ಪ್ರಸ್ತುತ ಇಡೀ ಜಗತ್ತಿನಲ್ಲಿ ಮಧುಮೇಹ ಮತ್ತು ಬೊಜ್ಜು ಮಾನವಕುಲವನ್ನು ಕಾಡುತ್ತಿರುವ ಅತ್ಯಂತ ದೊಡ್ಡ ಆರೋಗ್ಯ ಸಮಸ್ಯೆಗಳಾಗಿವೆ. ವಿಶ್ವದಾದ್ಯಂತ ಪ್ರತಿ 9 ಜನರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿದ್ದರೆ, ಸುಮಾರು 211 ಕೋಟಿಗೂ ಅಧಿಕ ಜನ ಅತಿಯಾದ ದೇಹದ ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ಈಗಾಗಲೇ ಕೆಲವು ಔಷಧಗಳು ಲಭ್ಯವಿದ್ದರೂ ಅವುಗಳ ಪ್ರಯೋಜನಗಳು ಸೀಮಿತವಾಗಿವೆ.
ಈ ಹಿನ್ನೆಲೆಯಲ್ಲಿ ಅಮೆರಿಕದ ಸಂಶೋಧಕರು ಟೈಪ್-2 ಡಯಾಬಿಟಿಸ್ ಮತ್ತು ಬೊಜ್ಜನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ‘ರೆಟಾಟ್ರುಟೈಡ್’ ಎಂಬ ಪ್ರಾಯೋಗಿಕ ಇಂಜೆಕ್ಷನ್ ಅನ್ನು ಸಿದ್ಧಪಡಿಸಿದ್ದಾರೆ. ‘ಟ್ರಿಪಲ್-ಆಕ್ಷನ್ ಏಜೆಂಟ್’ ಆಗಿ ಕೆಲಸ ಮಾಡುವ ಈ ಇಂಜೆಕ್ಷನ್ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರ ಜೊತೆಗೆ ದೇಹದ ತೂಕವನ್ನು ಗಣನೀಯವಾಗಿ ಇಳಿಸುತ್ತದೆ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಅದ್ಭುತ ಫಲಿತಾಂಶ: ಒಟ್ಟು 930 ಜನರ ಮೇಲೆ ನಡೆಸಲಾದ ಮೂರನೇ ಹಂತದ (Phase 3) ವೈದ್ಯಕೀಯ ಪ್ರಯೋಗಗಳಲ್ಲಿ ಈ ಇಂಜೆಕ್ಷನ್ ಅತ್ಯಂತ ಆಶಾದಾಯಕ ಮತ್ತು ಸಾನ್ಯೂಲ ಫಲಿತಾಂಶಗಳನ್ನು ನೀಡಿದೆ. ಈ ಕೋರ್ಸ್ ಅನ್ನು ಪೂರ್ಣಗೊಳಿಸಲು ರೋಗಿಗಳು ವಾರಕ್ಕೆ ಒಂದರಂತೆ ಒಟ್ಟು 40 ವಾರಗಳ ಕಾಲ ಈ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ವರದಿಯ ಪ್ರಕಾರ, ಈ 40 ವಾರಗಳ ಕೋರ್ಸ್ ಪೂರ್ಣಗೊಳಿಸಿದವರಲ್ಲಿ ರಕ್ತದ ಸಕ್ಕರೆ ಪ್ರಮಾಣವು (ರಕ್ತದಲ್ಲಿನ ಗ್ಲೂಕೋಸ್ ಮಟ್ಟ) ಶೇಕಡಾ 1.9 ರಷ್ಟು ಕಡಿಮೆಯಾಗಿದೆ. ಅದರೊಂದಿಗೆ ಅತ್ಯಂತ ಪ್ರಮುಖವಾಗಿ, 100 ಕೆಜಿ ತೂಕ ಹೊಂದಿದ್ದ ವ್ಯಕ್ತಿಯೊಬ್ಬರು ಈ ಇಂಜೆಕ್ಷನ್ ಬಳಕೆಯಿಂದ ಬರೋಬ್ಬರಿ 15 ರಿಂದ 28 ಕೆಜಿಯಷ್ಟು ದೇಹದ ತೂಕವನ್ನು ಕಳೆದುಕೊಂಡಿರುವುದು ಪ್ರಯೋಗದ ವೇಳೆ ದೃಢಪಟ್ಟಿದೆ.
ಕೆಲಸ ಮಾಡುವ ವಿಧಾನ ಮತ್ತು ವಿಶೇಷತೆಗಳು:
- ಔಷಧದ ಹೆಸರು: ರೆಟಾಟ್ರುಟೈಡ್ (Retatrutide)
- ವಿಶೇಷತೆ: ಟ್ರಿಪಲ್-ಆಕ್ಷನ್ ಏಜೆಂಟ್ (ದೇಹದ ಮೂರು ಪ್ರಮುಖ ಹಾರ್ಮೋನ್‌ಗಳ ಮೇಲೆ ಏಕಕಾಲದಲ್ಲಿ ಪ್ರಭಾವ ಬೀರುತ್ತದೆ).
- ಪ್ರಮುಖ ಪ್ರಯೋಜನಗಳು: ಟೈಪ್-2 ಡಯಾಬಿಟಿಸ್ ನಿಯಂತ್ರಣ, ದೇಹದ ತೂಕ ಇಳಿಸುವುದು ಮತ್ತು ಶಕ್ತಿ ಉತ್ಪಾದನೆ.
ಈ ಔಷಧವು ಅತಿಯಾದ ಹಸಿವನ್ನು ನಿಯಂತ್ರಿಸುವ ಮೂಲಕ ದೇಹದಲ್ಲಿ ಅನಗತ್ಯವಾಗಿ ಸಂಗ್ರಹವಾಗಿರುವ ಕೊಬ್ಬನ್ನು ಅತ್ಯಂತ ವೇಗವಾಗಿ ಕರಗಿಸುತ್ತದೆ. ಅದೇ ಸಮಯದಲ್ಲಿ ದೇಹಕ್ಕೆ ಅಗತ್ಯವಿರುವ ಹೊಸ ಶಕ್ತಿ ಮತ್ತು ಚೈತನ್ಯವನ್ನು ತುಂಬಲು ಇದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಮಧುಮೇಹ ಮತ್ತು ಬೊಜ್ಜಿನಿಂದ ಬೇಸತ್ತಿರುವ ಕೋಟ್ಯಂತರ ಜನರಿಗೆ ಈ ನೂತನ ಸಂಶೋಧನೆ ಭವಿಷ್ಯದಲ್ಲಿ ದೊಡ್ಡ ವರದಾನವಾಗುವ ಸಾಧ್ಯತೆಯಿದೆ.
