ಸಕಲೇಶಪುರ ಎತ್ತಿನಹೊಳೆ ಪೈಪ್‌ಲೈನ್ ಸ್ಫೋಟ – ನೂರು ಅಡಿ ಎತ್ತರಕ್ಕೆ ಚಿಮ್ಮಿದ ನೀರು

ಹಾಸನ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಸ್ಫೋಟಗೊಂಡ ಪರಿಣಾಮ ಮುಗಿಲೆತ್ತರಕ್ಕೆ ನೀರು ಚಿಮ್ಮಿದ ಘಟನೆ ತಾಲೂಕಿನ ಹಲಸುಲಿಗೆ ಗ್ರಾಮದ ಬಳಿ ನಡೆದಿದೆ. ಪೈಪ್‌ಲೈನ್ ಒಡೆದು ನೀರು ಸುತ್ತಮುತ್ತಲಿನ ಪ್ರದೇಶಕ್ಕೆ ಹರಿದಿದ್ದು, ಅಪಾರ ಪ್ರಮಾಣದಲ್ಲಿ ಪೋಲಾಗಿದೆ. ಪೈಪ್‌ಲೈನ್ ಸ್ಫೋಟಗೊಂಡ ವೇಳೆ ಭಾರೀ ಶಬ್ದ ಕೇಳಿಬಂದಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾದರು.ಅಲ್ಲದೇ, ನೀರು ಸಮೀಪದ ಕಾಫಿ ತೋಟಗಳು ಹಾಗೂ ಕೃಷಿ ಜಮೀನುಗಳಿಗೆ ನುಗ್ಗಿದ್ದು, ಬೆಳೆಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ. ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ನೀರು ಹರಿದು ಹೋಗಿದೆ. ರೈತರು ತಮ್ಮ ಜಮೀನಿಗಳಿಗೆ ತೆರಳುತ್ತಿದ್ದ ವೇಳೆ, ನೀರು ಚಿಮ್ಮುತ್ತಿರುವುದನ್ನು ಕಂಡು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯೋಜನೆ ಪೂರ್ಣಗೊಂಡು ನೀರು ಹರಿಸುವ ಮುನ್ನವೇ ಪೈಪ್‌ಲೈನ್‌ಗಳು ಒಡೆಯುತ್ತಿರುವುದರಿಂದ, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಅಧಿಕಾರಿಗಳ ಪರಿಶೀಲನೆಯ ಬಳಿಕ ತಿಳಿಯಬೇಕಿದೆ.

ಸಾವಿರಾರು ಕೋಟಿ ಮೊತ್ತದ ಯೋಜನೆ: 2014ರಲ್ಲಿ 12,000 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಯೋಜನೆಯ ಮೊತ್ತ ಇದೀಗ 23 ಸಾವಿರ ಕೋಟಿಗೆ ಏರಿಕೆಯಾಗಿದೆ. ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಮೊದಲ ಹಂತದ ನೀರೆತ್ತುವ ಯೋಜನೆ ಉದ್ಘಾಟನೆಗೊಂಡು 2 ವರ್ಷಗಳು ಕಳೆದರೂ ಯಾವ ಜಿಲ್ಲೆಗಳಿಗೂ ನೀರು ಹರಿಸಲು ಸಾಧ್ಯವಾಗಿಲ್ಲ. ಆದರೆ, ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ನೀರಿನ ಒತ್ತಡ ತಡೆಯದೇ ಪೈಪ್‌ಲೈನ್‌ಗಳ ಜೋಡಣೆ ಕಿತ್ತು ಬರುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿಂದೆ ಸಕಲೇಶಪುರ ತಾಲೂಕಿನ, ದೇಕ್ಲಾ ಗ್ರಾಮದ ಬಳಿ ಪೈಪ್‌ಲೈನ್‌ ಜೋಡಣೆ ಬಿಟ್ಟು ರಸ್ತೆ ಕೊಚ್ಚಿ ಹೋಗಿತ್ತು. ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಇದೀಗ ಹಲಸುಲಿಗೆ ಗ್ರಾಮದ ಬಳಿ ಪೈಪ್‌ಲೈನ್‌ ಒಡೆದಿದೆ. ಅಲ್ಲದೇ ಎತ್ತಿನಹೊಳೆ ಯೋಜನೆಗೆ ವಿದ್ಯುತ್ ಪೂರೈಸುವ 220 ಕೆವಿಯ ವಿದ್ಯುತ್ ತಂತಿಗಳು, ಟವರ್‌ಗಳಿಗೂ ನೀರು ಬೀಳುತ್ತಿದ್ದು‌ ಸುದ್ದಿ ತಿಳಿದ ಕೂಡಲೇ ಚೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಪಾಯ ತಪ್ಪಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಸುರಿದಿದ್ದರಿಂದ ಕೆಂಪುಹಳ್ಳದಲ್ಲಿ ಭಾರಿ ನೀರು ಹರಿಯುತ್ತಿದ್ದು ಪ್ರಾಯೋಗಿಕವಾಗಿ ಹಳೇಬೀಡು ಕೆರೆಗೆ ನೀರು ಹರಿಸಲಾಗಿದೆ. ಕೆರೆ ಕೋಡಿ ಬಿದ್ದು ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ನೀರು ಹರಿಯುತ್ತಿದೆ.

ಸ್ಥಳಕ್ಕೆ ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಬೆಳೆ ಹಾನಿಯಾಗಿದ್ದರೆ ಸೂಕ್ತ ಪರಿಹಾರ ನೀಡುವಂತೆ ಎತ್ತಿನಹೊಳೆ ಯೋಜನೆ ಇಂಜಿನಿಯರ್‌ಗೆ ಸೂಚನೆ ನೀಡಿದರು.ಪ್ರಾರಂಭದಿಂದಲೂ ಸ್ಥಳೀಯರು ಹೇಳುತ್ತಾ ಬಂದಿದ್ದಾರೆ. ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದ್ದು, ಯೋಜನೆ ಪೂರ್ಣಗೊಂಡು ಸಂಪೂರ್ಣ ನೀರು ಹರಿಸಿದರೆ ಹಲವೆಡೆ ಪೈಪ್‌ಲೈನ್‌ಗಳು ಒಡೆಯುವ ಆತಂಕ ಎದುರಾಗಿದೆ. ಈಗ ರೈತರು ಜಮೀನಿಗಳಿಗೆ ತೆರಳುವ ರಸ್ತೆಗೆ ನೀರು ಬಲವಾಗಿ ಚಿಮ್ಮುತ್ತಿದ್ದ ಕಾರಣ ರೈತರು ಜಮೀನಿಗೆ ತೆರಳಲು ಪರದಾಡಬೇಕಾಯಿತು ಎಂದು ಸ್ಥಳೀಯರಾದ ಜಾನೇಕೆರೆ ಪರಮೇಶ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಟಿಸಿಎಲ್ ಇಂಜಿನಿಯರ್ ಪ್ರಮೋದ್ ಕುಮಾರ್, ಎತ್ತಿನಹೊಳೆಯಿಂದ ಜಮೀನಿನ ಮಣ್ಣು ಹಾಳಾಗಿದ್ದರೆ ಅದನ್ನು ಸರಿಮಾಡಿಸುವ ಕಾರ್ಯ ಮಾಡಲಾಗುವುದು. ರೈತರು ಆತಂಕಪಡುವ ಅಗತ್ಯವಿಲ್ಲ. ನಷ್ಟ ಪರಿಹಾರವನ್ನು ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು