ಒಂಟಿ ದಂತದ ಪುಂಡಾನೆಯೊಂದು ನಡೆಸಿದ ಭೀಕರ ದಾಂಧಲೆಯಲ್ಲಿ ಕೇವಲ 9 ದಿನಗಳಲ್ಲಿ 22 ಜನರು ಮೃತಪಟ್ಟ ನಂತರ ಜಾರ್ಖಂಡ್ ಸರ್ಕಾರ “ಆನೆ ತುರ್ತುಪರಿಸ್ಥಿತಿ”ಯನ್ನು (Elephant Emergency) ಘೋಷಿಸಿದೆ. ಜನವರಿ ಆರಂಭದಿಂದಲೂ ಅರಣ್ಯ ಅಧಿಕಾರಿಗಳು ಈ ಸಲಗನಿಗಾಗಿ ಶೋಧ ನಡೆಸುತ್ತಿದ್ದಾರೆ.
ಇತ್ತೀಚಿನ ಸಂತ್ರಸ್ತರಲ್ಲಿ ಬೇನಿಸಾಗರದ 40 ವರ್ಷದ ಪ್ರಕಾಶ್ ಮಾಳ್ವ ಮತ್ತು ಮಗುವೊಂದು ಸೇರಿದೆ. ದಾಳಿಯ ಸಮಯದಲ್ಲಿ ಮಗುವಿನ ದೇಹವು ಆನೆಯ ದಂತಕ್ಕೆ ಸಿಕ್ಕಿಹಾಕಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಆನೆಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳದಿಂದ ಆಗಮಿಸಿದ್ದ ಅರಣ್ಯ ಅಧಿಕಾರಿಯೊಬ್ಬರು ಕೂಡ ಗಾಯಗೊಂಡಿದ್ದಾರೆ. ಗ್ರಾಮಸ್ಥರು ಮತ್ತು ಅಧಿಕಾರಿಗಳ ತಂಡವು ಆನೆಯನ್ನು ಓಡಿಸಲು ಪ್ರಯತ್ನಿಸುತ್ತಿದ್ದಾಗ, ಆನೆಯು ಅಧಿಕಾರಿಯನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆ ಮತ್ತು ಸರಂಡಾ, ಕೊಲ್ಹಾನ್ ಹಾಗೂ ಚೈಬಾಸಾ ಅರಣ್ಯಗಳ ಸುತ್ತಮುತ್ತ ಈ ವರ್ಷದ ಆರಂಭದಲ್ಲಿ ಈ ದಾಳಿಗಳು ಪ್ರಾರಂಭವಾದವು. ರಾತ್ರಿ ವೇಳೆ ಹಲವಾರು ಗ್ರಾಮಗಳಿಗೆ ನುಗ್ಗಿದ ಆನೆ, ಮಲಗಿದ್ದವರ ಮೇಲೆ ದಾಳಿ ಮಾಡಿದೆ.
ತನ್ನ ಮಂದೆಯಿಂದ ಬೇರ್ಪಟ್ಟ ನಂತರ ಈ ಪ್ರಾಣಿ ಅತ್ಯಂತ ಆಕ್ರೋಮಣಕಾರಿಯಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಇದು ದಿನಕ್ಕೆ ಸುಮಾರು 30 ಕಿಲೋಮೀಟರ್‌ಗಳಷ್ಟು ವೇಗವಾಗಿ ಚಲಿಸುತ್ತಿದೆ.
ಆನೆಯನ್ನು ಪತ್ತೆಹಚ್ಚಲು ಜಾರ್ಖಂಡ್ ಅರಣ್ಯ ಇಲಾಖೆಯು 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅವರು ಮೂರು ಬಾರಿ ಆನೆಗೆ ಅರಿವಳಿಕೆ ಮದ್ದು ನೀಡಲು (tranquillise) ಪ್ರಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ.
ಸಲಗವನ್ನು ಪತ್ತೆಹಚ್ಚಲು ಇತರ ಮೂರು ರಾಜ್ಯಗಳಿಂದ ವನ್ಯಜೀವಿ ತಜ್ಞರನ್ನು ಕರೆಸಲಾಯಿತಾದರೂ, ಆನೆಯು ಅನಿಶ್ಚಿತವಾಗಿ ಮತ್ತು ಚಂಚಲವಾಗಿ ಚಲಿಸುತ್ತಿರುವುದರಿಂದ ಅದನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆನೆಯು ತನ್ನ ಸ್ಥಳಗಳನ್ನು ತ್ವರಿತವಾಗಿ ಬದಲಾಯಿಸುತ್ತಿದ್ದು, ರಾತ್ರಿ ವೇಳೆ ಜನವಸತಿಗಳ ಮೇಲೆ ದಾಳಿ ಮಾಡಿ ಹಗಲಿನಲ್ಲಿ ದಟ್ಟವಾದ ಕಾಡುಗಳಲ್ಲಿ ಅಡಗಿಕೊಳ್ಳುತ್ತಿರುವುದರಿಂದ ಅದನ್ನು ಪತ್ತೆಹಚ್ಚುವುದು ಸವಾಲಾಗಿದೆ.
ಅರಣ್ಯನಾಶ, ಆಹಾರ ಮತ್ತು ನೀರಿನ ಕೊರತೆ ಹಾಗೂ ಆನೆ ಕಾರಿಡಾರ್‌ಗಳ ಒತ್ತುವರಿ ಹೆಚ್ಚಾಗಿರುವುದರಿಂದ ಭಾರತದಲ್ಲಿ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷಗಳು ಹೆಚ್ಚುತ್ತಿವೆ.
ಹಿಂದೆ ಆನೆ ಕಾರಿಡಾರ್‌ಗಳಾಗಿದ್ದ ಪ್ರದೇಶಗಳಲ್ಲಿ ಸುಮಾರು ಶೇ. 10 ರಷ್ಟು ಪ್ರದೇಶಗಳು ಈಗ ಅಸ್ತಿತ್ವದಲ್ಲಿಲ್ಲ. ವಿದ್ಯುತ್ ಸ್ಪರ್ಶ, ರೈಲು ಅಪಘಾತಗಳು ಮತ್ತು ಸೇಡು ತೀರಿಸಿಕೊಳ್ಳಲು ವಿಷವಿಕ್ಕುವ ಕಾರಣಗಳಿಂದಲೂ ಭಾರತದಲ್ಲಿ ಆನೆಗಳು ಸಾವನ್ನಪ್ಪುತ್ತಿವೆ.
“ಇದು ಹಿಂದೆಂದೂ ಕಾಣದಂತಹ ಪರಿಸ್ಥಿತಿ. ಈ ಪ್ರದೇಶದಲ್ಲಿ ಒಂದೇ ಗಂಡಾನೆ ಇಷ್ಟೊಂದು ಸಾವುನೋವುಗಳಿಗೆ ಕಾರಣವಾಗಿರುವುದು ಇದೇ ಮೊದಲು,” ಎಂದು ವಿಭಾಗೀಯ ಅರಣ್ಯಾಧಿಕಾರಿ ಕುಲದೀಪ್ ಮೀನಾ ಹೇಳಿದ್ದಾರೆ.
ಆನೆಯು ಮದವೇರಿದ (musth) ಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಂತದಲ್ಲಿ ಪ್ರಾಣಿಯ ಟೆಸ್ಟೋಸ್ಟಿರೋನ್ ಮಟ್ಟವು ಹೆಚ್ಚಾಗಿ, ಅವು ಹೆಚ್ಚು ಕೋಪಗೊಳ್ಳುತ್ತವೆ ಮತ್ತು ಆಕ್ರಮಣಕಾರಿಯಾಗುತ್ತವೆ. ಈ ವರ್ತನೆಯು 15 ರಿಂದ 60 ದಿನಗಳವರೆಗೆ ಇರುತ್ತದೆ.
ಜಾರ್ಖಂಡ್ ಸುಮಾರು 550 ರಿಂದ 600 ಆನೆಗಳಿಗೆ ನೆಲೆಯಾಗಿದೆ.3 ಆಹಾರ ಮತ್ತು ನೀರಿಗಾಗಿ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರುವುದರಿಂದ ಕಾಡಿನ ಸಮೀಪವಿರುವ ಹಳ್ಳಿಗಳು ಆನೆಗಳ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.
ರಾಜ್ಯದಲ್ಲಿ 2000 ಮತ್ತು 2025 ರ ನಡುವೆ ಸುಮಾರು 1,400 ಸಾವುಗಳು ಸಂಭವಿಸಿದ್ದು, 600 ಕ್ಕೂ ಹೆಚ್ಚು ಗಂಭೀರ ಗಾಯಗಳಾಗಿವೆ. 2026 ರಲ್ಲಿ ದಾಳಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪ್ರಾಥಮಿಕ ದತ್ತಾಂಶಗಳು ಸೂಚಿಸುತ್ತವೆ.
