ಸಕಲೇಶಪುರ: ಸಾಕಲು ಕರುವೊಂದನ್ನು ತರುತ್ತಿದ್ದ ತಾಲ್ಲೂಕಿನ ಹಲಸುಲಿಗೆ ಗ್ರಾಮದ ಮಂಜುನಾಥ್ ಎಂಬ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆಸ್ಪತೆಗೆ ದಾಖಲಾಗುವ ಸಂದರ್ಭದಲ್ಲಿ ಯುವಕನ ಬಂಧುಗಳು, ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಭಜರಂಗ ದಳದ ವಿರುದ್ಧ ಇಂದು ಸಕಲೇಶಪುರದ ದಲಿತ ಸಂಘಟನೆಗಳು ಸಿಡಿದೆದ್ದು ಪ್ರತಿಭಟಿಸಿವೆ.
ಇಂದು ಸಾವಿರಾರು ಮಂದಿ ಕಾರ್ಯಕರ್ತರು ನೆರೆದು ಕೂಡಲೇ ಹಲ್ಲೆ ನಡೆಸಿದ ಆರೋಪಿಗಳಾದ ಭಜರಂಗದಳದ ರಘು ಮತ್ತು ಇತರರನ್ನು ಬಂಧಿಸದೇ ಹೋದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ದಲಿತ ಮುಖಂಡ ಲಕ್ಷ್ಮಣ್ ಕೀರ್ತಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಕೈಗೆ ಪೆನ್ನು ಕೊಟ್ಟಿದ್ದಾರೆ, ಸಂವಿಧಾನ ಕೊಟ್ಟಿದ್ದಾರೆ. ಅದರ ಬದಲಾಗಿ ಗನ್ನು ಕೊಟ್ಟಿದ್ದರೆ ಏನಾಗುತ್ತಿತ್ತೆಂದು ಊಹಿಸಿ ಎಂದು ಮಾರ್ಮಿಕವಾಗಿ ನುಡಿದರಲ್ಲದೆ, ಭಜರಂಗದಳದ ಗೂಂಡಾಗಳಿಗೆ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಪಿಐಎಂ ಮುಖಂಡ ಎ.ಆರ್.ಧರ್ಮೇಶ್ ಮಾತನಾಡಿ, ನಾವು ಹೇಡಿಗಳಲ್ಲ. ನಮ್ಮ ವಿರುದ್ಧ ದಾಳಿ ನಡೆಸಿದವರ ವಿರುದ್ಧ ನಾವು ಪ್ರತಿದಾಳಿ ನಡೆಸುವುದಿಲ್ಲ. ಆದರೆ ಕಾನೂನು ಮೂಲಕವೇ ಹೋರಾಡುತ್ತೇವೆ. ಪೊಲೀಸ್ ಇಲಾಖೆ ರೌಡಿಗಳು, ದರೋಡೆಕೋರರು, ರೇಪಿಸ್ಟ್ ಗಳನ್ನು ರಕ್ಷಿಸುವ ಕೆಲಸ ಮಾಡಬಾರದು. ಕೂಡಲೇ ಭಜರಂಗಿ ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಕೇಂದ್ರ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ತಾಲ್ಲೂಕು ಮತ್ತು ಜಿಲ್ಲೆಯ ಹಲವಾರು ದಲಿತ ಮುಖಂಡರು ಪಾಲ್ಗೊಂಡಿದ್ದರು.