Home ದೇಶ ರಿಯಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ಟೆಕ್ಕಿ ದುರ್ಮರಣ, ಕುಟುಂಬಸ್ಥರಿಗೆ ಗಾಯ

ರಿಯಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ಟೆಕ್ಕಿ ದುರ್ಮರಣ, ಕುಟುಂಬಸ್ಥರಿಗೆ ಗಾಯ

0

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಮೃತಪಟ್ಟಿದ್ದು, ಅವರ ಕುಟುಂಬದ ಸದಸ್ಯರು ಗಾಯಗೊಂಡಿದ್ದಾರೆ.

ಮೃತರನ್ನು ಹೈದರಾಬಾದ್‌ನ ಮೆಹದಿಪಟ್ನಂ ನಿವಾಸಿ, 46 ವರ್ಷದ ಮೊಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ಯೂಸುಫ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಉಮ್ರಾ ತೀರ್ಥಯಾತ್ರೆಗಾಗಿ ವಾರದ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಯಾತ್ರೆ ಮುಗಿಸಿಕೊಂಡು ರಿಯಾದ್ ವಿಮಾನ ನಿಲ್ದಾಣದ ಚೆಕ್-ಇನ್ ಕಿಯೋಸ್ಕ್ ಬಳಿ ಮದೀನಾಕ್ಕೆ ತೆರಳಲು ಕಾಯುತ್ತಿದ್ದ ಸಂದರ್ಭದಲ್ಲಿ ಕ್ಷಿಪಣಿ ದಾಳಿ (ಪ್ರೊಜೆಕ್ಟೈಲ್ ದಾಳಿ) ನಡೆದಿದ್ದು, ಕುಸಿದು ಬಿದ್ದ ಅವಶೇಷಗಳು ತಗುಲಿ ಯೂಸುಫ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಈ ದಾಳಿಯಲ್ಲಿ ಅವರ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಗಾಯಗೊಂಡಿದ್ದು, ಅವರನ್ನು ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬ ಮಗನ ಕಾಲಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.

ಭಾರತೀಯ ರಾಯಭಾರ ಕಚೇರಿ ಸ್ಪಂದನೆ:

ಘಟನೆಯ ಕುರಿತು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದ್ದು, ಗಾಯಾಳುಗಳಿಗೆ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯೂಸುಫ್ ಅವರ ಪಾರ್ಥಿವ ಶರೀರವನ್ನು ಶೀಘ್ರವೇ ಹೈದರಾಬಾದ್‌ಗೆ ರವಾನಿಸಲು ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಈ ದುರಂತಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಭಾರತ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಹೇಳಿದ್ದಾರೆ. ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕೂಡ ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಅಗತ್ಯ ಕ್ರಮಗಳನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದ್ದಾರೆ.

You cannot copy content of this page

Exit mobile version