಅಲ್ಲ. ಆ ರೀತಿ ಆಗಿದ್ದು ನನಗೂ ತುಂಬಾ ಖುಷಿ ಆಗಿದೆ. ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ನೋಡುವುದಿಲ್ಲ. ದರ್ಶನ್ ಪೋಸ್ಟ್ ನಾನು ನೋಡಿಲ್ಲ. ನೇರವಾಗಿ ಏನಾದರೂ ಹೇಳಿದರೆ ಕನ್ಸಿಡರ್ ಮಾಡ್ತೀನಿ ಎಂದಿದ್ದಾರೆ ಸುದೀಪ್.

ಸಧ್ಯ ಎಲ್ಲಾ ಮನಸ್ತಾಪಕ್ಕೂ ಒಂದು ಕೊನೆ ಇದೆ. ಅದಕ್ಕೆ ಕಾಲ ಬೇಕು ಎನ್ನುವ ಮೂಲಕ ಸುದೀಪ್ ಮೊದಲ ಬಾರಿಗೆ ಈ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಮೌನ ಮುರಿದಿದ್ದಾರೆ. ಇನ್ನು ಇದಕ್ಕೆ ದರ್ಶನ್ ಅವರ ಉತ್ತರ ಏನು, ಒಂದಾಗಲು ಎಷ್ಟು ಕಾಲ ಬೇಕು ಎಂಬುದಕ್ಕೂ ಕಾಲವೇ ಉತ್ತರಿಸಲಿದೆ.

Related Articles

ಇತ್ತೀಚಿನ ಸುದ್ದಿಗಳು