Monday, June 17, 2024

ಸತ್ಯ | ನ್ಯಾಯ |ಧರ್ಮ

ಮುಸ್ಲಿಂ ಮೀಸಲಾತಿ ಹಿಂಪಡೆಯುವ ಅಗತ್ಯವೇನಿತ್ತು? ಜಯಪ್ರಕಾಶ ಹೆಗಡೆ

ಹಿಂದಿನ ಸರಕಾರ ನಮ್ಮ ಬಳಿ ಅಭಿಪ್ರಾಯ ಕೇಳಿಲ್ಲ

ಬೆಂಗಳೂರು: ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಹಿಂದುಳಿದ ವರ್ಗಗಳ ಕೋಟದಲ್ಲಿ ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿ ಶೇಕಡಾ 4ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ಬಹಳ ವರ್ಷಗಳ ಹಿಂದೆಯೇ ನೀಡಲಾಗಿತ್ತು. ಬಸವರಾಜ್ ಬೊಮ್ಮಾಯಿ ನೇತೃತ್ವದ ಈ ಹಿಂದಿನ ಸರ್ಕಾರ ಚುನಾವಣೆ ಘೋಷಣೆ ಯಾಗುವ ಕೆಲವೇ ದಿನಗಳ ಮೊದಲು ಮೀಸಲಾತಿಯನ್ನು ರದ್ದುಪಡಿಸಿತ್ತು.

ಈ ಕುರಿತು ಈಗ ಪ್ರತಿಕ್ರಿಯಿಸಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆಯವರು ಈ ಕುರಿತು ಸರ್ಕಾರ ತಮ್ಮಿಂದ ಯಾವುದೇ ವರದಿ ಅಥವಾ ಪ್ರತಿಕ್ರಿಯೆ ಕೇಳಿರಲಿಲ್ಲ ಎಂದು ತಿಳಿಸಿದ್ದಾರೆ.

ಮುಸ್ಲಿಮರನ್ನು ಒಬಿಸಿ ಪಟ್ಟಿಯಿಂದ ಕೈ ಬಿಟ್ಟಿರುವುದು ಕಾನೂನು ಬಾಹಿರ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರ ಪಟ್ಟಿಗೆ ಸೇರಿಸಿರುವುದು ಕಾನೂನಿಗೆ ವಿರುದ್ಧ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಪಾದಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಹೆಗ್ಡೆ, ಮುಸ್ಲಿಂ ಮೀಸಲಾತಿ ರದ್ದು ಪಡಿಸುವ ಮೊದಲು ಈ ಹಿಂದಿನ ಸರ್ಕಾರ ನಮ್ಮ ಅಭಿಪ್ರಾಯ ಕೇಳಿಲ್ಲ ಮೀಸಲಾತಿ ರದ್ಧತಿ ಪಡಿಸಲು ನಾವು ಹೇಳಿಯೂ ಇಲ್ಲ. ನಮ್ಮ ಬಗ್ಗೆ ಸರ್ಕಾರ ಯಾವುದೇ ಸಲಹೆಯನ್ನು ಪಡೆದಿಲ್ಲ ಅದು ಸರ್ಕಾರದೆ ತೀರ್ಮಾನವಾಗಿದೆ ಎಂದರು.

ಈ ವಿವಾದ ಪ್ರಸ್ತುತ ಸುಪ್ರೀಂ ಕೋರ್ಟಿನಲ್ಲಿದ್ದು ಅಲ್ಲಿ ನಾವು ಪ್ರತಿವಾದಿಗಳಾಗಿರುವುದರಿಂದ ಅಲ್ಲಿಯೇ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಜೆಪಿ ಹೆಗ್ಡೆಯವರು ಮತ್ತೆ ಕಾಂಗ್ರೆಸ್‌ ಸೇರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್‌ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಗುಲ್ಲು ಎದ್ದಿತ್ತು. ನಂತರ ಇದಕ್ಕೆ ಪ್ರತಿಕ್ರಿಯಿಸಿದ್ದ ಹೆಗ್ಡೆಯವರು, ʼಹೊಸ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಭಿನಂದಿಸುವ ಸಲುವಾಗಿಯಷ್ಟೇ ಹೋಗಿದ್ದೆ ಅದೊಂದು ಕೇವಲ ಔಪಚಾರಿಕ ಭೇಟಿ ಮಾತ್ರ. ಉಳಿದದ್ದು ಊಹಾಪೋಹಗಳು ಎಂದಿದ್ದರು.

ಆದರೂ ಈ ಕುರಿತಾದ ಚರ್ಚೆಗಳು ಜಿಲ್ಲೆಯ ರಾಜಕಾರಣದಲ್ಲಿರುವುದು ಸತ್ಯ.

ಮುಸ್ಲಿಂ ಮೀಸಲಾತಿ ವಿಷಯದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತರಾತುರಿಯ ತೀರ್ಮಾನ ಕೈಗೊಂಡಿತ್ತು. ಈ ತೀರ್ಮಾನ ಅದಕ್ಕೆ ಚುನಾವಣೆಯಲ್ಲೂ ಮುಳುವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಪ್ರಸ್ತುತ ಈ ವಿವಾದ ಸುಪ್ರೀಂಕೋರ್ಟಿನಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು