Home ಅಂಕಣ ಸಮೃದ್ಧ ಬಾಲ್ಯವೇ ನನ್ನ ಬದುಕಿನ ಬೇರು (ಹೃದಯಶಿವ ಅವರ ಅಂಕಣ ಭಾಗ-01)

ಸಮೃದ್ಧ ಬಾಲ್ಯವೇ ನನ್ನ ಬದುಕಿನ ಬೇರು (ಹೃದಯಶಿವ ಅವರ ಅಂಕಣ ಭಾಗ-01)

0

(ಖ್ಯಾತ ಗೀತ ರಚನೆಕಾರ, ಕವಿ ಹಾಗೂ ಲೇಖಕ ಹೃದಯ ಶಿವ ಅವರು ಇನ್ನು ವಾರಕ್ಕೊಮ್ಮೆ ತಮ್ಮ ಬಾಲ್ಯ ಕಾಲದ ಬದುಕಿನ ಕುರಿತು ಪೀಪಲ್‌ ಮಿಡಿಯಾದಲ್ಲಿ ʼಮುತ್ತಿನ ಜೋಳಿಗೆʼ ಹೆಸರಿನ ಅಂಕಣ ಬರೆಯಲಿದ್ದಾರೆ.)

ನಮ್ಮವ್ವನನ್ನು ಮದುವೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ನಮ್ಮಪ್ಪ ಮೊದಲೊಂದು ಮದುವೆಯಾಗಿ ಆಕೆಯಿಂದ ಬೇರೆಯಾಗಿದ್ದ. ಆ ಮದುವೆಯ ದೆಸೆಯಿಂದ ಕೋರ್ಟು, ಕಚೇರಿ, ಜೈಲು ಇತ್ಯಾದಿಗಳನ್ನು ನೋಡಿದ್ದ. ಆ ಬಗ್ಗೆ ಇಲ್ಲಿ ವಿವರವಾಗಿ ಬರೆಯುವುದು ಬೇಡವೆಂದು ಭಾವಿಸುತ್ತೇನೆ. ಇಷ್ಟಕ್ಕೂ ಸ್ವಭಾವದಲ್ಲಿ ಮೃದು ಸ್ವಭಾವದ ವ್ಯಕ್ತಿಯಾಗಿದ್ದ ನಮ್ಮಪ್ಪ, ಹೊಲ, ತೋಟ, ಪೂಜೆ ಇತ್ಯಾದಿಗಳಲ್ಲಿ ತೊಡಗಿರುತ್ತಿದ್ದ ನನ್ನಪ್ಪ ಹೇಗೆ ಅಂಥದೊಂದು ಆಘಾತದ ಸುಳಿಯಿಂದ ಹೊರಬಂದು ಬದುಕಿನಲ್ಲಿ ಸುಧಾರಿಸಿಕೊಂಡನೋ ಅಂತ ಅಚ್ಚರಿಯಿಂದ ಆಲೋಚಿಸುತ್ತೇನೆ. ಇಂಥದೊಂದು ಹಿನ್ನೆಲೆಯಿದ್ದ ನಮ್ಮಪ್ಪ ಆನಂತರ ನಮ್ಮವ್ವನನ್ನು ದೇವಸ್ಥಾನವೊಂದರಲ್ಲಿ ಮದುವೆಯಾದನಂತೆ. ಮದುವೆಯಾದ ಮೂರು ವರ್ಷಗಳ ನಂತರ ಮೊದಲನೇ ಮಗನಾಗಿ ಒಂದು ಸಂಕ್ರಾಂತಿಯಂದು ನಾನು ಹುಟ್ಟಿದೆ. ನನ್ನ ಹಿಂದೆ ತಲಾ ಎರಡೆರಡು ವರ್ಷಗಳಿಗೊಮ್ಮೊಮ್ಮೆ ಸುಧಾ ತಂಗಿಯಾಗಿಯೂ, ಕುಮಾರ ತಮ್ಮನಾಗಿಯೂ ಹುಟ್ಟಿದರು. ಕನಕಪುರ ಸಮೀಪದ ಕೆಬ್ಬರೆ ನಮ್ಮೂರು. ನನಗೆ ದೊಡ್ಡಮಂಚೇಗೌಡ ಅಂತ ನಾಮಕರಣ ಮಾಡಿ ಊರಿನೆಲ್ಲರನ್ನು ಆಹ್ವಾನಿಸಿ ಒಬ್ಬಟ್ಟಿನೂಟ ಮಾಡಿಸಿ ಕಳಿಸಿದ್ದನಂತೆ ನನ್ನ ತಾತ. ಸ್ಕೂಲಿಗೆ ಸೇರಿಸುವಾಗ ಕೆ.ಎಂ.ಶಿವಣ್ಣ ಆದ ನಾನೀಗ ಹೃದಯಶಿವನಲ್ಲಿಗೆ ಬಂದು ನಿಂತಿದ್ದೇನೆ.

ಮಗುವಿಗೆ ತಾಯಿಹಾಲು ಎಷ್ಟು ಮಹತ್ವಪೂರ್ಣದ್ದು ಎಂಬುದನ್ನು ನೀವು ಬಲ್ಲಿರಿ. ಅಂತಹ ತಾಯಿಹಾಲಿನಿಂದ ವಂಚಿತನಾಗಿದ್ದೆ. ನಮ್ಮವ್ವನಿಗೆ ಎದೆಬಾವು ಕಾಣಿಸಿಕೊಂಡ ಕಾರಣ ನನಗೆ ಎದೆಹಾಲು ಕುಡಿಯುವ ಅವಕಾಶ ಸಿಗಲಿಲ್ಲವೆಂದು ನಮ್ಮಮ್ಮ (ಅವ್ವನ ಅವ್ವ) ಹೇಳುತ್ತಿದ್ದಳು. ಹಾಗಾದರೆ ಹೇಗೆ ಬದುಕಿತು ಈ ಜೀವ? ಕಾಮಕಸ್ತೂರಿ ಬೀಜ, ಅಳಲೆಕಾಯಿ, ಮಂದುಪ್ಪು, ಬಜೆ ಮುಂತಾದವನ್ನು ಅರೆದು, ಅದಕ್ಕೆ ಬೆಂಕಿಯಲ್ಲಿ ಕೆಂಪಗೆ ಕಾದ ಕುಡುಗೋಲಿನ ತುದಿಯನ್ನು ಅದ್ದಿ, ಹೊಲಗೇರಿಯಿಂದ ಕರೆದು ತರುತ್ತಿದ್ದ ನಾಟಿಹಸುವಿನ ಹಾಲಿನೊಂದಿಗೆ ಬೆರೆಸಿ ಒಳಲೆಯಿಂದ ಇಷ್ಟಿಷ್ಟೇ ಇಷ್ಟಿಷ್ಟೇ ಕುಡಿಸುತ್ತಿದ್ದದ್ದು, ಶಿವಾಲದಪ್ಪ, ತಾಯಿಮುದ್ದವ್ವ, ಕ್ವಾಣನಮಾರಮ್ಮ, ಮಾದಪ್ಪ, ಬೀರಪ್ಪ, ಚಿನ್ನದಗಿರಿಯಯ್ಯ ಮುಂತಾದ ದೇವರುಗಳಿಗೆ ಅರಿಸಿನದ ಬಟ್ಟೆಯಲ್ಲಿ ನಮ್ಮಮ್ಮ ಕಾಣಿಕೆ ಕಟ್ಟಿದ್ದು, ಹರಿಕೆ ಹೊತ್ತಿದ್ದು, ಚಿಟಿಕೆ ಹಾಕಿದ್ದು, ಇಳಿ ತೆಗೆದದ್ದು, ಮೊಗೆ ಹಾಕಿದ್ದು, ಮುದ್ದಿಸಿದ್ದು, ಉಣಿಸಿದ್ದು, ತಿನಿಸಿದ್ದು, ತೂಗಿದ್ದು, ತಟ್ಟಿದ್ದು, ಜೋಗುಳ ಹಾಡಿದ್ದು, ದೊಡ್ಡಾಲಳ್ಳಿಯ ನಿಡಗಲ್ಲು ಡಾಕ್ಟರು, ಕೋಡಳ್ಳಿಯ ಸುಬ್ಬಣ್ಣ ಡಾಕ್ಟರು ಚುಚ್ಚಿದ್ದು – ಈ ಎಲ್ಲದರ ಕೃಪೆಯಿಂದ ಎಂದೋ ಮಣ್ಣಾಗಬೇಕಿದ್ದ ನಾನು ಇನ್ನೂ ಉಸಿರಾಡುತ್ತಿದ್ದೇನೆ.

(ಹೃದಯ ಶಿವ ಅವರು ಹುಟ್ಟಿ ಬೆಳೆದ ಕೆಬ್ಬರೆ .)

ಕೆಬ್ಬರೆ ನಮ್ಮೂರಾದರೂ ನಾನು ಹುಟ್ಟಿದ್ದು ನಮ್ಮವ್ವನ ತವರೂರಾದ ಚೀಲಂದವಾಡಿಯಲ್ಲಿ; ದೊಡ್ಡಾಲಹಳ್ಳಿಯ ಮಗ್ಗುಲಿಗೆ ಅಂಟಿಕೊಂಡ ದಟ್ಟ ಕಾನನದ ಪುಟ್ಟ ದೊಡ್ಡಿ ಈ ಚೀಲಂದವಾಡಿ. ಕಾವೇರಿ ತಟದ ಮುತ್ತತ್ತಿಗೋ, ಮಾದಯ್ಯನಗಿರಿಗೋ ಹೋಗಬೇಕೆಂದರೆ ಕಾಲ್ನಡಿಗೆಯಲ್ಲೇ ಹೋಗಬಹುದಾಗಿತ್ತು. ಗಂಡ ತೀರಿಕೊಂಡ ಬಳಿಕ ಒಟ್ಟು ಎಂಟು ಮಕ್ಕಳನ್ನು ಸಾಕಿ ಸಲುಹಿ ಮದುವೆ, ಸೋಬನ ಮಾಡಿದ್ದ ನಮ್ಮಮ್ಮ ಆ ಪೈಕಿ ಮೂರು ಹೆಣ್ಣುಮಕ್ಕಳು ಹೆತ್ತ ಕೂಸುಗಳಿಗೆ ಆರೈಕೆ ಮಾಡಿ ಸೈ ಅನ್ನಿಸಿಕೊಂಡ ಗಟ್ಟಿಗಿತ್ತಿ; ನಮ್ಮವ್ವ ಕೊನೆಯವಳು. ಇದ್ದ ಹೊಲವನ್ನೆಲ್ಲ ತನ್ನೈದು ಗಂಡು ಮಕ್ಕಳಿಗೆ ಹಂಚಿ ತನಗೆಂದು ಒಂದಿಷ್ಟು ಇಟ್ಟುಕೊಂಡು ಯಾರ ಹಂಗಿನಲ್ಲೂ ಉಳಿಯದೆ ತನ್ನ ಪಾಡಿಗೆ ಪುಟ್ಟದೊಂದು ಗೂಡಿನಲ್ಲಿ ಕಾಲ ಕಳೆದವಳು ನಮ್ಮಮ್ಮ. ಅದೊಂದು ಪುಟ್ಟ ಮನೆಯಾಗಿತ್ತು. ಹಜಾರವನ್ನೂ, ಅಡುಗೆಮನೆಯನ್ನೂ ಪ್ರತ್ಯೇಕಿಸುವ ಮೋಟುಗೋಡೆ. ಅಟ್ಟದ ಮೇಲೆ ಸೌದೆ, ಮೂಲೆಯಲ್ಲಿ ಒಂದು ಗುಡಾಣ, ಅದರ ಮೇಲೊಂದು ಮಡಕೆ, ಅದರ ಮೇಲೊಂದು ಓಡು. ಮಣ್ಣಿನೊಲೆಯಲ್ಲಿ ಅಂಬಲಿಯೋ ಅಣ್ಣೆಸೊಪ್ಪೋ ಬೇಯಿಸಿ ಪ್ರೀತಿತಿಂದ ಉಣ್ಣಿಸಿ, ಮಂದಲಿಗೆ ಹಾಸಿ, ಅದರ ಮೇಲೆ ತನ್ನ ಇದ್ದ ಬದ್ದ ಹಳೆಯ ಸೀರೆಗಳನ್ನೆಲ್ಲ ಮಂದವಾಗಿ ಹಾಸಿ, ಚಿಕ್ಕೊನ್ನಿ ದೊಡ್ಡೊನ್ನಿ ಪರಸಂಗ ಹೇಳುತ್ತಾ ತನ್ನ ಸೆರಗಿನಲ್ಲಿ ಕವುಚಿಕೊಂಡರೆ ಕೋಳಿ ಕೂಗುವುದೇ ಗೊತ್ತಾಗುತ್ತಿರಲಿಲ್ಲ. ನನಗೆ ಮೂರು ವರ್ಷ ತುಂಬುತ್ತಿದ್ದಂತೆಯೇ ಅಲ್ಲೇ ಕಾಡಂಚಿನಲ್ಲಿದ್ದ ಅಂದಾನಪ್ಪನ ಮಠಕ್ಕೆ ಸೇರಿಸಿ ಅಆ ತಿದ್ದಲು, ಶಿವಪೂಜೆಗೆ ತಾವರೆ, ಕಣಗಿಲೆ ಮುಂತಾದ ಹೂವುಗಳನ್ನು ತಂದು ಕೊಡಲು ಕಾರಣಕರ್ತಳಾದಳು. ಅಂದಿನ ಅಂದಾನಪ್ಪ ಇಂದಿನ ಶ್ರೀಶ್ರೀಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ; ನನ್ನ ಪ್ರಥಮ ಗುರು. ನನಗೆ ಆರು ತುಂಬುವವರೆಗೂ ನಮ್ಮಮ್ಮನೇ ಸಾಕಿದ್ದು. ಆಕೆ ಸ್ನಾನ ಮಾಡಿಸಿದ ತಿಮ್ಮಿಕೆರೆ, ಆಕೆಯ ಹಿಂದೆ ಬಾಲದಂತೆ ಹೋಗಿ ತಂದಂತಹ ಬಿದಿರ ಕಳಲೆ, ಸೀಗೆಸೊಪ್ಪು, ಅಣ್ಣೆಸೊಪ್ಪು, ನೇರಳೆಹಣ್ಣು, ಬ್ಯಾಲದ ಹಣ್ಣು, ಸೌದೆಪುಳ್ಳೆ, ಆಲಳ್ಳಿಯಿಂದ ದೊಡ್ಡಿ ತನಕ ಆಕೆಯ ಹಿಂದೆ ಹಿಂದೆ ಹಾಕಿದ ಹೆಜ್ಜೆಗಳು, ಆಕೆ ಕೂತು ಸುಧಾರಿಸಿಕೊಳ್ಳುತ್ತಿದ್ದ ಹಾದಿಬದಿಯ ಮರಗಳು, ನೀರು ಕುಡಿಯುತ್ತಿದ್ದ ಸೊಣೆಗಳು – ನೆನೆದಾಗ ರೆಪ್ಪೆ ತೇವಗೊಳ್ಳುತ್ತವೆ.

ನನಗೆ ಆರು ತುಂಬಿದ ನಂತರ ಚೀಲಂದವಾಡಿಗೆ ಬಂದ ನನ್ನ ತಾತ (ಅಪ್ಪನ ಅಪ್ಪ) ಉಂಡು ಮಲಗಿ ಬೆಳಗೆದ್ದು ಕರಿಮಸಿಯಲ್ಲಿ ಹಲ್ಲುಜ್ಜಿ, ಮೊಕ ತೊಳೆದುಕೊಂಡು ಹಣೆಗೆ ವಿಭೂತಿ ಪಟ್ಟೆ ಬಳಿದು, ಪಂಚೆ ಎತ್ತಿಕಟ್ಟಿ, ತಲೆಗೆ ಪೇಟ ಕಟ್ಟಿಕೊಂಡು “ಬರ್ಲೇ ತಾಯಿ” ಅಂತ ನಮ್ಮಮ್ಮನಿಗೆ ಹೇಳಿ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡವನು ಸೀದಾ ಬಂದು ಕೆಬ್ಬರೆಯ ಸ್ಕೂಲಿನ ಮುಂದಿಳಿಸಿ ಒಂದನೇ ತರಗತಿಗೆ ಸೇರಿಸಿಬಿಟ್ಟ. ನಮ್ಮಪ್ಪನಿಗೂ ಮೇಷ್ಟ್ರಾಗಿದ್ದ ಮುನಿಚಿಕ್ಕಯ್ಯ ನನಗೂ ಮೇಷ್ಟ್ರಾದ. ಮಗ್ಗಿ, ಕಾಗುಣಿತವನ್ನೆಲ್ಲ ಅಂದಾನಪ್ಪ, ನಮ್ತಾತ ಅಷ್ಟೋ ಇಷ್ಟೋ ಕಲಿಸಿಕೊಟ್ಟಿದ್ದರಿಂದ ಓದಾಟದ ಕೆಲಸ ಅಷ್ಟೇನೂ ಕಷ್ಟ ಅನ್ನಿಸಲಿಲ್ಲ- ಎಲ್ಲ ಊರಿನ ಶಾಲೆಗಳು ಹೆಚ್ಚೂ ಕಮ್ಮಿ ಒಂದೇ ಥರ ಇರುವುದರಿಂದಲೂ, ಎಲ್ಲ ಊರುಗಳ ಅನುಭವಗಳೂ ಅಪ್ಪಿತಪ್ಪಿಯೂ ಒಂದೇ ಥರ ಇಲ್ಲದಿರುವುದರಿಂದಲೂ ನಮ್ಮೂರಿನ ಒಂದಿಷ್ಟು ನೆನಪುಗಳನ್ನು, ಅನುಭವಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ : ನಮ್ಮದು ಹಳೆಕಾಲದ ಹೆಂಚಿನಮನೆಯಾಗಿತ್ತು. ನಮ್ಮ ತಾತನ ಅಪ್ಪನಿಗೆ ಮೂವರು ಪತ್ನಿಯರು. ನಮ್ತಾತ ಕೊನೆಯ ಪತ್ನಿಯ ಮಗ. ನಮ್ತಾತನ ಅಣ್ಣಂದಿರಿಬ್ಬರು ಪ್ರತ್ಯೇಕವಾಗಿ ತಂತಮ್ಮ ಪಾಡಿಗೆ ವಾಸಿಸುತ್ತಿದ್ದರು. ನಮ್ತಾತ ಮತ್ತು ಆತನ ತಮ್ಮ ವಿಶಾಲವಾದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಒಲೆಗಳು ಮಾತ್ರ ಪ್ರತ್ಯೇಕವಾಗಿದ್ದವು. ಮುಂಬಾಗಿಲಿಂದ ಮನೆಯೊಳಕ್ಕೆ ಪ್ರವೇಶಿಸಿದರೆ ಒಂದು ತೊಟ್ಟಿ, ಸುತ್ತಲೂ ಹಜಾರ, ನಡುಮನೆ, ಕೋಣೆ (ಅಡುಗೆಮನೆ) ಇದ್ದವು. ಕಿರುಮನೆಯಲ್ಲಿ ವಾಡೆ, ಗುಡಾಣ, ಮಡಕೆ, ಕುಡಿಕೆ ಗಿಡಿರುತ್ತಿದ್ದವು. ಹಜಾರದಲ್ಲೊಂದು ಗುಳಿಬಾವಿ ಇತ್ತು ರಾಗಿ ಸಂಗ್ರಹಕ್ಕಾಗಿ. ಇನ್ನು ಹಿಂದಲಟ್ಟಿ ದನಕರು, ಆಡುಕುರಿಗಳ ವಾಸಸ್ಥಾನ. ಅದರಾಚೆಗೆ ಹಿತ್ತಲು, ಅಲ್ಲೊಂದು ಮರದೊಟ್ಲು, ಹೂವಿನ ಗಿಡಗಳು, ಹುಲ್ಲುಮೆದೆ. 

ನಮ್ಮವ್ವ ಸೊಸೆಯಾಗಿ ನಮ್ಮನೆಗೆ ಬಂದಾಗ ನಮ್ಮಪ್ಪನ ಕಿರಿಯ ತಮ್ಮ, ತಂಗಿ ಇನ್ನೂ ಚಿಕ್ಕವರಂತೆ. ಅವರನ್ನು ತನ್ನ ಮಕ್ಕಳಂತೆ ಸಾಕಿ ಬೆಳೆಸಿದ ನಮ್ಮವ್ವ ಬೆಳಗೆದ್ದು ರಾಗಿ ಬೀಸುವುದರಲ್ಲಿ, ಹಾಲು ಕರೆದು ಹೆಪ್ಪಾಕಿ ಮಜ್ಜಿಗೆ ಕಡೆದು ಬೆಣ್ಣೆ ಕರಗಿಸಿ ತುಪ್ಪ ಮಾಡಿ ಗಡಿಗೆಗೆ ತುಂಬಿಸಿ ಜೋಪಾನವಾಗಿ ನೆಲುವಿನಲ್ಲಿಡುವುದರಲ್ಲಿ, ಕೊಟ್ಟಿಗೆಯನ್ನು ಹಸನುಗೊಳಿಸಿ ತಿಪ್ಪೆಗೆ ಕಸ ಸುರಿದು ಬಂದು ಮನೆಮಂದಿಗೆಲ್ಲ ಮಡಕೆ ತುಂಬ ಹಿಟ್ಟು ಜಡಿಯುವುದರಲ್ಲಿ, ಹಿಟ್ಟಿನ ಮಂಕರಿ ಹೊತ್ತು ಹೊಲಕ್ಕೆ ಹೋಗುವುದರಲ್ಲಿ, ಗಂಡಾಳಿಗೆ ಸಮನಾಗಿ ದುಡಿಯುವುದರಲ್ಲಿ, ಜೊತೆಗೆ ಮಕ್ಕಳ ಕಾಳಜಿ ವಹಿಸುವುದರಲ್ಲಿ ಸದಾ ಸಕ್ರಿಯಳಾಗಿರುತ್ತಿದ್ದಳು. “ಅಪ್ಪನ ಮನೇಲೂ ಸುಕ ಇಲ್ಲ, ಗಂಡನ ಮನೇಲೂ ಸುಕ ಇಲ್ಲ” ಎಂಬಂತಹ ಲೋಕಾರೂಢಿ ಮಾತನ್ನು ತನ್ನಷ್ಟಕ್ಕೆ ತಾನೇ ಗೊಟಕುತ್ತಾ ತಾನಾಯಿತು ತನ್ನ ಕೆಲಸವಾಯಿತು ಅಂತಿರುತ್ತಿದ್ದಳು.

(ಹೃದಯ ಶಿವ ಅವರ ಅವ್ವ, ಅಪ್ಪ ಮತ್ತು ತಂಗಿ)

ಆಗೆಲ್ಲ ನಮ್ಮನೆಯಲ್ಲಿ ಮೂರೊತ್ತೂ ಹಿಟ್ಟು. ಹೆಚ್ಚೆಂದರೆ ಅವರೆಕಾಯಿ ಕಾಲದಲ್ಲಿ ರೊಟ್ಟಿ ತಟ್ಟಿ ಹಿತಕಿದ ಬೇಳೆಸಾರು ಮಾಡಿ ತುಪ್ಪದೊಂದಿಗೆ ಕಲೆಸಿಕೊಂಡು ತಿನ್ನುವುದು. ಹಬ್ಬಹುಣ್ಣಿಮೆ, ನೆಂಟರಿಷ್ಟರು ಬಂದರಷ್ಟೇ ಅನ್ನಭಾಗ್ಯ. ಅನ್ನಕ್ಕಾಗಿ ಬಯಸಿಕೊಂಡು ಜ್ವರ ಬರಿಸಿಕೊಂಡು “ಹಿಟ್ಟು ಬ್ಯಾಡ, ರೊಟ್ಟಿ ಬ್ಯಾಡ ಹೊಟ್ಟೆ ಹಸೀತದೆ” ಅಂತ ಮಾರ್ಮಿಕವಾಗಿ ಅನ್ನಕ್ಕೆ ಬೇಡಿಕೆಯಿಡುತ್ತಿದ್ದ ವ್ಯಕ್ತಿಗಳು ನಮ್ಮೂರಿನಲ್ಲಿ ಆ ಕಾಲಕ್ಕೆ ಸಿಗುತ್ತಿದ್ದರು. ಇಷ್ಟಕ್ಕೂ ಹೊಲಗಳಲ್ಲಿ ಹಿಟ್ಟಿಗಾಗಿ ರಾಗಿ, ಸಾರಿಗಾಗಿ ಅವರೆ, ತೊಗರಿ, ತರಗುಣಿ ಬೆಳೆಯುತ್ತಿದ್ದೆವು. ಹರಳು (ಔಡಲ), ಎಳ್ಳು, ಹುಚ್ಚೆಳ್ಳು, ಸಾಸಿವೆಯಷ್ಟೇ ನಮ್ಮ ಬೆಳೆಗಳು. ಬಿಳಿಜ್ವಾಳ ಬೆಳೆದರೂ ಅಪರೂಪಕ್ಕೆ ಜ್ವಾಳದ ಮುದ್ದೆ, ಉಳಿದ ಜ್ವಾಳವನ್ನೆಲ್ಲ ಬೆಲ್ಲ ಟೀಸೊಪ್ಪಿನ ಖರ್ಚಿಗಾಗಿ ಮಾರಿಬಿಡುತ್ತಿದ್ದರು. ಕಡಲೆಕಾಯಿ, ರೇಷ್ಮೆ ಮುಖ್ಯ ವಾಣಿಜ್ಯಬೆಳೆಗಳಾಗಿದ್ದವು. ಹೀಗಾಗಿ ನಮ್ಮೂರಲ್ಲಿ ಭತ್ತ ಬೆಳೆಯುತ್ತಿದ್ದದ್ದು ತೀರಾ ಅಂದರೆ ತೀರಾ ಕಮ್ಮಿ. ಆದ್ದರಿಂದಲೇ ಹಿಟ್ಟು ನಮ್ಮೂಟ. ಹೈಕಳಾಗಿದ್ದ ನಾವು ದಿನಾ ಹಿಟ್ಟುಣ್ಣುವುದನ್ನು ಕಣ್ಣಲ್ಲಿ ನೋಡಲಾಗದೆ “ಲೋ ತಮ್ಮಯ್ಯ, ಆ ತ್ವಾಟ್ದಲ್ಲಿ ಒಂದಷ್ಟುಂಬಲಕ್ಕೆ ಬತ್ತ ಹಾಕ್ರುಲಾ.. ಈವೈಕ್ಳುಗೆ ಒಸಿ ಅನ್ನುಕ್ ದಾರಿ ಮಾಡ್ರುಲಾ” ಅಂತ ನಮ್ತಾತ ಹೇಳಿದ ಮೇಲೆ ನಾವೂ ಭತ್ತ ಬೆಳೆದೆವು, ಅನ್ನ ಉಣ್ಣಲು ಶುರುಮಾಡಿದೆವು. ಅಪ್ಪನನ್ನು ತಾತ ತಮ್ಮಯ್ಯ ಅಂತ ಕರೀತಿದ್ದ.

ಈ ಭತ್ತ ಬೆಳೆದುದ್ದರ ಹಿಂದೆ ಇನ್ನೊಂದು ಸ್ವಾರಸ್ಯಕರ ಸಂಗತಿಯುಂಟು. ಅದೇನೆಂದರೆ, ಆರರ ಬೆಳಗ್ಗೆ ಒಂದು ಕೈಯಲ್ಲಿ ತಗಡಿನ ಡಬ್ಬ, ಮತ್ತೊಂದು ಕೈಯಲ್ಲಿ ಮರದ ತುಂಡೊಂದನ್ನು ಹಿಡಿದು, ಮರದ ತುಂಡಿನಿಂದ ಡಬ್ಬಕ್ಕೆ ಬಡಿಯುತ್ತ ಸದ್ದು ಮಾಡುತ್ತಾ ಭತ್ತದ ಗದ್ದೆಯ ತೆವರಿಯ ಮೇಲೆ ನಾನು ಅತ್ತಿಂದಿತ್ತ ಇತ್ತಿಂದತ್ತ ಓಡಾಡಬೇಕಿತ್ತು. ಹಾಲ್ದುಂಬಿದ ತೆನೆಗಳಿಗೆ ಹಕ್ಕಿಗಳು ಮುತ್ತುವುದನ್ನು ತಪ್ಪಿಸುವ ಇಂಥದೊಂದು ಉದ್ದೇಶ ತಾತನದಾಗಿತ್ತು. ಹಸಿರನ್ನೇ ಉಸಿರಾಡುವ ತೋಟ; ಮನಸಿಗೆ ಮುದ. ತುಸು ದೂರದಲ್ಲೇ ಹರಿಯುವ ಪುಟ್ಟ ತೊರೆ. ನಾನು ಮೂರನೇ ತರಗತಿಯ ಹುಡುಗ. ತಂಪು ಸೂಸುತ್ತಿದ್ದ ಆ ತೋಟದಲ್ಲಿ ಭತ್ತದ ಪೈರುಗಳ ಜೊತೆಗೆ ಬಾಳೆಗಿಡಗಳು, ಬೇಲಿಗುಂಟ ನಿಂತಿದ್ದ ನೀಲಗಿರಿ ಸಸಿಗಳು, ಒಂದೆರಡು ಪರಂಗಿ ಮರಗಳು, ನಾಲ್ಕೋ ಐದೋ ತೆಂಗಿನ ಮರಗಳು, ಇವುಗಳ ಜೊತೆಗೆ ಅವ್ವ ಬೆಳೆಸಿದ್ದ ನುಗ್ಗೆಗಿಡ, ಕಾಕಡ ಗಿಡ, ಸ್ಪಟಿಕದ ಹೂವಿನ ಗಿಡ, ನಿಂಬೆಗಿಡಗಳೂ ಇದ್ದವು. ಡಬ್ಬ ಬಡಿದು ಕೈ ಸೋತಾಗ ಚಿಟ್ಟೆ ಹಿಡಿಯಲು ತೊಡಗುತ್ತಿದ್ದೆ. ಚಿಟ್ಟೆ ಸಿಗದಿದ್ದಾಗ ಹೂವನ್ನು ಹಿತವಾಗಿ ಬೆರಳುಗಳಿಂದ ನೇವರಿಸಿ ಮುಗುಳ್ನಗುತ್ತಿದ್ದೆ. ತಾತ ಆಗಾಗ ತೋಟದ ಕಡೆಗೆ ಸುಳಿವು ಕೊಡದಯೇ ಬರಬಲ್ಲಂಥ ವ್ಯಕ್ತಿ. ನಾನು ತೋಟದಲ್ಲಿ ಬಡಿಯುವ ಡಬ್ಬದ ಸದ್ದನ್ನು ಮನೆಯಿಂದಲೇ ಆಲಿಸಬಲ್ಲ ಚಾಣಾಕ್ಷ. ಸದ್ದು ನಿಂತೊಡನೆ ಎದ್ದು ತೋಟದೆಡೆಗೆ ಬಂದರೂ ಬರಬಹುದು. ಪೇಟ ಸುತ್ತಿದ್ದ ಆತನ ತಲೆ ಕಂಡೊಡನೆ ಡಬ್ಬ ಸದ್ದು ಮಾಡುತ್ತಿತ್ತು. ಇಂದಿಗೂ ನನ್ನೊಳಗೆ ಒಂದಿಷ್ಟು ಶಿಸ್ತು ಅಂತೇನಾದರೂ ಉಳಿದಿದ್ದರೆ ಅದಕ್ಕೆ ನನ್ನ ತಾತನೇ ಹೊಣೆಗಾರ. ತನ್ನ ಮಗ್ಗುಲಲ್ಲಿ ಮಲಗಿಸಿಕೊಂಡು ಆತ ಹೇಳಿಕೊಟ್ಟ ರಾಮಾಯಣ, ಮಹಾಭಾರತದ ಕಥೆಗಳು, ಸಂಕ್ರಾಂತಿಯಂದು ಗಟ್ಟಿಯಾಗಿ ಓದಿಸುತ್ತಿದ್ದ “ಗೋವಿನ ಹಾಡು” ಪದ್ಯ, ತಾನು ವಿವರಿಸುತ್ತಿದ್ದ ಅಮರಕೋಶದ ಪದಗಳ ಅರ್ಥ, ಬೆತ್ತದೇಟು ಕೊಟ್ಟು ಕಲಿಸುತ್ತಿದ್ದ ಮಗ್ಗಿ, ಮಹಾರಾಜರ ಕಾಲದ ಜಮೀನುಪತ್ರಗಳನ್ನು ಓದುತ್ತಿದ್ದ ಬಗೆ, ಮೈಸೂರು ದಸರಾಗೆ ತಾನು ಕಾಲ್ನಡಿಗೆಯಲ್ಲೇ ಹೋಗುತ್ತಿದ್ದದ್ದನ್ನು, ಮದ್ರಾಸಿನಲ್ಲಿ ರಾಜಕುಮಾರ್ ಮನೆಗೆ ಹೋಗಿ ಭೇಟಿಯಾಗಿದ್ದನ್ನು, ನರಸಿಂಹರಾಜು ಜೊತೆ ಮಾತಾಡಿದ್ದನ್ನು, ಧರ್ಮಸ್ಥಳದ ರತ್ನವರ್ಮಹೆಗ್ಗಡೆ ಜೊತೆಗಿನ ಸಂಪರ್ಕವನ್ನು, ಕನಕಪುರದ ಹಾಸ್ಟೆಲ್ ಕರಿಯಪ್ಪನ ಜೊತೆಗಿನ ಒಡನಾಟವನ್ನು… ಇತ್ಯಾದಿಗಳನ್ನು ಆತನ ಬಾಯಲ್ಲೇ ಕೇಳಬೇಕು.

ಇಂಥ ತಾತನನ್ನು ಕಂಡರೆ ಅವ್ವನಿಗೆ ಭಯ ಹಾಗೂ ಕೋಪ. ಭಯಕ್ಕೆ ಕಾರಣ ಆತನ ಶಿಸ್ತು, ಕೋಪಕ್ಕೆ ಕಾರಣ ಆತ ನನ್ನನ್ನು ದಂಡಿಸುತ್ತಿದ್ದ ರೀತಿ. ತಾತನಿಗೆ ವಯಸ್ಸಾಗುತ್ತಾ ಹೋದಂತೆ, ಆತ ಮಂಕಾಗುತ್ತಾ ಹೋದಂತೆ ಮನೆಯ ಉಸ್ತುವಾರಿಯನ್ನು ಅಪ್ಪ ಹೊತ್ತುಕೊಳ್ಳಬೇಕಾಯಿತು. ತಾತನ ಯಜಮಾನಿಕೆಯಲ್ಲಿ ಕಿರುಮುಚ್ಚಾಗಿ, ಅಚ್ಚುಕಟ್ಟಾಗಿ ಸಾಗುತ್ತಿದ್ದ ಮನೆಯ ಸಂಸಾರದ ಹೊಣೆ ಅಪ್ಪನ ಹೆಗಲಿಗೆ ಬೀಳುತ್ತಿದ್ದಂತೆಯೇ ಎಲ್ಲೋ ಒಂದು ಕಡೆ ಮನೆ ಲಯತಪ್ಪುವ ಸುಳುಹುಗಳು ನಿಧನಿಧಾನವಾಗಿ ಗೋಚರಿಸಲು ಶುರುವಾದವು. ಕಷ್ಟದ ದಿನಗಳು ಸಮೀಪಿಸುತ್ತಿರುವ ಸೂಚನೆಗಳು ಸುಳಿಯತೊಡಗಿದವು..

(ಮುಂದುವರೆಯುತ್ತದೆ)

-ಹೃದಯಶಿವ

You cannot copy content of this page

Exit mobile version