ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್ ಗೆ ವಿಶೇಷ ಆತಿಥ್ಯ ನೀಡಿರುವ ಘಟನೆಗೆ ಸಂಬಂಧಿಸಿದಂತೆ ಜೈಲಿನ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಜೈಲಿನ ಪೊಲೀಸ್ ಅಧಿಕಾರಿಗಳಾದ ಶರಣಬಸವ ಅಮೀನ್ ಗಡ, ಪುಟ್ಟಸ್ವಾಮಿ, ಖಂಡೇವಾಲಾ, ಶ್ರೀಕಾಂತ್, ವೆಂಕಪ್ಪ, ವಾರ್ಡರ್ ಬಸಪ್ಪ, ಸಂಪತ್ ಸೇರಿದಂತೆ ಏಳು ಮಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜೈಲಿನ ಹಿರಿಯ ಅಧಿಯಕಾರಿಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಜೈಲಿನ ಹಿರಿಯ ಅಧಿಕಾರಿಗಳು ಶಾಮೀಲು ಆಗಿರುವುದು ಗೊತ್ತಾದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಸ್ಪೆಷಲ್ ಬ್ಯಾರಕ್ ನಲ್ಲಿದ್ದ ದರ್ಶನ್ ಸೆಲ್ ನಿಂದ ಹೊರಬಂದು ಟೇಬಲ್, ಚೇರ್ ಹಾಕಿಕೊಂಡು ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಮತ್ತಿತರರ ಜೊತೆ ಸಿಗರೇಟ್ ಸೇದುತ್ತಾ, ಕಾಫಿ ಮಗ್ ಹಿಡಿದು ನಗುತ್ತಾ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.
ಅಲ್ಲದೇ ದರ್ಶನ್ ಗೆ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವ್ಯವಸ್ಥೆಯೂ ಆಗಿರುವುದರ ಬಗ್ಗೆಯೂ ವಿಡಿಯೋ ಹರಿದಾಡುತ್ತಿದ್ದು, ಅಗತ್ಯ ಬಿದ್ದರೆ ಅಮಾನತಾಗಿರುವ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.