Thursday, June 20, 2024

ಸತ್ಯ | ನ್ಯಾಯ |ಧರ್ಮ

ತೆಲಂಗಾಣ ಸಿಎಂ ಆಗುತ್ತಾರೆಯೇ ರೇವಂತ್‌ ರೆಡ್ಡಿ!

ಬೆಂಗಳೂರು: ಕೆ ಚಂದ್ರಶೇಖರ್ ರಾವ್  (ಕೆಸಿಆರ್‌) ಮತ್ತು ಅವರ ಭಾರತ ರಾಷ್ಟ್ರ ಸಮಿತಿ  -ಬಿಆರ್‌ಎಸ್‌ಗೆ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ತೆಲಂಗಾಣ ಚುನಾವಣೆಯಲ್ಲಿ ಭಾರೀ ಹಿನ್ನಡೆಯಲ್ಲಿದ್ದು, ಕಾಂಗ್ರೆಸ್ ಸ್ಪಷ್ಟ ಗೆಲುವಿನತ್ತ ಸಾಗುತ್ತಿದೆ.

ಇಲ್ಲಿ ನೋಡಿ: ತೆಲಂಗಾಣ ಚುನಾವಣಾ – 2023 ಫಲಿತಾಂಶ

ಸದ್ಯ ಕಾಂಗ್ರೇಸ್‌ ಗೆಲುವಿನ ರೂವಾರಿಯಾಗಿರುವ, ತೆಲಂಗಾಣದಲ್ಲಿ ಕಾಂಗ್ರೇಸ್‌ ಮತ್ತೆ ಮೈಕೊಡವಿ ಎದ್ದು ನಿಲ್ಲಲು ಕಾರಣಕರ್ತನಾದ ಫೈರ್‌ ಬ್ರಾಂಡ್‌ ನಾಯಕ ರೇವಂತ್‌ ರೆಡ್ಡಿ ಆರು ವರ್ಷದ ಹಿಂದೆ ಕಾಂಗ್ರೇಸ್‌ನಲ್ಲಿಯೇ ಇರಲಿಲ್ಲ!

ಕೊಡಂಗಲ್ ಕ್ಷೇತ್ರವನ್ನು ಗೆದ್ದಿರುವ, ಕಾಮರೆಡ್ಡಿಯಲ್ಲೂ ಕೆಸಿಆರ್ ವಿರುದ್ಧ ಸ್ಪರ್ಧಿಸಿದ ಎ ರೇವಂತ್ ರೆಡ್ಡಿ 2017 ರಲ್ಲಿ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಕಾಂಗ್ರೆಸ್ ಸೇರಿದವರು.

ಕಾಂಗ್ರೇಸ್‌ ಸೇರಿ ನಾಲ್ಕೇ ವರ್ಷಗಳಲ್ಲಿ ಆಗಿನ ರಾಜ್ಯ ಕಾಂಗ್ರೇಸ್‌ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನದ ಹೊರತಾಗಿಯೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (ಟಿಪಿಸಿಸಿ) ಅಧ್ಯಕ್ಷರಾಗಿ  ಅಧಿಕಾರ ವಹಿಸಿಕೊಂಡರು.

ಸದ್ಯ ತೆಲಂಗಾಣದಲ್ಲಿ ಕಾಂಗ್ರೇಸ್‌ ನೋಡುತ್ತಿರುವ ಈ ಬೃಹತ್ ಗೆಲುವನ್ನು ಸ್ವತಃ ಕಾಂಗ್ರೆಸ್‌ಗೆ ನಂಬಲಾಗದಂತಿದೆ. ಮುಖ್ಯವಾಗಿ ರೇವಂತ್ ಕಳೆದ ವರ್ಷವಷ್ಟೇ ಪಕ್ಷದ ಒಳಗೆ ಎದ್ದಿದ್ದ ಪೂರ್ಣ ಪ್ರಮಾಣದ ಬಂಡಾಯವನ್ನು ಹತ್ತಿಕ್ಕಲು ಹೋರಾಡುತ್ತಿದ್ದರೆ, ದಾಸೋಜು ಶ್ರವಣ್ ಮತ್ತು ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿಯಂತಹ ಹಿರಿಯ ನಾಯಕರು ಕ್ರಮವಾಗಿ ಬಿಆರ್‌ಎಸ್ ಮತ್ತು ಬಿಜೆಪಿಗೆ ಸೇರಿದ್ದರು. ರಾಜ್ ಗೋಪಾಲ್ ರೆಡ್ಡಿ ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದು, ಈ ಚುನಾವಣೆಯಲ್ಲಿ ಮುನುಗೋಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ರೇವಂತ್ ಸದ್ಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಸಿಎಂ ಮುಖವೂ ಆಗಿದ್ದಾರೆ. ಆದರೆ ಹೈಕಮಾಂಡ್ ಅವರನ್ನು ಹಿರಿಯ ನಾಯಕರಾದ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಉತ್ತರಕುಮಾರ್ ರೆಡ್ಡಿಯವರನ್ನು ಬಿಟ್ಟು ಸಿಎಂ ಹುದ್ದೆಗೆ ಆಯ್ಕೆ ಮಾಡುತ್ತದೆಯೇ ಎಂಬ ಪ್ರಶ್ನೆಯೊಂದಿದೆ.

ಆದರೆ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸರ್ವೇಯಲ್ಲಿ ಶೇ.21ರಷ್ಟು ಮತದಾರರು ರೇವಂತ್ ಸಿಎಂ ಆಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಬಿವಿಪಿಯಿಂದ ಟಿಡಿಪಿಗೆ – ಟಿಡಿಪಿಯಿಂದ ಕಾಂಗ್ರೆಸ್‌ಗೆ!

ಐವತ್ನಾಲ್ಕು ವರ್ಷ ಪ್ರಾಯದ ರೇವಂತ್ ರೆಡ್ಡಿ 2006 ರಲ್ಲಿ ಜೆಡ್‌ಪಿಟಿಸಿ – ಜಿಲ್ಲಾ ಪಂಚಾಯತ್‌ ಟೆರಿಟೋರಿಯಲ್‌ ಕಮಿಟಿಯ ಪ್ರತಿನಿಧಿಯಾಗಿ, 2008 ರಲ್ಲಿ ಸ್ವತಂತ್ರ ಎಂಎಲ್‌ಸಿಯಾಗಿ, 2009 ರಲ್ಲಿ ಸಂಯುಕ್ತ ಆಂಧ್ರಪ್ರದೇಶದ ಕೊಡಂಗಲ್ ಕ್ಷೇತ್ರದಿಂದ ತಮ್ಮ ಮೊದಲ ಅಸೆಂಬ್ಲಿ ಚುನಾವಣೆಯನ್ನು ಗೆದ್ದರು. ಆಗ ಅವರು ಓರ್ವ ಸುಶಿಕ್ಷಿತ ಟಿಡಿಪಿ ನಾಯಕರಾಗಿ, ಆಂಧ್ರಪ್ರದೇಶದಲ್ಲಿ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡುರವರ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದ್ದವರು.

ರೇವಂತ್‌ ಐದು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಗುರುನಾಥರೆಡ್ಡಿ ಅವರನ್ನು ಸೋಲಿಸಿದ್ದು ಸಣ್ಣ ವಿಷಯವೇನಲ್ಲ. ಔಟ್‌ಲುಕ್‌ಗೆ ನೀಡಿದ ಸಂದರ್ಶನದಲ್ಲಿ ರೇವಂತ್ “‌ನನ್ನ ಕ್ಷೇತ್ರ ಎಲ್ಲಿದೆ ಎಂಬುದೇ ನನಗೆ ತಿಳಿದಿರಲಿಲ್ಲ” ಎಂದು ಹೇಳಿದ್ದರು.

ರೇವಂತ್‌ ಎರಡನೇ ಬಾರಿಗೆ 2014 ರಲ್ಲಿ ಟಿಡಿಪಿಯಿಂದ ಕೊಡಂಗಲ್ ಗೆದ್ದರು. ಆದರೂ, ಮೇ 2015 ರಲ್ಲಿ, ಎಂಎಲ್‌ಸಿ ಚುನಾವಣೆಯಲ್ಲಿ ಟಿಡಿಪಿ ಅಭ್ಯರ್ಥಿಗೆ ಮತ ಹಾಕಲು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್‌ಸನ್‌ಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ರೇವಂತ್‌ ಅವರನ್ನು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತು.

2017 ರಲ್ಲಿ ಕಾಂಗ್ರೇಸ್‌ಗೆ!

ಕಾಂಗ್ರೆಸ್‌ ಸೇರಿ ತಮಗೆ ಸಿಕ್ಕಿದ ಟಿಕೆಟ್‌ನಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿದ ರೇವಂತ್, ಬಿಆರ್‌ಎಸ್‌ನ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ಪಟ್ನಂ ಮಹೇಂದರ್ ರೆಡ್ಡಿ ವಿರುದ್ಧ ಸೋತರು. 2018 ರ ಚುನಾವಣೆಯ ಸಮಯದಲ್ಲಿ, ಕೆಸಿಆರ್ ಅವರ ರ್ಯಾಲಿಯನ್ನು ತಡೆದು ನಿಲ್ಲಿಸುತ್ತೇನೆ ಎಂದ ರೇವಂತ್ ಅವರನ್ನು ಅವರ ಮನೆಯಿಂದಲೇ ಬಂಧಿಸಲಾಯಿತು.

ಅಸೆಂಬ್ಲಿ ಚುನಾವಣೆಯಲ್ಲಿ ಸೋತ ರೇವಂತ್, ಕೆಲವು ತಿಂಗಳ ನಂತರ ಮಲ್ಕಾಜ್‌ಗಿರಿಯಿಂದ 2019 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು.

ರೇವಂತ್ ವಿದ್ಯಾರ್ಥಿಯಾಗಿದ್ದಾಗ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಸದಸ್ಯರಾಗಿದ್ದರು. ಈ ಚುನಾವಣಾ ಪ್ರಚಾರದ ಉದ್ದಕ್ಕೂ, ಎಐಎಂಐಎಂ ಅಧ್ಯಕ್ಷ ಮತ್ತು ಬಿಆರ್‌ಎಸ್‌  ಅನೌಪಚಾರಿಕ ದೋಸ್ತಿ ಅಸಾದುದ್ದೀನ್ ಓವೈಸಿ ರೇವಂತ್‌ರನ್ನು ‘ಆರ್‌ಎಸ್‌ಎಸ್‌ ಅಣ್ಣಾ’ ಎಂದೇ ಕರೆದಿದ್ದರು.

ರೇವಂತ್ ತಮ್ಮ ರಾಜಕೀಯ ಏರಿಳಿತದ ಸಮಯದಲ್ಲಿಯೂ ಕೆಸಿಆರ್‌ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿ ಫೈರ್‌ಬ್ರಾಂಡ್‌ ನಾಯಕರಾದವರು. ಹಾಗೆಂದು, ಅವರು ಎಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯತೆಯನ್ನು ಇಟ್ಟುಕೊಂಡಿದ್ದಾರೆ ಎಂದರ್ಥವಲ್ಲ.

ರೇವಂತ್ ವಿರುದ್ಧ ಕಾಂಗ್ರೇಸ್‌ನಲ್ಲೇ ಬಂಡಾಯ!

ತೆಲಂಗಾಣದಲ್ಲಿ ಕಾಂಗ್ರೆಸ್ ಸೋಲಿನ ನಂತರ ರೇವಂತ್ ರೆಡ್ಡಿ ಟಿಪಿಸಿಸಿ ಮುಖ್ಯಸ್ಥರಾದರು. ಸುಮಾರು ಎರಡು ವರ್ಷಗಳ ಹಿಂದಿನವರೆಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಸ್ಥಿತಿ ಹೀನಾಯವಾಗಿತ್ತು. 2018 ರಲ್ಲಿ ಕೇವಲ ಶೇ.28 ಮತ ಹಂಚಿಕೆ ಮತ್ತು 119 ಸದಸ್ಯರ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಪಡೆದು ಹೀನಾಯ ಸೋಲನ್ನು ಕಂಡಿತ್ತು. ನಂತರ 2019 ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿತ್ತು. ಕಾಂಗ್ರೇಸ್‌ಗೆ ಜೀವ ಉಳಿಸಿಕೊಳ್ಳಲು ಗುಟುಕು ನೀರಿನ ಅಗತ್ಯ ಇತ್ತು.

ಆದರೆ, ನಂತರದ ಉಪಚುನಾವಣೆಗಳಲ್ಲೂ ಅದು ಆಗಲೇ ಇಲ್ಲ. ಹುಜೂರ್‌ನಗರ ಮತ್ತು ನಾಗಾರ್ಜುನ ಸಾಗರ ಸೇರಿದಂತೆ ಕಾಂಗ್ರೆಸ್ ಪ್ರಬಲವಾಗಿದ್ದಲ್ಲೂ ಇದು ಸಾದ್ಯವಾಗಲಿಲ್ಲ. ಜಿಎಚ್‌ಎಂಸಿ ಚುನಾವಣೆಯಲ್ಲಿ ಬಿಜೆಪಿಯ ಏಳಿಗೆಯೊಂದಿಗೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.

ತೆಲಂಗಾಣ ಕಾಂಗ್ರೇಸ್‌ ನಾಯಕತ್ವದ ಬದಲಾವಣೆಯನ್ನು ಬಯಸಿತ್ತು, ಆದರೆ 2017 ರಲ್ಲಿ ಪಕ್ಷಕ್ಕೆ ಸೇರಿದ್ದ ರೇವಂತ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದಾಗ, ಹಿರಿಯ ನಾಯಕರಿಗೆ ತೀವ್ರ ಮುಖಭಂಗವಾಯಿತು.2022 ರಲ್ಲಿ ತೆಲಂಗಾಣ ಕಾಂಗ್ರೇಸ್‌ನ ಆಂತರಿಕ ಒಳಜಗಳ ಇನ್ನಷ್ಟು ಹೆಚ್ಚಾಯಿತು. ಹಿರಿಯ ಕಾಂಗ್ರೆಸ್ ನಾಯಕ ದಾಸೋಜು ಶ್ರವಣ್ ರಾಜ್ಯಾಧ್ಯಕ್ಷರನ್ನು ದೂರುತ್ತಲೇ ಪಕ್ಷವನ್ನು ತೊರೆದರು.

ರೇವಂತ್ ಅವರು ಪಕ್ಷವನ್ನು ಹೆಚ್ಚು ಆಕ್ರಮಣಕಾರಿಯಾಗಿ ಸಮರ್ಥಿಸುತ್ತಿದ್ದಾರೆ. ಅವರು ಎಐಸಿಸಿಯ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಫ್ರಾಂಚೈಸಿಯಾಗಿ ಟಿಪಿಸಿಸಿಯನ್ನು(ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ) ನಡೆಸುತ್ತಿದ್ದಾರೆ...ಅವರು ಪಕ್ಷವನ್ನು ತನ್ನ ಖಾಸಗಿ ಆಸ್ತಿ ಎಂದು ಭಾವಿಸಿಕೊಂಡಿದ್ದಾರೆ - ದಾಸೋಜು ಶ್ರವಣ್

ಮಾತ್ರವಲ್ಲ, ರೇವಂತ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದಾದ ಬೆನ್ನಲ್ಲೇ, ರೇವಂತ್ ಅವರನ್ನು ಮತ್ತೊಬ್ಬ ಕಾಂಗ್ರೇಸ್‌ ನಾಯಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ (ಮುನುಗೋಡು ಶಾಸಕರಾಗಿದ್ದವರು) ಟೀಕಿಸುತ್ತಾ ಪಕ್ಷವನ್ನು ತೊರೆದರು. ಇವರು “ ರೇವಂತ್ ಅವರ ಆಡಳಿತ ಶೈಲಿ ಕಬ್ಬಿಣದ ಕಡಲೆ ಮತ್ತು ಎಲ್ಲಾ ನಾಯಕರನ್ನು ಹೊಂದಿಸಿಕೊಂಡು ಹೋಗುವ ಕಾಂಗ್ರೆಸ್‌ನ ಸ್ವಭಾವ ಇವರಿಗೆ ಸರಿಹೊಂದುವುದಿಲ್ಲ,” ಎಂದು ಟೀಕಿಸಿದ್ದರು.

 ಕರ್ನಾಟಕ ಚುನಾವಣೆಯ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರಿ ಗೆಲುವು ದಾಖಲಿಸಿದಾಗ ತೆಲಂಗಾಣ ಕಾಂಗ್ರೇಸ್‌ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಬೆಳೆಯಿತು. ಈಗ ತೆಲಂಗಾಣವೂ ಕಾಂಗ್ರೇಸ್‌ ಗೆಲುವನ್ನು ನೋಡಲು ಸಿದ್ದವಾಗಿದೆ. ರೇವಂತ್‌ ರೆಡ್ಡಿ ಮುತಾಲಿಕೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೇಸ್‌ ಗೆಲುವಿನ ಹಾದಿಯಲ್ಲಿ ಸಾಗಿರುವುದರ ಹೆಗ್ಗಳಿಕೆ ರೇವಂತ್‌ ಪಾಲಾಗುತ್ತದೆಯೇ? ಒಂದು ವೇಳೆ ಹಾಗೇನಾದರೂ ಆದರೆ, ಈಗಾಗಲೇ ನಲ್ಗೊಂಡ ವಲಯದ ಮೇಲೆ ಹಿಡಿತ ಹೊಂದಿರುವ ಕೋಮಟಿರೆಡ್ಡಿ ಸಹೋದರರಂತಹ ಕಾಂಗ್ರೇಸ್‌ ನಾಯಕರು ರೇವಂತ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇವರು ಸುಮ್ಮನೆ ಇರುತ್ತಾರೆಯೇ? ಹೈಕಮಾಂಡ್‌ ಕೃಪಾಶೀರ್ವಾದ ಇರುವ ರೇವಂತ್ ಸಿಎಂ ಸ್ಥಾನ ಅಲಂಕರಿಸುತ್ತಾರೆಯೇ…. ಎಂದು ಕಾದು ನೋಡಬೇಕು.

Related Articles

ಇತ್ತೀಚಿನ ಸುದ್ದಿಗಳು