Home ಬ್ರೇಕಿಂಗ್ ಸುದ್ದಿ ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 63.34ಕೋಟಿ ರೂ : ಜನಚಳುವಳಿಯ ಹೋರಾಟಕ್ಕೆ ಸಿಕ್ಕ ಜಯ

ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 63.34ಕೋಟಿ ರೂ : ಜನಚಳುವಳಿಯ ಹೋರಾಟಕ್ಕೆ ಸಿಕ್ಕ ಜಯ

0

ಹಾಸನ : ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ರೂ.63.34 ಕೋಟಿಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಭೆಯಲ್ಲಿ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಉದ್ದೇಶಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಸ್ಥಾಪನೆಯನ್ನು ಈ ಹಿಂದೆಯೇ ಆರಂಭಿಸಲಾಗಿತ್ತು. ಆದರೆ ಅಗತ್ಯ ಅನುದಾನ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಹೀಗಾಗಿ ಆಸ್ಪತ್ರೆಗೆ ಬಂದಂತಹ ರೋಗಿಗಳನ್ನು ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ವಿಚಾರವನ್ನು ಹಾಸನ ಜಿಲ್ಲೆ ಸಂಸದರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದರು.

ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡುವ ಸಂಬಂಧ ನಾನು ಬೆಂಗಳೂರಿಗೆ ಮರಳಿದ ಕೂಡಲೇ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸೂಪರ್ ಸ್ಪೇಷಲಿಟಿ ಆಸ್ಪತ್ರೆಯ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಒದಗಿಸುವುದು ಈಗಿನ ತುರ್ತು ಅವಶ್ಯಕವಾಗಿರುತ್ತದೆ ಹೀಗಾಗಿ ಇದನ್ನು ಪೂರೈಸಲು ಮನವಿ ಮಾಡಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ನಮ್ಮ ಮನವಿಗೆ ಸ್ಪಂದಿಸಿ, ಈ ವಿಚಾರಕ್ಕೆ ಪರಿಹಾರ ನೀಡಲು ಸೂಚಿಸಿರುತ್ತಾರೆ.

ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಬೇಕಾಗಿರುವ ಹೆಚ್ಚುವರಿ ಮೊತ್ತದ ಮಂಜೂರಾತಿಗಾಗಿ ಸದರಿ ವಿಷಯವನ್ನು ಸಚಿವ ಸಂಪುಟದ ಮುಂದೆ ಇಂದು ತರಲಾಗಿತ್ತು. ಅದರಂತೆ ಈ ಬಗ್ಗೆ ಚರ್ಚೆ ನಡೆಸಿದ ಸಂಪುಟ ಸಭೆ ರೂ.63.34 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿರುವುದು ಸಂತಸದ ವಿಚಾರ. ಶೀಘ್ರದಲ್ಲೇ ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ನಾನು ಈ ಮೂಲಕ ತಿಳಿಸಲು ಇಚ್ಛಿಸುತ್ತೇನೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರು ಆನಂದ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version