Friday, June 14, 2024

ಸತ್ಯ | ನ್ಯಾಯ |ಧರ್ಮ

ʼಸಖಿʼ ಮತಗಟ್ಟೆಯ ಸಖಿಯರ ಅಳಲು

ಸಖೀ ಮತಗಟ್ಟೆಯಲ್ಲಿ ಎಲ್ಲರಿಗೂ ಗುಲಾಬಿ ಬಣ್ಣದ ಸೀರೆಯನ್ನು ನೀಡಿ ಅದನ್ನು ಉಟ್ಟುಕೊಂಡು  ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿತ್ತು. ದಕ್ಷಿಣ ಕನ್ನಡದ ಸುಡುಸೆಖೆಗೆ ಮಸ್ಟರಿಂಗ್ ದಿನ ಸಿಕ್ಕಂತಹ ಪಿಂಕ್ ಬಣ್ಣದ  ಬೆವರು ಹೀರದ ಪಾಲಿಸ್ಟರ್ ಸೀರೆ ಅವರ ಕರ್ತವ್ಯದ ಮೇಲೆ ಒಂದಿಷ್ಟು ವ್ಯತಿರಿಕ್ತ ಪರಿಣಾಮ ಬೀರಿರಲಾರದೇ? – ಪ್ರಜ್ವಲಾ ಶೆಣೈ, ಕಾರ್ಕಳ

ಚುನಾವಣಾ ಆಯೋಗ ಪ್ರತಿ ಚುನಾವಣೆಯಲ್ಲೂ ಮತದಾನ ಜಾಗೃತಿಗಾಗಿ ಹಾಗೂ ಮತದಾರರನ್ನು ಸೆಳೆಯಲು ಹತ್ತು ಹಲವು ವಿನೂತನ ಪ್ರಯೋಗಗಳನ್ನು ಜಾರಿಗೊಳಿಸುತ್ತಾ ಅನೇಕ ವೈಶಿಷ್ಠ್ಯಗಳಿಗೆ ಸಾಕ್ಷಿಯಾಗಿದೆ. ಈ ಬಾರಿ ರಾಜ್ಯದಾದ್ಯಂತ ಸುಮಾರು  200 ಕ್ಕಿಂತಲೂ ಹೆಚ್ಚು ಥೀಮ್ ಗಳಲ್ಲಿ ಮತಗಟ್ಟೆ ನಿರ್ಮಾಣ ಮಾಡಲಾಗಿತ್ತು. ಮಹಿಳೆಯರೇ ನಿರ್ವಹಿಸುವ ಗುಲಾಬಿ ಬಣ್ಣದ  ಸಖಿ ಮತಗಟ್ಟೆಗಳು, ನೀಲತರಂಗ  ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ, ಪರಿಸರ, ವಿಜ್ಞಾನ – ತಂತ್ರಜ್ಞಾನ ಆಧಾರಿತ ಮತಗಟ್ಟೆ, ಕ್ರೀಡಾ ಮತಗಟ್ಟೆ, ಯುವ ಮತಗಟ್ಟೆ, ಮಾಜಿ ಸೈನಿಕರ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ಗೋ ಗ್ರೀನ್ ಮತಗಟ್ಟೆ, ಸಂಸ್ಕೃತಿ ಮತ್ತು ಪರಂಪರೆ ಮತಗಟ್ಟೆ ಇತ್ಯಾದಿ ಆಕರ್ಷಕ ಥೀಮ್ ಗಳಲ್ಲಿ ಹಲವಾರು ಮಾದರಿ ಮತಗಟ್ಟೆಗಳನ್ನು ರೂಪಿಸಲಾಗಿತ್ತು. ಅನೇಕ ಕಡೆಗಳಲ್ಲಿ ಮತಗಟ್ಟೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಾಗಿತ್ತು. ಇವುಗಳಿಂದ  ಮತದಾರರನ್ನು ಮತಗಟ್ಟೆಯತ್ತ ಸೆಳೆದು ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸ ಬೇಕೆಂಬುದು ಚುನಾವಣಾ ಆಯೋಗದ ಲೆಕ್ಕಾಚಾರವಾಗಿತ್ತು. ಚುನಾವಣೆಯನ್ನು ಒಂದು ಹಬ್ಬದಂತೆ ಸಂಭ್ರಮದಿಂದ ಆಚರಿಸಬೇಕೆಂಬುದು ಕೂಡ ಆಯೋಗದ ಮಹತ್ವಾಕಾಂಕ್ಷೆಯಾಗಿತ್ತು.

ದ.ಕ.ಜಿಲ್ಲೆಯಲ್ಲಿ ಮತಗಟ್ಟೆ ವೈವಿಧ್ಯಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಒಟ್ಟು  1,860  ಮತಗಟ್ಟೆಗಳಿದ್ದವು. ಸಖಿ ಮತಗಟ್ಟೆ, ಯುವ ಮತಗಟ್ಟೆ, ಕಂಬಳ ಮತಗಟ್ಟೆ, ಯಕ್ಷಗಾನ ಮತಗಟ್ಟೆ, ಸಂಸ್ಕೃತಿ ಮತ್ತು ಪರಂಪರೆಯ ಮತಗಟ್ಟೆ, ವಿಕಲಚೇತನ ಮತಗಟ್ಟೆ, ನೀಲತರಂಗ ಮತಗಟ್ಟೆ, ಗೋ ಗ್ರೀನ್ ಮತಗಟ್ಟೆ ಮತ್ತು ಎಥ್ನಿಕ್ ಮತಗಟ್ಟೆ ಎಂಬುದಾಗಿ ಒಂಬತ್ತು  ಪರಿಕಲ್ಪನೆಯಡಿ 100 ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಇವುಗಳಲ್ಲಿ ಸಖಿ, ಯುವ ಮತ್ತು ವಿಕಲಚೇತನ ಎನ್ನುವ ಮೂರು ಪರಿಕಲ್ಪನೆಗಳು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೆ  ಅನ್ವಯವಾಗಿರುವಂಥವುಗಳು. ಉಳಿದ ಆರು ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸಂಬಂಧಿಸಿ ಇಲ್ಲಿಯ ವೈಶಿಷ್ಠ್ಯಗಳಿಗನುಗುಣವಾಗಿ ರೂಪಿತವಾದವುಗಳು. ಹಾಗೆಯೇ ಪ್ರತಿ ಜಿಲ್ಲೆಯ ವಿಶೇಷತೆಯನ್ನು ಆಧರಿಸಿ ಆಯಾಯ ಜಿಲ್ಲೆಯ ಮತಗಟ್ಟೆ ಪರಿಕಲ್ಪನೆಗಳನ್ನು ರೂಪಿಸಲಾಗಿದೆ.

ಸಖಿ ಮತಗಟ್ಟೆ ಎಂದರೆ ಏನು?

ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚು ಇರುವ ಮತಗಟ್ಟೆಗಳನ್ನು ಗ್ರಾಮವ್ಯಾಪ್ತಿಯಲ್ಲಿ ಗುರುತಿಸಿ ಸಖಿ ಮತಗಟ್ಟೆಯನ್ನು ರೂಪಿಸಲಾಗಿತ್ತು. ಇದಕ್ಕೆ ಗುಲಾಬಿ ಬಣ್ಣವನ್ನೇ ಹೆಚ್ಚು ಬಳಸಿ ಗೋಡೆಗಳಲ್ಲಿ ವಿವಿಧ ವರ್ಣರಂಜಿತ ವಿನ್ಯಾಸಗಳನ್ನು ರಚಿಸಲಾಗಿತ್ತು. ಹಾಗಾಗಿ ಸಖಿ ಮತಗಟ್ಟೆಗಳು ಪಿಂಕ್ ಬೂತ್ ಗಳು ಎಂದು ಕೂಡ ಹೆಸರಾಗಿದ್ದವು. ಚಿತ್ರಕಲಾ ಶಿಕ್ಷಕರ ಮುತುವರ್ಜಿಯಲ್ಲಿ ಮಹಿಳೆಯರ ಜೀವನವನ್ನು ಬಿಂಬಿಸುವ ಕಲಾಕೃತಿಗಳನ್ನು, ತಾಯಿಮಗುವಿನ ಚಿತ್ರಗಳನ್ನು, ಮಹಿಳೆ ಮತದಾನಕ್ಕೆ ಆಗಮಿಸುವ ವರ್ಲಿ ಚಿತ್ರಗಳನ್ನು ಸಖಿ ಮತಗಟ್ಟೆಗಳ ಹೊರಭಾಗದ ಗೋಡೆಯ ಇಕ್ಕೆಲಗಳಲ್ಲೂ ಬಿಡಿಸಲಾಗಿತ್ತು. ಈ ಸಖಿ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ಮಹಿಳೆಯರೇ ಆಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 100 ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಅವುಗಳಲ್ಲಿ  ಸುಮಾರು 40  ಸಖಿ ಮತಗಟ್ಟೆಗಳಾಗಿದ್ದವು.  ಗುಲಾಬಿ ಬಣ್ಣದ ಕಮಾನು, ಬಲೂನು, ಸೆಲ್ಫಿ ಸ್ಪಾಟ್ ಇತ್ಯಾದಿ ಹೆಚ್ಚಿನ ಆಕರ್ಷಣೆಗಳು ಕೂಡ ಬಹಳ ಕಡೆ ಕಂಡುಬಂದವು. ಈ ಎಲ್ಲವುಗಳ ಮೂಲಕ ಮಹಿಳಾ ಮತದಾರರನ್ನು ಆಕರ್ಷಿಸಿ  ಮತಗಟ್ಟೆ ಕಡೆಗೆ ಹೆಚ್ಚು ಮಂದಿ ಬರುವಂತೆ ಮಾಡುವ ಉದ್ದೇಶ ಈ ಮತಗಟ್ಟೆ ನಿರ್ಮಾಣದ ಹಿಂದಿತ್ತು.

ಸಖಿ ಮತಗಟ್ಟೆಯ ಸಿಬ್ಬಂದಿಗಳಿಗೆ ಪಿಂಕ್ ಸೀರೆ?!

ಸಖೀ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು ಎಲ್ಲರಿಗೂ ಗುಲಾಬಿ ಬಣ್ಣದ ಸೀರೆಯನ್ನು ನೀಡಿ ಅದನ್ನು ಉಟ್ಟುಕೊಂಡು  ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಮಸ್ಟರಿಂಗ್ ದಿನ ಕೊನೇ ಘಳಿಗೆಯಲ್ಲಿ ಸೀರೆ ವಿತರಿಸಿದ ಕಾರಣ ಅದನ್ನು ಉಡಲು ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಲು ಕೂಡ ಹಲವಾರು ಸಿಬ್ಬಂದಿಗಳಿಗೆ ತೊಂದರೆಯಾಯಿತು. (ರವಿಕೆ ಹೊಂದಿಸಲು ಪರದಾಟ-ಅದಕ್ಕೂ  ಹಲವರಿಗೆ ಸಮಯವಿರಲಿಲ್ಲ ಹೀಗೆ…) ಚುನಾವಣಾ ಕರ್ತವ್ಯದ ಸಿಬ್ಬಂದಿಗಳಲ್ಲಿ ಶಿಕ್ಷಕಿಯರು ಮಾತ್ರವಲ್ಲದೆ  ಬೇರೆ ಇಲಾಖೆಯವರೂ ಇರುತ್ತಾರೆ. ಎಷ್ಟೋ ಮಂದಿಗೆ ಈ ಬಾರಿಯ  ಚುನಾವಣಾ ಕರ್ತವ್ಯವು ಅವರ ವೃತ್ತಿಜೀವನದ  ಮೊದಲನೆಯ ಅನುಭವವಾಗಿತ್ತು. ವೃತ್ತಿ ಸಂದರ್ಭ ಸಲ್ವಾರ್ ಕಮೀಝ್ ಧರಿಸುವವರಿಗೆ ಸೀರೆ ಉಡುವುದು ಕೂಡಾ ಹೊಸ ಅನುಭವವೇ.  ಈ ಪರಿಸ್ಥಿತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆಯ ಸಂದರ್ಭ ಸೀರೆ ಉಡಲೇಬೇಕು ಎನ್ನುವುದು  ಅಂತವರನ್ನು ಆತಂಕಕ್ಕೀಡು ಮಾಡಿ ಇದು ಆ ದಿನದ ಕರ್ತವ್ಯದ ಮೇಲೆ ಒಂದಿಷ್ಟು ವ್ಯತಿರಿಕ್ತ ಪರಿಣಾಮ ಬೀರಿರಬಹುದು ಎನ್ನುವುದನ್ನು ಅಲ್ಲಗಳೆಯಲಾಗದು. 

ದಕ್ಷಿಣ ಕನ್ನಡದ ಸುಡುಸೆಖೆಗೆ ಒಂದಿಷ್ಟು  ಹಿತವಾಗುವಂತೆ ಹತ್ತಿವಸ್ತ್ರವನ್ನೇ ಧರಿಸಬೇಕು ಎಂದು ಸಿದ್ಧರಾಗಿ ಬಂದವರಿಗೆ ಮಸ್ಟರಿಂಗ್ ದಿನ ಸಿಕ್ಕಂತಹ ಪಿಂಕ್ ಬಣ್ಣದ  ಬೆವರು ಹೀರದ ಪಾಲಿಸ್ಟರ್ ಸೀರೆ ಬಿಸಿತುಪ್ಪದಂತಾದುದೂ  ಸುಳ್ಳಲ್ಲ ಎಂಬುದು ಅಲ್ಲಿ ಕರ್ತವ್ಯ ನಿರ್ವಹಿಸಿದ ಹಲವರ ಅನುಭವವೇ ಆಗಿದೆ.

ಸಖಿ ಮತಗಟ್ಟೆ ಎಂದರೆ ಪಿಂಕ್ ಬಣ್ಣವೇ ಏಕೆ?    

ಪಿಂಕ್ ಬೂತ್ ಗಳು ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಧ್ಯೇಯದಿಂದ ಆರಂಭವಾದರೂ ಮತ್ತೊಂದೆಡೆ ಲಿಂಗ ತಾರತಮ್ಯಕ್ಕೂ ಅನುವು ಮಾಡಿಕೊಟ್ಟವು ಎನ್ನುವ ಅಭಿಪ್ರಾಯ ಸಖಿ ಮತಗಟ್ಟೆಯ ಕೆಲವು ಸಿಬ್ಬಂದಿಗಳಿಂದ ವ್ಯಕ್ತವಾಗಿದೆ.. ಮಹಿಳೆ ಎಂದರೆ ಸಖಿಯೇ ಅನ್ನಬೇಕೇ, ಆಕೆ ತಾಯಿಯೂ ಅಲ್ಲವೇ?  ಅಮ್ಮ ಬೂತ್ ಎಂದರೆ ಮತ್ತಷ್ಟು ಆಪ್ತವಾಗಿರದೇ ಎನ್ನುವ ಅಭಿಪ್ರಾಯವೂ ಹೊರ ಬಂದಿದೆ. ಮಹಿಳೆ ಎಂದ ಕೂಡಲೇ ಪ್ರತಿ ಬಾರಿ ಗುಲಾಬಿ ಬಣ್ಣದೊಂದಿಗೇ ಸಹಸಂಬಂಧ ಮಾಡುವುದೇತಕೆ ಎನ್ನುವ ಲಿಂಗತ್ವದ  ಪ್ರಶ್ನೆಯೂ ಮೂಡಿ ಬಂದಿತು.   ನವಜಾತ ಹೆಣ್ಣು ಮಗು ಒಂದು ಹುಟ್ಟಿದಾಗಲೇ ಅದಕ್ಕೆ ಗುಲಾಬಿ ಬಣ್ಣದ ಫ್ರಾಕ್ ,ಗುಲಾಬಿ ಬಣ್ಣದ ಹೊದಿಕೆ ನೀಡಲಾಗುತ್ತದೆ. ಹೆಣ್ಣು ಎಂದು ಪ್ರತಿನಿಧಿಸುವ ಹಲವಾರು ಅಂಶಗಳಲ್ಲಿ ಗುಲಾಬಿ ಬಣ್ಣವನ್ನು ಜೊತೆಗೂಡಿಸಲಾಗುತ್ತದೆ. ಗುಲಾಬಿ ಬಣ್ಣವನ್ನು ಗಂಡು ಉಪಯೋಗಿಸುವುದು ಅವಮಾನವೆಂಬಂತೆ ನೋಡಲಾಗುತ್ತದೆ. ಗಂಡು ಮಕ್ಕಳು  ಗುಲಾಬಿ ಬಣ್ಣದ ವಸ್ತ್ರ, ಶೂ ಹಾಕಲು ಬಯಸಿದಾಗ ಕೂಡಲೇ ಗುಲಾಬಿ ಬಣ್ಣ ಏಕೆ? ಅದು ಹೆಣ್ಣು ಮಕ್ಕಳ ಬಣ್ಣ ..ನೀನು ನೀಲಿ, ಕಪ್ಪು ಬಣ್ಣ ಹಾಕಬೇಕು ಎಂದು ಗಂಡು, ಹೆಣ್ಣು ಆರಿಸಬೇಕಾದ ಬಣ್ಣವನ್ನು ತಲೆಯಲ್ಲಿ ತುಂಬಲಾಗುತ್ತದೆ. ಗಂಡು ಹೆಣ್ಣಿನ ಸಾಮಾಜೀಕರಣ ಹೀಗಿರುವಾಗ ಪಿಂಕ್  ಬೂತ್ ಗಳನ್ನು ಚುನಾವಣಾ ಆಯೋಗ ಉತ್ತಮ ಚಿಂತನೆ ಇಟ್ಟುಕೊಂಡು ಆರಂಭಿಸಿದ್ದರೂ  ಲಿಂಗಸೂಕ್ಷ್ಮತೆಯ ಬಗ್ಗೆ ಮಾತಾಡುವ ಈ ದಿನಗಳಲ್ಲಿ ಲಿಂಗತ್ವವನ್ನು ಮತ್ತಷ್ಟೂ ಗಟ್ಟಿಗೊಳಿಸುವ ಚುನಾವಣಾ ಆಯೋಗದ ಈ ನಡೆಯಲ್ಲಿ ಬದಲಾವಣೆ ಆಗಬೇಕಿದೆ.

ಮತಗಟ್ಟೆಯ ಅಲಂಕಾರಕ್ಕಿಂತ ಭೌತಿಕ ಸೌಲಭ್ಯಕ್ಕೆ ಒತ್ತು ನೀಡಲಿ..

ನೀಲ ತರಂಗ ಮತಗಟ್ಟೆಯಲ್ಲಿ ನೀಲಿ ಬಣ್ಣದ ಬಟ್ಟೆಯನ್ನೇ ಧರಿಸಬೇಕು ಎನ್ನುವುದು ಅಲ್ಲಿ ಕರ್ತವ್ಯನಿರತ ಚುನಾವಣಾ ಅಧಿಕಾರಿಗಳಿಗಾಗಲೀ, ಸಿಬ್ಬಂದಿಗಳಿಗಾಗಲಿ ಕಡ್ಡಾಯವಿರಲಿಲ್ಲ. ಯಕ್ಷಗಾನ ಮತಗಟ್ಟೆಯಲ್ಲಿ ಯಕ್ಷಗಾನದ  ವೇಷ ಧರಿಸಿ ಚುನಾವಣಾ ಕರ್ತವ್ಯ ನಿರ್ವಹಿಸಲಂತೂ  ಸಾಧ್ಯವೇ ಇಲ್ಲ.  ಹಾಗಿರುವಾಗ ಸಖಿ ಮತಗಟ್ಟೆಯ  ಸಿಬ್ಬಂದಿಗಳಿಗೆ ಗುಲಾಬಿ ಸೀರೆ ಧರಿಸಲು ಹೇಳುವುದು ಎಷ್ಟು ಔಚಿತ್ಯ ಪೂರ್ಣ? ಬೇರಾರಿಗೂ ಇಲ್ಲದ ಈ  ನಿಯಮ ಸಖಿ ಮತಗಟ್ಟೆಯ ಮಹಿಳಾ ಸಿಬ್ಬಂದಿಗಳಿಗೆ ಮಾತ್ರ ಹೇರುವುದು ಇಬ್ಬಗೆಯ ನೀತಿಯಾಗದೆ?  ಬಣ್ಣದಿಂದ ಸಖಿ ಮತಗಟ್ಟೆ ಗುರುತಿಸುವ ಬದಲು ಸೌಲಭ್ಯಗಳಿಂದ ಗುರುತಿಸಿದರೆ ಚೆನ್ನ ಅಲ್ಲವೇ? ಅಲಂಕಾರಕ್ಕಿಂತ  ಭೌತಿಕ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡುವಂತಾಗಬೇಕು. ಆಗ ಸಖಿ ಮತಗಟ್ಟೆಯ ಮಹಿಳಾ ಸಿಬ್ಬಂದಿಗಳು ಮಾತ್ರವಲ್ಲದೆ ಎಲ್ಲ  ಮತಗಟ್ಟೆಯ ಸಿಬ್ಬಂದಿಗಳೂ ಖುಷಿಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಲು ಸಾಧ್ಯ. ಮತದಾರಸ್ನೇಹಿ ಮತಗಟ್ಟೆ ಆಗಿರುವಂತೆ ಕುಡಿಯುವ ನೀರು, ನೆರಳಿಗೆ ಶಾಮಿಯಾನ ಇತ್ಯಾದಿ ವ್ಯವಸ್ಥೆಗಳನ್ನೆಲ್ಲ ಈಗ ಚುನಾವಣಾ ಆಯೋಗ ಪ್ರತಿ ಮತಗಟ್ಟೆಯಲ್ಲಿ ಕೈಗೊಳ್ಳುತ್ತಿದೆ. ಖಂಡಿತಕ್ಕೂ ಇವು   ಮೆಚ್ಚತಕ್ಕ ಅಂಶಗಳು. ಇಂತಹ ಅಗತ್ಯ ಮೂಲಭೂತ ಸೌಲಭ್ಯಗಳು ಮತದಾರರಿಗೂ, ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೂ ಲಭ್ಯವಾಗುವುದರಿಂದ ಪ್ರಯೋಜನವಿದೆಯೇ ಹೊರತು   ಇನ್ನಿತರೇ ಮತಗಟ್ಟೆಯ ಅಲಂಕಾರಗಳಿಂದಲ್ಲ. ಆಭರಣ, ಜವುಳಿ ಅಂಗಡಿಗಳಲ್ಲಿ ಜನರನ್ನು ಆಕರ್ಷಿಸುವ ಸಲುವಾಗಿ ವಿವಿಧ ರಿಯಾಯತಿ, ಆಕರ್ಷಣೆಗಳನ್ನು ಇಡುವುದನ್ನು ಕಾಣುತ್ತೇವೆ. ಆದರೆ ಮತಗಟ್ಟೆಯ ಅಲಂಕಾರದಿಂದ ಮತದಾರರು ಮತ ಚಲಾಯಿಸಲು ಮುಂದಾಗುತ್ತಾರೆ ಎನ್ನುವುದು ಎಷ್ಟು ಸತ್ಯ ಎಂಬುದನ್ನು ನಮ್ಮನ್ನು ನಾವೇ ಕೇಳಿಕೊಳ್ಳಬೇಕಿದೆ.

ಚುನಾವಣಾ ಆಯೋಗ ಈ ಬಾರಿ ಬರೋಬ್ಬರಿ 440ಕೋಟಿ ರೂಪಾಯಿಗಳನ್ನು  ಚುನಾವಣಾ ಖರ್ಚು ವೆಚ್ಚಕ್ಕೆ ಮೀಸಲಿಟ್ಟಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಇನ್ನು ಮುಂದಾದರೂ ಈ ಹಣವನ್ನು ಅಲಂಕಾರಕ್ಕಾಗಿ ಹೆಚ್ಚು ವಿನಿಯೋಗಿಸದೆ ಮತಗಟ್ಟೆಗಳ  ಭೌತಿಕ ಸೌಲಭ್ಯಕ್ಕೆ , ಸಿಬ್ಬಂದಿಗಳ ವಸತಿ, ಊಟೋಪಚಾರಕ್ಕೆ  ಹೆಚ್ಚು ಬಳಸುವುದು ಸೂಕ್ತ..ಆಗ ಸಿಬ್ಬಂದಿಗಳ ಕಾರ್ಯ ತತ್ಪರತೆಯೂ ಹೆಚ್ಚುತ್ತದೆ. ಮಹಿಳಾ ಸಿಬ್ಬಂದಿಗಳು ಚುನಾವಣಾ ಕರ್ತವ್ಯದಲ್ಲಿ ನೆಮ್ಮದಿಯಿಂದ ತೊಡಗಿಸಿಕೊಳ್ಳುವುದೂ ಸಾಧ್ಯವಾಗುತ್ತದೆ.  ಆಗ ಸಖಿ ಮತಗಟ್ಟೆ ಸ್ಥಾಪನೆಯ ಉದ್ದೇಶವೂ ಈಡೇರಿದಂತಾಗುತ್ತದೆ.

ಮತದಾರರು ಪ್ರಜ್ಞಾವಂತರಾಗಲಿ  

ನಮ್ಮ ಸಂವಿಧಾನವು ಸಮಾಜದ ಉನ್ನತ ಹುದ್ದೆಯಿಂದ  ಹಿಡಿದು ಕಟ್ಟ ಕಡೆಯ ವ್ಯಕ್ತಿಗೂ, ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ನೀಡಿ ಗೌರವಿಸಿದೆ. ಸಂವಿಧಾನ ಒದಗಿಸಿರುವ ಮತದಾನದ ಹಕ್ಕು ಯಾರಲ್ಲೂ ಹೆಣ್ಣು-ಗಂಡು, ಮೇಲು – ಕೀಳು ಯಾವುದೇ ತೆರನಾದ  ಬೇಧ ಭಾವ ಉಂಟು ಮಾಡುವುದಿಲ್ಲ. ನಮ್ಮ ಒಂದು ಮತ ಬಹಳ ಅಮೂಲ್ಯವಾದುದು. ನಮ್ಮ ಒಂದು ಮತ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು.

ಮತಗಟ್ಟೆಗಳನ್ನು   ಅಲಂಕಾರ ಮಾಡುವುದರಿಂದ  ಜನರನ್ನು ಮತದಾನ ಮಾಡಲು ಪ್ರೇರೇಪಿಸಲು ಸಾಧ್ಯವಿಲ್ಲ. ಮತದಾರರು ಪ್ರಜ್ಞಾವಂತರಾಗಿ, ಸ್ವಯಂ ಪ್ರೇರಿತರಾಗಿ ಮತ ಚಲಾಯಿಸಿದಾಗ  ಮಾತ್ರ ಭವ್ಯ, ಸದೃಢ ಭಾರತದ ನಿರ್ಮಾಣ ಸಾಧ್ಯ…ಅಲ್ಲವೇ?

ಪ್ರಜ್ವಲಾ ಶೆಣೈ

ಹವ್ಯಾಸಿ ಬರಹಗಾರ್ತಿ ಕಾರ್ಕಳ.

ಇದನ್ನೂ ಓದಿ-ಮಹಿಳೆ | ಮತದಾನಕ್ಕೆ ಬೇಕೇಬೇಕು; ಅಧಿಕಾರಕ್ಕೆ ಬೇಕೆಂದಿಲ್ಲ!

Related Articles

ಇತ್ತೀಚಿನ ಸುದ್ದಿಗಳು