ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ತನ್ನ ಶಿಫಾರಸ್ಸನ್ನು ಕೇಂದ್ರಕ್ಕೆ ಸಲ್ಲಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದೇವದುರ್ಗದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಇನ್ನೊಂದು ತಿಂಗಳೊಳಗೆ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ಬಳಿಕ ಅದನ್ನು ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದರು.
ಕಾಗಿನೆಲೆ ಕನಕ ಗುರುಪೀಠ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದ್ದು, ಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯಾತೀತ ಮನೋಭಾವಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಸಿಎಂ ಸ್ಮರಿಸಿದರು.
1992ರಲ್ಲಿ ಕುರುಬ ಸಮುದಾಯಕ್ಕಾಗಿ ಕಾಗಿನೆಲೆ ಗುರುಪೀಠ ಸ್ಥಾಪನೆಯಾಗಿದ್ದು, ಶ್ರೀ ತಾರಕಾನಂದ ಸ್ವಾಮೀಜಿಯವರು ಮೊದಲ ಗುರುಗಳಾಗಿದ್ದರು. ಕಲ್ಯಾಣ ಕರ್ನಾಟಕ, ಬೆಂಗಳೂರು, ಮೈಸೂರು ಮತ್ತು ಮುಂಬಯಿ ಕರ್ನಾಟಕ ವಿಭಾಗಗಳಾಗಿ ಗುರುಪೀಠ ಕಾರ್ಯನಿರ್ವಹಿಸುತ್ತಿದ್ದು, ಈ ವಿಭಾಗಕ್ಕೆ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಗುರುಗಳಾಗಿದ್ದರು ಎಂದು ಹೇಳಿದರು.
ಸಮಸಮಾಜ ನಿರ್ಮಾಣವೇ ಗುರುಪೀಠದ ಮೂಲ ಉದ್ದೇಶವಾಗಿದ್ದು, ಕನಕದಾಸರು, ಬುದ್ಧ ಮತ್ತು ಬಸವಾದಿ ಶರಣರು ಜಾತಿವ್ಯವಸ್ಥೆಗೆ ವಿರೋಧವಾಗಿ ಸಂದೇಶ ನೀಡಿದಂತೆ, ಸಮಾಜದಲ್ಲಿ ಸಮಾನತೆ ಮತ್ತು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಿಎಂ ಹೇಳಿದರು.
ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಪಡೆದ ಯುವಪೀಳಿಗೆ ಸ್ವಾಭಿಮಾನಿ ಬದುಕು ರೂಪಿಸಿಕೊಳ್ಳಬೇಕು. ಸಮಾಜದ ಜಡತ್ವವನ್ನು ಕಳೆದು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಾಧಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿನ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಬೆಂಗಳೂರಿನಲ್ಲಿ ಸುಮಾರು 50 ಎಕರೆ ಪ್ರದೇಶ ನೀಡಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ಹಲವು ಬೇಡಿಕೆಗಳಿಗೆ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
