ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಪ್ರತಿಭಟನಾಕಾರರು ಮತ್ತೊಮ್ಮೆ ರಸ್ತೆಗಿಳಿದಿದ್ದಾರೆ. ಅವರು ತಮ್ಮ ಪ್ರತಿಭಟನೆಯ ಮೂಲಕ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಾಕಾರರು ನಿನ್ನೆ ರಾತ್ರಿ ರಾಷ್ಟ್ರಪತಿ ಭವನ ಬಂಗಭವನವನ್ನು ಸುತ್ತುವರೆದು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ರಾಜೀನಾಮೆಗೆ ಒತ್ತಾಯಿಸಿದರು.
ಪ್ರತಿಭಟನಾಕಾರರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು, ನಂತರ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ತಡೆದರು.
ಕಟ್ಟುನಿಟ್ಟಿನ ಪೊಲೀಸ್ ಕ್ರಮ
ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಮುಂದಾದಾಗ, ಅವರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಪ್ರತಿಭಟನೆಗೆ ನೆರೆದಿದ್ದ ಜನಸಮೂಹ ಹಿಂಸಾಚಾರಕ್ಕೆ ತಿರುಗುತ್ತಿರುವುದನ್ನು ಕಂಡ ಪೊಲೀಸರು ಅಶ್ರುವಾಯು ಸಿಡಿಸಿದರು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು ಮತ್ತು ಬಂಗಭವನದ ಬಳಿ ಗುಲಿಸ್ತಾನ್ ರಸ್ತೆಯನ್ನು ತಡೆದರು ಎಂದು ಪೊಲೀಸರು ಹೇಳಿದ್ದಾರೆ.
ಬಾಂಗ್ಲಾದೇಶದ ಮಾಧ್ಯಮಗಳಿಂದ ಪಡೆದ ಮಾಹಿತಿಯ ಪ್ರಕಾರ, ಪೊಲೀಸರ ಕ್ರಮದಲ್ಲಿ ಐವರು ಪ್ರತಿಭಟನಾಕಾರರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ಬಾಂಗ್ಲಾ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ನೀಡಿದ ಹೇಳಿಕೆಯೊಂದು ಈ ಗಲಭೆಗೆ ಕಾರಣೌಅಗಿದೆ. ಆಗಸ್ಟ್ 5ರಂದು ಬಾಂಗ್ಲಾದೇಶವನ್ನು ತೊರೆಯುವ ಮೊದಲು ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸಾಬೀತುಪಡಿಸುವ ಯಾವುದೇ ದಾಖಲೆಗಳು ನನ್ನ ಬಳಿ ಇಲ್ಲ ಎಂದು ಅಧ್ಯಕ್ಷ ಶಹಾಬುದ್ದೀನ್ ಹೇಳಿದ್ದರು.
ಅಧ್ಯಕ್ಷರ ಈ ಹೇಳಿಕೆಯ ನಂತರ, ಈಗ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರು ಸಾಂವಿಧಾನಿಕವಾಗಿ ಬಾಂಗ್ಲಾದೇಶದ ಪ್ರಧಾನಿಯೇ ಎಂಬ ಚರ್ಚೆ ಪ್ರಾರಂಭವಾಗಿದೆ. ಈ ಹೇಳಿಕೆಯ ವಿರುದ್ಧ ಮತ್ತೊಮ್ಮೆ ಪ್ರತಿಭಟನೆಗಳು ಆರಂಭವಾಗಿದ್ದು, ಅಧ್ಯಕ್ಷರ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.