ರಾಜ್ಯದಲ್ಲಿ ಇಂದು, ನಾಳೆ ಮಳೆಯ ಆರ್ಭಟ: ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್, ಹೊನ್ನಾವರದಲ್ಲಿ ಓರ್ವ ಮೀನುಗಾರ ಬಲಿ

ಬೆಂಗಳೂರು, ಮೇ 18: ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ತೀವ್ರ ರೂಪ ತಾಳಿದ್ದು, ಇಂದು ಮತ್ತು ನಾಳೆ (ಮೇ 19) ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಅಲರ್ಟ್ ಜಾರಿಗೊಳಿಸಲಾಗಿದೆ. ಕರಾವಳಿ ಭಾಗದಲ್ಲಿ ಈಗಾಗಲೇ ಮಳೆ ಆರ್ಭಟಿಸುತ್ತಿದ್ದು, ಹೊನ್ನಾವರದಲ್ಲಿ ಸಿಡಿಲು ಬಡಿದು ಓರ್ವ ಮೀನುಗಾರ ಮೃತಪಟ್ಟಿರುವ ದುರಂತ ಸಂಭವಿಸಿದೆ.

ಇಂದಿನ ಅಲರ್ಟ್: ಕರಾವಳಿ ಮತ್ತು ಒಳನಾಡು
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮುನ್ಸೂಚನೆ ಪ್ರಕಾರ, ಸೋಮವಾರ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಗೆ ಭಾರಿ ಮಳೆಯ ಅಲರ್ಟ್ ಕೊಡಲಾಗಿದೆ. ಅಲ್ಲದೆ ದಕ್ಷಿಣ ಒಳನಾಡಿನ ದಾವಣಗೆರೆ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಿಗೂ ಬಿರುಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಹಾವೇರಿ, ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದೆ.

ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ನಾಳೆ ಮೇ 19: ದಕ್ಷಿಣ ಒಳನಾಡಿಗೆ ಮತ್ತೆ ಅಲರ್ಟ್
ಮೇ 19 ರಂದು ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರು ಸೇರಿದಂತೆ ಕರಾವಳಿ ಮತ್ತು ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಗುರ ಮಳೆ ಮತ್ತು ಗುಡುಗಿನ ಸಾಧ್ಯತೆ ಇದೆ. ಮೇ 20 ರಿಂದ 23 ರವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಹಗುರ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ.

ಕಾರವಾರದಲ್ಲಿ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ
ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮ ಪಾಲಿಸುವಂತೆ ಸೂಚಿಸಿದ್ದಾರೆ. ಅಪಾಯಕಾರಿ ಮರಗಳ ಸಮೀಪ ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಸಮುದ್ರದಲ್ಲಿ ಅಲೆಗಳ ಎತ್ತರ ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತುರ್ತು ಸೇವೆಗಳಿಗೆ 08382-229857 ಮತ್ತು 9483511015 ಸಂಪರ್ಕಿಸಬಹುದು.

ಹೊನ್ನಾವರದಲ್ಲಿ ಸಿಡಿಲು ಬಡಿದು ಮೀನುಗಾರ ಮೃತ್ಯು
ಹೊನ್ನಾವರ ತಾಲೂಕಿನ ಅಪ್ಸರಕೊಂಡ ಸಮುದ್ರ ತೀರದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಮೀನುಗಾರ ವಿನಾಯಕ ಖಾರ್ವಿ (35) ಮೃತಪಟ್ಟಿದ್ದಾರೆ. ಅರಬ್ಬಿ ಸಮುದ್ರದಿಂದ ಮೀನು ಹಿಡಿದು ಮರಳಿ ದಡಕ್ಕೆ ಬಂದ ಅವರು, ದೋಣಿಯನ್ನು ದಡಕ್ಕೆ ಎಳೆಯುತ್ತಿರುವಾಗ ಸಿಡಿಲು ಅಪ್ಪಳಿಸಿ ಜೀವ ಕಳೆದುಕೊಂಡಿದ್ದಾರೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಶಿವಮೊಗ್ಗ, ಬೆಳಗಾವಿಯಲ್ಲಿ ಅವಾಂತರ
ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ವ್ಯಾಪಕ ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗ–ತೀರ್ಥಹಳ್ಳಿ ರಸ್ತೆಯಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ವಾಲಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಸ್ಥಳೀಯರು ಮಳೆಯ ನಡುವೆಯೇ ಮರಗಳನ್ನು ಬದಿಗೆ ಸರಿಸಿ ಸಂಚಾರ ಸಾಧ್ಯಗೊಳಿಸಿದರು. ಸಾಗರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ಬೆಳಗಾವಿ ನಗರ ಮತ್ತು ತಾಲೂಕಿನಲ್ಲೂ ಭಾನುವಾರ ಸಂಜೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಸದಾಶಿವನಗರ, ಶಿವಾಜಿನಗರ, ಶಾಹೂನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮರಗಳ ಟೊಂಗೆಗಳು ಮುರಿದುಬಿದ್ದಿವೆ. ಗ್ರಾಮೀಣ ಭಾಗದ ಹಳ್ಳ–ಕೊಳ್ಳಗಳು ತುಂಬಿ ಹರಿದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಜನ ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

Related Articles

ಇತ್ತೀಚಿನ ಸುದ್ದಿಗಳು