ಕೀವ್: ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಕಾಳಗ ಮುಂದುವರಿದಿರುವಾಗಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇಸ್ರೇಲ್ ಮೇಲೆ ದಾಳಿ ನಡೆಸಿದ ಫೆಲೆಸ್ತೀನ್ ಹಮಾಸ್ ಭಯೋತ್ಪಾದಕ ಸಂಘಟನೆಗೆ ರಷ್ಯಾ ಬೆಂಬಲ ನೀಡುತ್ತಿದೆ ಎಂದರು. ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಉಕ್ರೇನ್ ಮತ್ತು ಇಸ್ರೇಲ್‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿದರು.
“ರಷ್ಯಾ ಇಸ್ರೇಲಿನಲ್ಲಿ ಹಮಾಸ್ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎನ್ನುವುದು ನಮ್ಮ ನಂಬಿಕೆ. ಪ್ರಸ್ತುತ ಬಿಕ್ಕಟ್ಟನ್ನು ನೋಡಿದರೆ, ರಷ್ಯಾ ಜಗತ್ತನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ನಿಜ” ಎಂದು ಝೆಲೆನ್ಸ್ಕಿ ಹೇಳಿದರು.
ಮತ್ತೊಂದೆಡೆ, ಇಸ್ರೇಲ್ ದುರಂತದೊಂದಿಗೆ, ವಿಶ್ವ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಕಾಳಜಿ ವಹಿಸಲಿಲ್ಲ. ‘ಉಕ್ರೇನ್ ಮತ್ತು ಇಸ್ರೇಲ್‌ನಲ್ಲಿ ನಡೆದ ಘಟನೆಗಳನ್ನು ನಾನು ಹೋಲಿಕೆ ಮಾಡುತ್ತಿಲ್ಲ. ನಮ್ಮ ದೇಶದಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ಇಸ್ರೇಲಿನಲ್ಲಿ ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು. ದುರಂತದ ರೀತಿಗಳು ವಿಭಿನ್ನವಾಗಿದ್ದರೂ ಸಹಈ ಎರಡು ಸಮಸ್ಯೆಗಳು ತುಂಬಾ ಗಂಭೀರವಾಗಿವೆ” ಎಂದು ಝೆಲೆನ್ಸ್ಕಿ ಹೇಳಿದರು.
ಉಕ್ರೇನ್‌ನತ್ತ ಗಮನ ಹರಿಸದಿದ್ದರೆ ಮುಂದೆ ಜಗತ್ತು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು. ಉಕ್ರೇನ್‌ನ ಭವಿಷ್ಯವು ವಿಶ್ವದ ಏಕತೆಯ ಮೇಲೆ ಅವಲಂಬಿತವಾಗಿದೆ ಮತ್ತು ವಿಶ್ವದ ಏಕತೆ ಅಮೆರಿಕದ ಏಕತೆಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು.
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಮಾತನಾಡುತ್ತಾ, ರಷ್ಯಾ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ವಿಮೋಚನೆಗೊಳಿಸಲು ಸೇನೆಯು ಹೋರಾಡುತ್ತಿದೆ ಎಂದು ಝೆಲೆನ್ಸ್ಕಿ ಹೇಳಿದರು. ರಷ್ಯಾದ ಬಲಿಷ್ಠ ಜಾಲದಿಂದಾಗಿ ಸೇನೆಗೆ ಹೆಚ್ಚಿನ ತೊಂದರೆಯಾಗುತ್ತಿದೆಯಾದರೂ ಉತ್ತಮ ಫಲಿತಾಂಶವನ್ನು ಸಾಧಿಸುತ್ತಿದೆ ಎಂದರು.