ಗುವಾಹಟಿ: ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಸುಗಳನ್ನು ಕದಿಯುತ್ತಿದ್ದಾರೆಂಬ ಆರೋಪದ ಮೇಲೆ ಕೇಸರಿ ಪಡೆಯ ಗುಂಪೊಂದು ಅಮಾನುಷವಾಗಿ ದಾಳಿ ನಡೆಸಿ ವಾಹನಕ್ಕೆ ಬೆಂಕಿ ಹಚ್ಚಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ.
ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಗುಂಪು ಹಲ್ಲೆಯ (mob lynching) ವಿರುದ್ಧ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿವೆ. ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆದಿದ್ದಾರೆ. ಸೋಮವಾರ ರಾತ್ರಿ ಕರಿಗಾಂವ್‌ನ ಮಾನ್ಸಿಂಗ್ ರಸ್ತೆಯಲ್ಲಿ ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ, ದುಷ್ಕರ್ಮಿಗಳು ಎಸ್‌ಯುವಿ ವಾಹನವೊಂದನ್ನು ತಡೆಯಲು ಯತ್ನಿಸಿದರು.
ಆದರೆ, ವಾಹನವು ನಿಲ್ಲಿಸದೆ ಮುಂದೆ ಸಾಗಿತು. ಇದರಿಂದ ಕೆರಳಿದ ಗುಂಪು ಆಕ್ರೋಶಗೊಂಡಿತು. ಇನ್ನೊಂದೆಡೆ, ಆ ವಾಹನವು ಸ್ವಲ್ಪ ದೂರ ಹೋಗಿ ಅಪಘಾತಕ್ಕೀಡಾಗಿ ನಿಂತಿತು. ಇದನ್ನು ನೋಡಿದ ಕೇಸರಿ ಪಡೆಯ ಗುಂಪು ಅಲ್ಲಿಗೆ ತೆರಳಿ ವಾಹನದಲ್ಲಿದ್ದವರ ಮೇಲೆ ದಾಳಿ ನಡೆಸಿತು.
ಅಷ್ಟಕ್ಕೇ ಸುಮ್ಮನಾಗದೆ ಎಸ್‌ಯುವಿಗೆ ಬೆಂಕಿ ಹಚ್ಚಿದರು. ವಿಷಯ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿ ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸಿದರು. ಅವರನ್ನು ಕೊಕ್ರಜಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಸಿಖ್ನಾ ಜ್ವಾಲಾವ್ ಬಿಸ್ಮತ್ ಎಂಬ ವ್ಯಕ್ತಿ ಮೃತಪಟ್ಟಿದ್ದರು.
ಮಂಗಳವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮುರ್ಮು ಮೃತಪಟ್ಟರು. ಪ್ರಭಾತ್ ಬ್ರಹ್ಮ, ಜುಬಿರಾಜ್ ಬ್ರಹ್ಮ ಮತ್ತು ಮಹೇಶ್ ಮುರ್ಮು ಎಂಬ ಇನ್ನಿತರ ಮೂವರು ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಸ್ತವವಾಗಿ, ಇವರೆಲ್ಲರೂ ಸ್ಥಳೀಯವಾಗಿ ನಡೆಯುತ್ತಿರುವ ರಸ್ತೆ ನಿರ್ಮಾಣ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿ ಹಿಂತಿರುಗುತ್ತಿದ್ದಾಗ ಅವರು ಈ ಗುಂಪು ಹಲ್ಲೆಗೆ ಒಳಗಾಗಿದ್ದಾರೆ.
ಮತ್ತೊಂದೆಡೆ, ಈ ಗುಂಪು ಹಲ್ಲೆಯು ಜಿಲ್ಲೆಯಲ್ಲಿ ಆದಿವಾಸಿಗಳು ಮತ್ತು ಬೋಡೋಗಳ ನಡುವಿನ ಘರ್ಷಣೆಗೆ ದಾರಿ ಮಾಡಿಕೊಟ್ಟಿತು. ಮಂಗಳವಾರ ಬೆಳಿಗ್ಗೆಯಿಂದಲೇ ಈ ಎರಡೂ ಗುಂಪುಗಳಿಗೆ ಸೇರಿದ ಜನರು ಪ್ರತಿಭಟನೆಗೆ ಇಳಿದರು. ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು. ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟುಹಾಕಿದರು.
ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಸರ್ಕಾರಿ ಕಚೇರಿಗಳಿಗೂ ಬೆಂಕಿ ಇಟ್ಟರು. ಅಲ್ಲದೆ, ಕರಿಗಾಂವ್ ಪೊಲೀಸ್ ಹೊರಠಾಣೆಯ ಮೇಲೂ ದಾಳಿ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಭಾರತೀಯ ಸೇನೆಯನ್ನೂ ನಿಯೋಜಿಸಲಾಗಿದೆ. ನಾಲ್ಕು ಸೇನಾ ತುಕಡಿಗಳು ಸ್ಥಳೀಯ ಭದ್ರತಾ ಸಿಬ್ಬಂದಿಯೊಂದಿಗೆ ಸೇರಿ ಗಸ್ತು ತಿರುಗಿದವು.
ಪಥಸಂಚಲನ (ಫ್ಲ್ಯಾಗ್ ಮಾರ್ಚ್) ಕೂಡ ನಡೆಸಲಾಯಿತು. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೊಕ್ರಜಾರ್ ಜಿಲ್ಲೆಯ ಜೊತೆಗೆ ನೆರೆಯ ಚಿರಾಂಗ್ ಜಿಲ್ಲೆಯಲ್ಲಿಯೂ ಮೊಬೈಲ್ ಇಂಟರ್ನೆಟ್ ಮತ್ತು ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಬುಧವಾರ ಹೊಸದಾಗಿ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಿಲ್ಲವಾದರೂ, ಪರಿಸ್ಥಿತಿ ಉದ್ವಿಗ್ನವಾಗಿಯೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
