ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ವಿರುದ್ಧ ಎಸ್ಐಟಿ ಪೊಲೀಸರು 4,500 ಪುಟಗಳಷ್ಟು ಚಾರ್ಜ್‌ಶೀಟ್ 26 ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದ್ದಾರೆ.
ಈಗಾಗಲೇ ಎಲ್ಲಾ ಸಾಕ್ಷಿಗಳನ್ನು ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಲಾಗಿದ್ದು, ಎಸಿಪಿ ಕಚೇರಿಯಿಂದ ದೊಡ್ಡ ಬಾಕ್ಸ್ ಗಳಲ್ಲಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಪ್ರಕರಣ ದಾಖಲಾದ ಬಳಿಕ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವುದು ನಿಯಮ. ಹಾಗಾಗಿ ಸೆಪ್ಟೆಂಬರ್ 9ಕ್ಕೆ 3 ತಿಂಗಳು ಅಂದರೆ ಸಂಪೂರ್ಣವಾಗಿ 90 ದಿನಗಳು ಮುಗಿಯಲಿವೆ. ಹಾಗಾಗಿ 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
ಈಗಾಗಲೇ ಕಾನೂನು ತಜ್ಞರಿಂದ ಪೊಲೀಸ್ ಇಲಾಖೆ ಸಲಹೆಗಳನ್ನೂ ಪಡೆದಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ಮಾಡಲಾಗಿದೆ. ಅಪರಾಧಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದು ಖಾಕಿ ಪಡೆ ಭಾರೀ ಎಚ್ಚರಿಕೆ ವಹಿಸಿದೆ.