Saturday, August 2, 2025

ಸತ್ಯ | ನ್ಯಾಯ |ಧರ್ಮ

ತಡೆಯಾಜ್ಞೆಯ ಗ್ಯಾಗ್ ಆರ್ಡರ್ ನೀಡಿದ ನ್ಯಾಯಾಧೀಶರಿಗೂ ಧರ್ಮಸ್ಥಳಕ್ಕೂ ಸಂಬಂಧ: ಕೇಸ್ ವರ್ಗಾವಣೆಗೆ ಮೆಮೋ

ಧರ್ಮಸ್ಥಳ ಹರ್ಷೇಂದ್ರ ಕುಮಾರ್, ವಿರೇಂದ್ರ ಹೆಗ್ಗಡೆ, ಧರ್ಮಸ್ಥಳ ಸಂಸ್ಥೆ ಮತ್ತು ಕುಟುಂಬದ ವಿರುದ್ಧ ಸುದ್ದಿ ಪ್ರಕಟ ಮಾಡದಂತೆ 338 ಪತ್ರಕರ್ತರು, ಹೋರಾಟಗಾರರು, ಸಂಸ್ಥೆಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಬೆಂಗಳೂರಿನ 26ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಎಸ್‌ಡಿಎಂ ಲಾ ಕಾಲೇಜು ವಿದ್ಯಾರ್ಥಿಯಾಗಿದ್ದು, ವಿರೇಂದ್ರ ಹೆಗ್ಗಡೆಯವರ ಕೇಸುಗಳನ್ನು ಪ್ರತಿನಿಧಿಸಿದ್ದ ಲಾ ಅಸೋಸಿಯೇಟ್‌ನಲ್ಲಿ ವೃತ್ತಿ ನಡೆಸಿದ್ದಾರೆ. ಹಾಗಾಗಿ ಹರ್ಷೇಂದ್ರ ಕುಮಾರ್ ದಾಖಲಿಸಿದ್ದ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಪ್ರತಿವಾದಿ 25 ಆಗಿರುವ ಪತ್ರಕರ್ತ ನವೀನ್ ಸೂರಿಂಜೆ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಮೆಮೋ ಸಲ್ಲಿಸಿದ್ದಾರೆ.

ವಕೀಲ ಎಸ್ ಬಾಲನ್ ಸಲ್ಲಿಸಿರುವ ಮೆಮೋ ಸ್ವೀಕರಿಸಿರುವ ಸಿಸಿಎಚ್- 26 ನ್ಯಾಯಾಲಯವು, “ಮೆಮೋ ಮತ್ತು ನವೀನ್ ಸೂರಿಂಜೆಯವರ ಪತ್ರವನ್ನು ಪ್ರಧಾನ ಸಿವಿಲ್ ಮುಖ್ಯ ನ್ಯಾಯಾಧೀಶರಿಗೆ ವರ್ಗಾಯಿಸಲಾಗುವುದು” ಎಂದು ಆದೇಶ ಮಾಡಿದ್ದಾರೆ.

ನ್ಯಾಯಾಲಯಕ್ಕೆ ನೀಡಿದ ಮೆಮೋದ ಜೊತೆಗಿನ ಪತ್ರದ ಸಾರಾಂಶ ಹೀಗಿದೆ :

ವಿಷಯ : ಮಾನ್ಯ ಸಿಟಿ ಸಿವಿಲ್ ಕೋರ್ಟ್ 26 ನಲ್ಲಿರುವ OS : 5185/2025 ಪ್ರಕರಣದ ವಿಚಾರಣೆಯನ್ನು ಬೇರೆ ಗೌರವಾನ್ವಿತ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ.

ಗೌರವಾನ್ವಿತ ಸಿಟಿ ಸಿವಿಲ್ ಕೋರ್ಟ್(CCH – 26)ನಲ್ಲಿ ಒಎಸ್ 5185/2025 ಪ್ರಕರಣದಲ್ಲಿ ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಪರವಾಗಿ ಐಎ ನಂ 1 & 2 ಕ್ಕೆ ಮಧ್ಯಂತರ ಆದೇಶ ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆ ಆದೇಶದ ಪ್ರಕಾರ ಹರ್ಷೇಂದ್ರ ಕುಮಾರ್, ವಿರೇಂದ್ರ ಹೆಗ್ಗಡೆಯವರ ಕುಟುಂಬ ಮತ್ತು ಸಂಸ್ಥೆಗಳ ಬಗ್ಗೆ ಯಾರೂ ಸುದ್ದಿ ಪ್ರಕಟಿಸುವಂತಿಲ್ಲ.

ನಾನು ಪತ್ರಕರ್ತನಾಗಿ ಧರ್ಮಸ್ಥಳದ ಇತಿಹಾಸದ ಬಗ್ಗೆ ಗೆಜೆಟಿಯರ್ ಆಧಾರದಲ್ಲಿ ಈ ದಿನ.ಕಾಮ್ ಸುದ್ದಿ ಮಾಧ್ಯಮದಲ್ಲಿ ಮಾತನಾಡಿದ್ದೆ. ಈದಿನ.ಕಾಮ್ ನಲ್ಲಿ ಪ್ರಸಾರವಾದ ನನ್ನ ಸಂದರ್ಶನದ ಎರಡು ವಿಡಿಯೋ ಕ್ಲಿಪ್‌ಗಳನ್ನು ಮಾನ್ಯ ಸಿಟಿ ಸಿವಿಲ್ ಕೋರ್ಟ್ ಗೆ ನೀಡಿ ನನಗೆ ತಡೆಯಾಜ್ಞೆ ನೀಡಲಾಗಿತ್ತು. ಇದೇ ಧರ್ಮಸ್ಥಳದವರು ಅವರ ವಕೀಲರ ಮೂಲಕ ಈ ದಿನ.ಕಾಮ್ ಬ್ಲಾಕ್ ಮಾಡಬೇಕು ಎಂದು ಮಾನ್ಯ ಹೈಕೋರ್ಟ್ ನಿಂದ ಆದೇಶ ತಂದಿದ್ದರು. Writ Petition No 15183/2025(GM-RES) ದಿನಾಂಕ 25.06.2025 ರ ಮಾನ್ಯ ಹೈಕೋರ್ಟ್ ಆದೇಶದಂತೆ ಈ ದಿನ.ಕಾಮ್ ಬ್ಲಾಕ್ ಆಗಿತ್ತು. ಅದರಲ್ಲಿ ನನ್ನ ವಿಡಿಯೋಗಳೂ ಸೇರಿದ್ದವು. ಆ ಬಳಿಕ ಆ ರಿಟ್ ಪಿಟೀಷನ್ ಗೆ ಈದಿನ.ಕಾಮ್ ನವರು ವಾದ ಮಂಡಿಸಿ ಬ್ಲಾಕ್ ಅನ್ನು ತೆರವುಗೊಳಿಸಿದ್ದಾರೆ. ಮಾನ್ಯ ಹೈಕೋರ್ಟ್ ಆದೇಶದಂತೆ ಅನ್ ಬ್ಲಾಕ್ ಆದ ವೀಡಿಯೋದಲ್ಲಿ ನನ್ನ ವಿಡಿಯೋ ಕೂಡಾ ಸೇರಿಕೊಂಡಿದೆ. ಈಗ ಅದೇ ವಿಡಿಯೋವನ್ನು ಸಿಟಿ ಸಿವಿಲ್ ಕೋರ್ಟ್ ಗೆ ಸಲ್ಲಿಸಿ ನನ್ನ ವಿರುದ್ದ ತಡೆಯಾಜ್ಞೆ ತಂದಿದ್ದಾರೆ. ಹೈಕೋರ್ಟ್ ಅನ್ ಬ್ಲಾಕ್ ಮಾಡಿ ಎಂದು ಹೇಳಿದ್ದ ಈದಿನ.ಕಾಮ್ ಯುಟ್ಯೂಬ್ ನಲ್ಲಿದ್ದ ವಿಡಿಯೋವನ್ನು ಮಾನ್ಯ ಸಿಟಿ ಸಿವಿಲ್ ಕೋರ್ಟ್ ಡಿಲೀಟ್ ಮಾಡಿ ಎಂದು ಹೇಳಿದೆ. ಈ ರೀತಿ ಮಾನ್ಯ ಸಿಟಿ ಸಿವಿಲ್ ಕೋರ್ಟ್ ದಾರಿತಪ್ಪಿಸಿ ಅರ್ಜಿದಾರ ಹರ್ಷೇಂದ್ರ ಕುಮಾರ್ ಮಧ್ಯಂತರ ಆದೇಶ ಪಡೆದುಕೊಂಡಿದ್ದಾರೆ.

ಈ ಆದೇಶ ಹೊರಡಿಸಿದ ಮಾನ್ಯ ಸಿಟಿ ಸಿವಿಲ್ ಕೋರ್ಟ್ ನ ಗೌರವಾನ್ವಿತ ನ್ಯಾಯಾಧೀಶರು ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ನಡೆಸಲ್ಪಡುವ ಎಸ್ ಡಿಎಂ ಲಾ ಕಾಲೇಜು ಮಂಗಳೂರು (ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು) ಇಲ್ಲಿ 1995-1998 ನೇ ಬ್ಯಾಚ್ ವಿದ್ಯಾರ್ಥಿಯಾಗಿದ್ದಾರೆ. ಧರ್ಮಸ್ಥಳ ಸಂಸ್ಥೆಗಳ ಬಗ್ಗೆ ಅರ್ಜಿಯಲ್ಲಿ ಮತ್ತು ಆದೇಶದಲ್ಲಿ ಉಲ್ಲೇಖ ಇದೆ.

ಎಸ್ ಡಿಎಂ ಲಾ ಕಾಲೇಜಿನಲ್ಲಿ ಓದು ಪೂರೈಸಿದ ಬಳಿಕ ಮಾನ್ಯ ಗೌರವಾನ್ವಿತ ನ್ಯಾಯಾಧೀಶರು ಬಲ್ಲಾಲ್ ಬಾಗ್ ನಲ್ಲಿರುವ ಕಚೇರಿಯಲ್ಲಿ ವೃತ್ತಿ ಪ್ರಾರಂಭಿಸುತ್ತಾರೆ. ಸದ್ರಿ ಕಚೇರಿಯು ಧರ್ಮಸ್ಥಳ ವಿರೇಂದ್ರ ಹೆಗ್ಗಡೆಯವರ ಕೇಸುಗಳನ್ನು ನಿರ್ವಹಿಸುತ್ತಿತ್ತು. ವಿರೇಂದ್ರ ಹೆಗ್ಗಡೆ ವರ್ಸಸ್ ಬಿ ವಿ ಸೀತಾರಾಮ್ ಪ್ರಕರಣವಾಗಿರುವ C.C.No.6143/2004 JMFC-III Court, Mangalore, D.K., for the offence p/u/s 500, 501, 502 r/w. 34 of IPC ನಲ್ಲಿ ಕೇಸ್ ನಲ್ಲಿ ಜ್ಯೂನಿಯರ್ ಆಗಿ ಕೆಲಸ ಮಾಡಿದ್ದಾರೆ. ಅವರ ಹಿರಿಯ ವಕೀಲರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಬಿ ವಿ ಸೀತಾರಾಮ್ ವರ್ಸಸ್ ಡಾ ಡಿ ವಿರೇಂದ್ರ ಹೆಗ್ಗಡೆಯವರ CRIMINAL PETITION NO. 3788 of 2013 C/W. CRIMINAL PETITION NOS.3789 of 2013, 3790 of 2013 & 3791 of 2013 ಸೇರಿದಂತೆ ಹಲವು ಪ್ರಕರಣಗಳಲ್ಲಿ ಆನ್ ರೆಕಾರ್ಡ್ ವಕೀಲರಾಗಿದ್ದಾರೆ.

ನಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಸಿಸಿಎಚ್ 26 ನ್ಯಾಯಾಲಯದಲ್ಲಿ ಒಎಸ್ 5185/2025 ರಲ್ಲಿ ರೆಸ್ಪಾಂಡೆಂಟ್ 25 ಆಗಿರುವ ನಾನು, ವೆಕೇಟಿಂಗ್ ಸ್ಟೇ ಅಪ್ಲಿಕೇಶನ್ ಮತ್ತು ಅಬ್ಜೆಕ್ಷನ್ ಗಳನ್ನು ಸಲ್ಲಿಸಿದ್ದೇನೆ. ಇದರ ವಿಚಾರಣೆಯು ಕ್ರಮವಾಗಿ 24.7.2025, 28.07.2025, 29.07.2025, 30.07.2025, 31.07.2025, 01.08.2025 ರಂದು ನಡೆಯಿತು. ಈ ಎಲ್ಲಾ ದಿನಗಳಲ್ಲಿ ನಾನು ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದೆ.

ಹಾಗಾಗಿ ತಾವು ದಯಮಾಡಿ ಈ ಪ್ರಕರಣದ ವಿಚಾರಣೆಯನ್ನು ಮಾನ್ಯ CCH 26 ನಿಂದ ಬೇರೆ ಯಾವುದಾದರೂ ಗೌರವಾನ್ವಿತ ಕೋರ್ಟ್ ಗೆ ವರ್ಗಾಯಿಸಲು ಸೂಕ್ತ ಕ್ರಮಗಳನ್ನು ನನ್ನ ವಕೀಲರಾದ ತಾವು ವಹಿಸಬೇಕು ಎಂದು ಮನವಿ.

ಸಹಿ/ ನವೀನ್ ಸೂರಿಂಜೆ, Respondent 25, Os 5185/2025, Cch -26 ಬೆಂಗಳೂರು

ಈ ಮೆಮೋ ಮತ್ತು ಪತ್ರವನ್ನು ಸ್ವೀಕರಿಸಿರುವ ಸಿಟಿ ಸಿವಿಲ್ ನ್ಯಾಯಾಧೀಶರು, ಮೆಮೋವನ್ನು ಪತ್ರದ ಸಮೇತ ಸಿಟಿ ಸಿವಿಲ್ ಮುಖ್ಯ ನ್ಯಾಯಾಧೀಶರಿಗೆ ಕಳುಹಿಸುವ ಬಗ್ಗೆ ಡೈಲಿ ಆರ್ಡರ್ನಲ್ಲಿ ಉಲ್ಲೇಖಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page