Home ರಾಜ್ಯ ಚಿಕ್ಕಮಗಳೂರು ಕುದುರೆಮುಖ ಅರಣ್ಯದಲ್ಲಿ ಕಾಡ್ಗಿಚ್ಚಿನ ರುದ್ರ ನರ್ತನ: 25ಕ್ಕೂ ಹೆಚ್ಚು ಕಡೆ ಬೆಂಕಿ, ಸರ್ಕಾರದಿಂದ ಕಠಿಣ ಕ್ರಮ...

ಕುದುರೆಮುಖ ಅರಣ್ಯದಲ್ಲಿ ಕಾಡ್ಗಿಚ್ಚಿನ ರುದ್ರ ನರ್ತನ: 25ಕ್ಕೂ ಹೆಚ್ಚು ಕಡೆ ಬೆಂಕಿ, ಸರ್ಕಾರದಿಂದ ಕಠಿಣ ಕ್ರಮ ಸೂಚನೆ

0

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿನ ಪ್ರಮಾಣ ದಿನೇದಿನೇ ಹೆಚ್ಚುತ್ತಿದ್ದು, ಶುಕ್ರವಾರ ಪರಿಸ್ಥಿತಿ ಆತಂಕಕಾರಿ ಹಂತಕ್ಕೆ ತಲುಪಿದೆ. ಉದ್ಯಾನವನದ ವಿವಿಧ ವಲಯಗಳಲ್ಲಿ 25ಕ್ಕೂ ಹೆಚ್ಚು ಕಡೆ ಬೆಂಕಿ ಕಾಣಿಸಿಕೊಂಡಿದ್ದು, ವಿಶಾಲ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿದೆ.

ಕಿತ್ಲೆಮನೆ ಕೊಡಿಗೆ, ನರಸಿಂಹ ಪರ್ವತ, ವಾಲಿಕುಂಜ ಪ್ರದೇಶ, ಮಾಣಿಕ್ಯ ಬೆಟ್ಟ ಸೇರಿದಂತೆ ಅನೇಕ ಗುಡ್ಡ ಪ್ರದೇಶಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದೆ. ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಸಣ್ಣ ಪ್ರಮಾಣದ ಬೆಂಕಿ, ಗಾಳಿಯ ವೇಗ ಹಾಗೂ ಬೇಸಿಗೆ ತಾಪಮಾನದಿಂದ ಏಕಾಏಕಿ ಉಲ್ಬಣಗೊಂಡಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಒಣಗಿದ ಹುಲ್ಲು, ಬಿದ್ದ ಎಲೆಗಳು ಮತ್ತು ಮಳೆಯ ಕೊರತೆ ಬೆಂಕಿ ವೇಗವಾಗಿ ಹರಡುವುದಕ್ಕೆ ಕಾರಣವಾಗಿದ್ದು, ಅಮೂಲ್ಯವಾದ ಅರಣ್ಯ ಸಂಪತ್ತು ಮತ್ತು ಔಷಧೀಯ ಸಸ್ಯಗಳು ಹಾನಿಗೀಡಾಗಿವೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ತೀವ್ರ ಪ್ರಯತ್ನ ನಡೆಸುತ್ತಿದ್ದರೂ, ಭೌಗೋಳಿಕ ಸವಾಲುಗಳಿಂದ ಕಾರ್ಯಾಚರಣೆ ಕಷ್ಟಕರವಾಗಿದೆ.

ಈ ನಡುವೆ, ಕಾಡ್ಗಿಚ್ಚು ತಡೆಗಟ್ಟುವಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕೊರತೆಯೇ ಈ ಅವಘಡಕ್ಕೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ನಿಯಂತ್ರಣ ರೇಖೆ ನಿರ್ಮಾಣ, ವೀಕ್ಷಣಾ ಗೋಪುರಗಳ ಸ್ಥಾಪನೆ ಹಾಗೂ ವೀಕ್ಷಕರ ನೇಮಕಾತಿಯಲ್ಲಿ ವಿಳಂಬ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ತಕ್ಷಣ ಸ್ಪಂದಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿದ್ದಾರೆ. ಮಂಗಳೂರು ವಲಯದ ಅರಣ್ಯಾಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, 7 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಸಚಿವರು ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೂ ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಅರಣ್ಯ ಪ್ರದೇಶದಲ್ಲಿರುವ ಕೆಲವು ನಿವಾಸಿಗಳು ಸ್ವಯಂಪ್ರೇರಿತವಾಗಿ ಸ್ಥಳಾಂತರಕ್ಕೆ ಸಮ್ಮತಿ ಸೂಚಿಸಿರುವ ಹಿನ್ನೆಲೆ, ಕಾಂಪಾ ನಿಧಿಯಡಿ ಪುನರ್ವಸತಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

You cannot copy content of this page

Exit mobile version