ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ತುಮಕೂರ್ಲಹಳ್ಳಿ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಮಾಹಿತಿಯ ಪ್ರಕಾರ, ವೇಗವಾಗಿ ಸಾಗುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ವೇಳೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಚಳ್ಳಕೆರೆ ಮೂಲದ ಛಾಯಾಗ್ರಾಹಕ ರಾಘವೇಂದ್ರ, ಪ್ರಮೋದ್, ರುದ್ರೇಶ್, ಸೋಮು ಹಾಗೂ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮೊಳಕಾಲ್ಮುರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಬಳಿಕ ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಿದರು.
