Home ದೇಶ ಬಿಹಾರ | ಗಂಗಾನದಿಯಲ್ಲಿ ದೋಣಿ ಮುಳುಗಿ ಏಳು ಜನ ನಾಪತ್ತೆ.. ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಬಿಹಾರ | ಗಂಗಾನದಿಯಲ್ಲಿ ದೋಣಿ ಮುಳುಗಿ ಏಳು ಜನ ನಾಪತ್ತೆ.. ಮುಂದುವರಿದ ರಕ್ಷಣಾ ಕಾರ್ಯಾಚರಣೆ

0

ಪಾಟ್ನಾ: ಬಿಹಾರದಲ್ಲಿ ಗುರುವಾರ ಅತ್ಯಂತ ಘೋರ ದೋಣಿ ಅಪಘಾತವೊಂದು ಸಂಭವಿಸಿದೆ. ಗಂಗಾನದಿಯಲ್ಲಿ ಪ್ರಯಾಣಿಕರಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, ಹಲವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾ ಜಿಲ್ಲೆಯ ಬಾರ್ಹ್ ಸಬ್ ಡಿವಿಷನ್ ವ್ಯಾಪ್ತಿಯ ಉಮಾನಾಥ್ ಘಾಟ್ ಬಳಿ ಈ ದುರ್ಘಟನೆ ನಡೆದಿದೆ.

ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, 14 ಜನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸಣ್ಣ ದೋಣಿಯೊಂದು ಗಂಗಾನದಿಯ ತೀವ್ರ ನೀರಿನ ಹರಿವು, ಗಾಳಿ ಮತ್ತು ಅಲೆಗಳ ಹೊಡೆತಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಇತರ ಸಣ್ಣ ದೋಣಿಗಳ ಸಹಾಯದಿಂದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೆಲವರನ್ನು ರಕ್ಷಿಸಿದ್ದಾರೆ. ಇನ್ನುಳಿದ ಏಳು ಜನ ನದಿಯ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ನದಿಯಲ್ಲಿ ಕೊಚ್ಚಿಹೋಗಿದ್ದ ಏಳು ಜನರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ಬಾರ್ಹ್ ಎಸ್‌ಡಿಪಿಒ ರಾಮಕೃಷ್ಣ ಅವರು ತಿಳಿಸಿದ್ದಾರೆ. ದೋಣಿಯಲ್ಲಿದ್ದ ಒಟ್ಟು 14 ಜನರಲ್ಲಿ ಸದ್ಯಕ್ಕೆ ಏಳು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇಬ್ಬರ ಶವ ಸಿಕ್ಕಿದೆ. ಇನ್ನುಳಿದ ಐವರಿಗಾಗಿ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ವಿವರಿಸಿದ್ದಾರೆ.

ಮುಂಬೈನಲ್ಲೂ ಬೋಟ್ ದುರಂತ: ಮತ್ತೊಂದೆಡೆ, ಮಹಾರಾಷ್ಟ್ರದ ಮುಂಬೈನಲ್ಲೂ ಮೀನುಗಾರಿಕಾ ಬೋಟ್ ಒಂದು ಮುಳುಗಡೆಯಾಗಿ ಒಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮುಂಬೈನ ಖರ್ ದಂಡಾ ಪ್ರದೇಶದಲ್ಲಿ ಬುಧವಾರ ಸಂಜೆ ಈ ಅಪಘಾತ ನಡೆದಿದೆ. ಬೋಟ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಅಧಿಕಾರಿಗಳು ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

You cannot copy content of this page

Exit mobile version