ಹೊಸದಿಲ್ಲಿ: ಭಾರತೀಯ ರೂಪಾಯಿಯು ಬುಧವಾರದಂದು ಅಮೆರಿಕನ್ ಡಾಲರ್ ಎದುರು ₹90.2 ರ ಗಡಿಗೆ ಕುಸಿದಿದ್ದು, ಇದು ಇತಿಹಾಸದಲ್ಲಿಯೇ ಅತಿ ಕಡಿಮೆ ಮೌಲ್ಯವಾಗಿದೆ. ಅಮೆರಿಕಾದ ಸುಂಕಗಳು, ವಿದೇಶಿ ಬಂಡವಾಳದ ದುರ್ಬಲ ಒಳಹರಿವು ಮತ್ತು ಭಾರತ-ಅಮೆರಿಕಾದ ನಡುವಿನ ವ್ಯಾಪಾರ ಒಪ್ಪಂದದ ಅನಿಶ್ಚಿತತೆಗಳು ರೂಪಾಯಿಯ ಮೇಲೆ ಒತ್ತಡವನ್ನು ಹೆಚ್ಚಿಸಿವೆ ಎಂದು ‘ರಾಯಿಟರ್ಸ್’ ವರದಿ ಮಾಡಿದೆ.
ಮಂಗಳವಾರದಂದು ಹಿಂದಿನ ದಾಖಲೆಯಾದ ₹89.9 ಕ್ಕೆ ಕುಸಿದಿದ್ದ ರೂಪಾಯಿ, ಬುಧವಾರ ಮತ್ತೆ ಕುಸಿತ ಕಂಡು ₹90.2 ಕ್ಕೆ ತಲುಪಿದೆ.
2025 ರಲ್ಲಿ ರೂಪಾಯಿ ಈಗಾಗಲೇ ಶೇ. 5 ರಷ್ಟು ಮೌಲ್ಯ ಕಳೆದುಕೊಂಡಿದೆ. ಇದು 2022 ರ ನಂತರ ಒಂದೇ ವರ್ಷದಲ್ಲಿ ಅತಿ ದೊಡ್ಡ ಕುಸಿತದತ್ತ ಸಾಗಿದ್ದು, ಏಷ್ಯಾದಲ್ಲಿ ಅತ್ಯಂತ ದುರ್ಬಲ ಪ್ರದರ್ಶನ ನೀಡಿದ ಕರೆನ್ಸಿಯಾಗಿದೆ.
ಉಕ್ರೇನ್ ಯುದ್ಧದ ನಡುವೆ ರಷ್ಯಾದ ತೈಲವನ್ನು ಭಾರತ ಖರೀದಿಸುತ್ತಿದೆ ಎಂದು ಆರೋಪಿಸಿ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್‌ನಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ಕ್ಕೆ ದ್ವಿಗುಣಗೊಳಿಸಿದ್ದರು. ಇದು ದ್ವಿಪಕ್ಷೀಯ ಸಂಬಂಧಗಳನ್ನು ಹದಗೆಡಿಸಿ, ಕರೆನ್ಸಿ ಮಾರುಕಟ್ಟೆಯಲ್ಲಿ ಆತಂಕವನ್ನು ಹೆಚ್ಚಿಸಿತು.
ಆರ್ಥಿಕ ಬೆಳವಣಿಗೆ ಬಲವಾಗಿದ್ದರೂ ಕರೆನ್ಸಿ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಕಂಡುಬಂದಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ. 8.2 ರಷ್ಟು ಬೆಳವಣಿಗೆ ದಾಖಲಿಸಿದ್ದು, ಇದು ಹಿಂದಿನ ತ್ರೈಮಾಸಿಕದ 7.8% ಕ್ಕಿಂತ ಹೆಚ್ಚಾಗಿದೆ.
ಈ ವರ್ಷ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ $16 ಶತಕೋಟಿಗಿಂತ ಹೆಚ್ಚು ಬಂಡವಾಳವನ್ನು ಹಿಂತೆಗೆದುಕೊಂಡಿದ್ದಾರೆ.
ಸರಕು ವ್ಯಾಪಾರ ಕೊರತೆಯು ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ನವೆಂಬರ್ 10 ರಂದು ಟ್ರಂಪ್ ಅವರು ರಷ್ಯಾ ತೈಲ ಖರೀದಿಯನ್ನು ಭಾರತ ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿ, ಭಾರತದ ಮೇಲಿನ ಸುಂಕಗಳನ್ನು ಕೆಲವು ಹಂತಗಳಲ್ಲಿ ಕಡಿಮೆ ಮಾಡುವ ಭರವಸೆ ನೀಡಿದ್ದರು. ಅಲ್ಲದೆ, ಭಾರತದೊಂದಿಗೆ ನ್ಯಾಯಯುತ ಒಪ್ಪಂದವು ಸನ್ನಿಹಿತವಾಗಿದೆ ಎಂದಿದ್ದರು.
ವ್ಯಾಪಾರ ಒಪ್ಪಂದದ ಘೋಷಣೆಯಲ್ಲಿನ ವಿಳಂಬ ಮತ್ತು ರಫ್ತು ಕ್ಷೇತ್ರದಲ್ಲಿನ ಭವಿಷ್ಯದ ಅನಿಶ್ಚಿತತೆ ಮಾರುಕಟ್ಟೆಗಳಲ್ಲಿ ಕೋಲಾಹಲ ಉಂಟುಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯು ಬುಧವಾರದಿಂದ ಆರಂಭವಾಗಿದ್ದು, ಬಡ್ಡಿದರ ಪರಿಷ್ಕರಣೆಯ ಕುರಿತ ಅಂತಿಮ ನಿರ್ಧಾರ ಶುಕ್ರವಾರ ಪ್ರಕಟವಾಗಲಿದೆ.
