Tuesday, November 25, 2025

ಸತ್ಯ | ನ್ಯಾಯ |ಧರ್ಮ

ಬ್ರಾಹ್ಮಣನು ತನ್ನ ಮಗಳನ್ನು ನನ್ನ ಮಗನಿಗೆ ಕೊಡುವವರೆಗೆ ಮೀಸಲಾತಿ ಮುಂದುವರೆಯಲಿ: ಚರ್ಚೆಯ ಕಿಡಿ ಹೊತ್ತಿಸಿದ ಐಎಎಸ್ ಅಧಿಕಾರಿಯ ಹೇಳಿಕೆ

ಭೋಪಾಲ್: ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರು ಮೀಸಲಾತಿಗೆ ಸಂಬಂಧಿಸಿದಂತೆ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, “ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಅಥವಾ ನನ್ನ ಮಗ ಆಕೆಯೊಂದಿಗೆ ಸಂಬಂಧ ಹೊಂದುವವರೆಗೆ ಮೀಸಲಾತಿ ಮುಂದುವರಿಯಬೇಕು,” ಎಂದು ಹೇಳಿಕೆ ನೀಡಿದ್ದಾರೆ.

ಸಂತೋಷ್ ವರ್ಮಾ ಅವರ ಈ ಹೇಳಿಕೆಯನ್ನು ಅಖಿಲ ಭಾರತ ಬ್ರಾಹ್ಮಣ ಸಮಾಜವು ತೀವ್ರವಾಗಿ ಖಂಡಿಸಿದೆ. ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ ಅವರು, ಈ ಹೇಳಿಕೆ ಇಡೀ ಮೇಲ್ಜಾತಿಯ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಿಶ್ರಾ ಅವರ ಪ್ರಕಾರ, ಮದುವೆಯು ಸಂಪೂರ್ಣವಾಗಿ ಖಾಸಗಿ ಮತ್ತು ವೈಯಕ್ತಿಕ ವಿಷಯ. “ಮಗಳು ದಾನ ಮಾಡುವ ವಸ್ತುವಲ್ಲ. ಮೇಲ್ಜಾತಿಯ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇಂತಹ ಹೇಳಿಕೆಗಳನ್ನು ನೀಡುವುದು ಅತ್ಯಂತ ಖಂಡನೀಯ,” ಎಂದು ಅವರು ತಿಳಿಸಿದರು. ಮೀಸಲಾತಿಗೂ ಮತ್ತು ಅಂತರ್ಜಾತಿ ವಿವಾಹಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಅಲ್ಲದೆ, ಮಿಶ್ರಾ ಅವರು ಐಎಎಸ್ ವರ್ಮಾ ಅವರ ವಿರುದ್ಧ ಐಎಎಸ್ ನಡವಳಿಕೆ ನಿಯಮಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಅಜಾಕ್ಸ್‌ನ ರಾಜ್ಯ ಅಧ್ಯಕ್ಷರಾಗಿರುವ ವರ್ಮಾ ಅವರ ವಿರುದ್ಧ ಶೀಘ್ರವೇ ಎಫ್‌ಐಆರ್ ದಾಖಲಿಸಬೇಕು. ಒಂದು ವೇಳೆ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿದ್ದರೆ, ಇಡೀ ಬ್ರಾಹ್ಮಣ ಸಮಾಜವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page