ಮಾನ್ಯ ಪ್ರಧಾನಿ ಟ್ವೀಟ್‌ ಮಾಡಿದ್ದಾರೆ, ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ, ನೀವಿನ್ನು ಮನೆಗೆ ಹೋಗಿ: ವಿದ್ಯಾರ್ಥಿಗಳಿಗೆ ಸಲ್ಮಾನ್‌ ಖಾನ್‌ ಮನವಿ

ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಧಾನಿಯವರು ಕಠಿಣ ಕ್ರಮದ ಭರವಸೆ ನೀಡಿದ್ದು, ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮರಳಬೇಕು ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಗುರುವಾರ ಮನವಿ ಮಾಡಿದ್ದಾರೆ.

ಇದೇ ವೇಳೆ, ಅನಿರ್ದಿಷ್ಟಾವಧಿ ನಿರಾಹಾರ ಸತ್ಯಾಗ್ರಹ ನಡೆಸುತ್ತಿರುವ ಸಮಾಜ ಸೇವಕ ಸೋನಮ್ ವಾಂಗ್ಚುಕ್ ಅವರಿಗೂ ತಮ್ಮ ಉಪವಾಸವನ್ನು ಕೊನೆಗೊಳಿಸುವಂತೆ ಅವರು ಕೋರಿದ್ದಾರೆ.

ಈ ಕುರಿತು ಎಕ್ಸ್ (X) ಪೋಸ್ಟ್ ಮಾಡಿರುವ ಸಲ್ಮಾನ್ ಖಾನ್, “ಶಿಕ್ಷಣ ಮತ್ತು ಸುರಕ್ಷತೆಯ ದೃಷ್ಟಿಯಿಂದ ವಿದ್ಯಾರ್ಥಿಗಳೇ ನಮಗೆ ಮೊದಲ ಆದ್ಯತೆ. ಹಾಗಾಗಿ ಅವರು ಚಿಂತಿಸಬೇಕಿಲ್ಲ, ತಮ್ಮ ಪೋಷಕರನ್ನೂ ಆತಂಕಕ್ಕೆ ತಳ್ಳಬೇಕಿಲ್ಲ. ಆದರಣೀಯ ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ, ಈ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ಪ್ರತಿಯೊಬ್ಬರ ವಿರುದ್ಧವೂ ಅವರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಆದ್ದರಿಂದ ವಿದ್ಯಾರ್ಥಿಗಳೇ, ದಯವಿಟ್ಟು ನಿಮ್ಮ ಪೋಷಕರ ಬಳಿಗೆ ಮತ್ತು ಮನೆಗಳಿಗೆ ಹಿಂತಿರುಗಿ.”

“ಸೋನಮ್, ಇದು ಮುಗಿಯಿತು ಬ್ರೋ, ಇದನ್ನು ಇಷ್ಟಕ್ಕೇ ಮುಗಿಸು. ಇನ್ನೊಂದು ದಿನ ಅಗತ್ಯ ಬಿದ್ದರೆ (ಅದರ ಅಗತ್ಯ ಬೀಳಲ್ಲ ಅನಿಸುತ್ತೆ) ಈ ಉತ್ಸಾಹವನ್ನು ಮುಂದುವರಿಸು, ಈಗ ಏನಾದರೂ ಆಹಾರ ಸೇವಿಸು. ನಿನಗೆ ಬೇಕಿದ್ದರೆ ನನ್ನ ಮನೆಯಿಂದಲೇ ಊಟ ಕಳುಹಿಸಿಕೊಡುತ್ತೇನೆ,” ಎಂದು ಅವರು ಬರೆದಿದ್ದಾರೆ.

ವಿದ್ಯಾರ್ಥಿ ಚಳವಳಿಗೆ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ ಮರುದಿನವೇ ಈ ಹೇಳಿಕೆ ಹೊರಬಿದ್ದಿದೆ.

ಅದಕ್ಕೂ ಮುನ್ನ ಬುಧವಾರ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದ ಅವರು, ಪ್ರಶ್ನೆಪತ್ರಿಕೆ ಸೋರಿಕೆ “ಅತ್ಯಂತ ಗಂಭೀರವಾದ ವಿಷಯ” ಎಂದಿದ್ದರಲ್ಲದೆ, ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ವಿದ್ಯಾರ್ಥಿಗಳು ಒಗ್ಗೂಡಿರುವುದನ್ನು ಶ್ಲಾಘಿಸಿದ್ದರು.

“ಈ ಆಂದೋಲನ, ಈ ಪ್ರತಿಭಟನೆ ಅತ್ಯಂತ ಸರಿಯಾದ ಮಾರ್ಗವಾಗಿದೆ. ವಿದ್ಯಾರ್ಥಿಗಳು ಇದನ್ನು ಬಹಳ ಶಾಂತಿಯುತವಾಗಿ ಮಾಡಿದ್ದಾರೆ. ನಿಜಕ್ಕೂ ಧೈರ್ಯಶಾಲಿ ಮತ್ತು ಸಾಹಸಿಗಳು,” ಎಂದು ಅವರು ಬರೆದಿದ್ದರು.

ಇದರ ಜೊತೆಗೆ ಈ ವಿಷಯವನ್ನು ರಾಜಕೀಯವಾಗಿ ಹೈಜಾಕ್ ಮಾಡಬಾರದು ಮತ್ತು ಇದರ ಸಂಪೂರ್ಣ ಶ್ರೇಯಸ್ಸು ವಿದ್ಯಾರ್ಥಿಗಳಿಗೇ ಸಲ್ಲಬೇಕು ಎಂದು ಸಲ್ಮಾನ್ ಸೇರಿಸಿದ್ದರು.

ಮತ್ತೊಂದೆಡೆ, ಚಲನಚಿತ್ರ ರಂಗದ ಹಲವು ನಟರು ಪ್ರತಿಭಟನೆಯ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಚಿತ್ರರಂಗದಲ್ಲಿ ತೀವ್ರ ಭಿನ್ನಾಭಿಪ್ರಾಯ ಇರುವುದನ್ನು ತೋರಿಸಿದೆ.

ಇತ್ತೀಚೆಗೆ ನಡೆದ ‘ಚಲೋ ಸಂಸತ್’ ಮೆರವಣಿಗೆಯ ವೇಳೆ ಪೊಲೀಸರ ನಡವಳಿಕೆಯನ್ನು ಖಂಡಿಸಿ ಹಿರಿಯ ನಟ ನಸೀರುದ್ದೀನ್ ಶಾ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿ ನೋಡಿ ತಮ್ಮ ಹೃದಯ ಮಿಡಿಯುತ್ತಿದೆ ಮತ್ತು “ಕೋಪದಿಂದ ಕುದಿಯುತ್ತಿದ್ದೇನೆ” ಎಂದಿರುವ ಅವರು, ಪೊಲೀಸರ ಬಲಪ್ರಯೋಗವನ್ನು “ಅಮೆರಿಕದ ಐಸಿಇ (ICE) ಏಜೆಂಟ್‌ಗಳ” ಕಾರ್ಯಾಚರಣೆಗೆ ಹೋಲಿಸಿದ್ದಾರೆ.

ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳಬಾರದು ಎಂದಿರುವ ಶಾ, “ಸಬ್ ಯಾದ್ ರಖಾ ಜಾಯೇಗಾ” (ಎಲ್ಲವನ್ನೂ ನೆನಪಿಟ್ಟುಕೊಳ್ಳಲಾಗುತ್ತದೆ) ಎಂದು ಹೇಳುತ್ತಾ, ಹಲವು ಜನರು ಅವರೊಂದಿಗೆ ನಿಂತಿರುವುದರಿಂದ ತಮ್ಮ ಹೋರಾಟವನ್ನು ಮುಂದುವರಿಸುವಂತೆ ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳ ಘಟನೆಗಳು “ನನ್ನ ಮನಸ್ಸು ಬಹಳವಾಗಿ ನೊಂದಿತ್ತು, ಜೊತೆಗೆ ಹಲವೂ ಭರವಸೆಗಳನ್ನೂ ಹುಟ್ಟಿಸಿದೆ ” ಎಂದು ಆಲಿಯಾ ಭಟ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದೆ ಒಂದು ಕನಸು ಮತ್ತು ಅವರ ಕುಟುಂಬದ ತ್ಯಾಗವಿರುತ್ತದೆ ಎಂದಿರುವ ಅವರು, “ಅವರ ಧೈರ್ಯ ನನಗೆ ವಿನಮ್ರತೆ ಕಲಿಸಿದೆ… ವಿದ್ಯಾರ್ಥಿಗಳಿಗಾಗಿ. ವಿದ್ಯಾರ್ಥಿಗಳಿಂದ. ಭವಿಷ್ಯ ಅವರದ್ದು,” ಎಂದು ಹೇಳಿದ್ದಾರೆ.

ನಟರಾದ ಶಬಾನಾ ಅಜ್ಮಿ ಮತ್ತು ಪ್ರಕಾಶ್ ರಾಜ್ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರೊಂದಿಗೆ ಕೈಜೋಡಿಸಿದರು.

ಚಲೋ ಸಂಸತ್ ಮೆರವಣಿಗೆಯಲ್ಲಿ ಶಬಾನಾ ಅಜ್ಮಿ ವಿದ್ಯಾರ್ಥಿಗಳೊಂದಿಗೆ ಕಾಣಿಸಿಕೊಂಡಿದ್ದು, ಪ್ರತಿಭಟನೆಯು ಶಾಂತಿಯುತವಾಗಿತ್ತು ಮತ್ತು ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿತ್ತು ಎಂದು ಬಣ್ಣಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, ಸಂವಿಧಾನದ ಪ್ರತಿಯನ್ನು ಹಿಡಿದು ಹೊಣೆಗಾರಿಕೆಗೆ ಆಗ್ರಹಿಸಿದರು. ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಿರಾಹಾರ ಸತ್ಯಾಗ್ರಹದ ಸಂದರ್ಭದಲ್ಲಿ ವಾಂಗ್ಚುಕ್ ಅವರನ್ನು ಭೇಟಿಯಾಗಿದ್ದರು.

ವಿದ್ಯಾರ್ಥಿಗಳಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಇತರ ಪ್ರಮುಖರಲ್ಲಿ ರಾಜ್‌ಕುಮಾರ್ ರಾವ್, ಅನುರಾಗ್ ಕಶ್ಯಪ್, ರೇವತಿ, ಟೋವಿನೋ ಥಾಮಸ್, ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಕುರೇಷಿ ಸೇರಿದ್ದಾರೆ. ಇವರಲ್ಲಿ ಹಲವರು ಎಕ್ಸ್ (X) ಮತ್ತು ಇನ್ಸ್ಟಾಗ್ರಾಮ್ನಲ್ಲಿ ಐಕ್ಯಮತ್ಯದ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ ಅಥವಾ ಸ್ಥಳೀಯ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ.

ನೀಟ್-ಯುಜಿ 2026 (NEET-UG 2026) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಬ್ಯಾನರ್ ಅಡಿಯಲ್ಲಿ ಈ ಪ್ರತಿಭಟನೆಗಳು ಪ್ರಾರಂಭವಾಗಿದ್ದವು.

ಇವುಗಳಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ, ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದ ವಾಂಗ್ಚುಕ್ ಅವರ ನಿರಾಹಾರ ಸತ್ಯಾಗ್ರಹ ಮತ್ತು ಸಂಸತ್ತಿನತ್ತ ಮೆರವಣಿಗೆ ಸೇರಿದ್ದು, ಈ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗ ಮಾಡಿದ್ದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳು ಮತ್ತು ಸೋರಿಕೆಯಿಂದ ಬಾಧಿತರಾದ ವಿದ್ಯಾರ್ಥಿಗಳಿಗೆ ಹೊಣೆಗಾರಿಕೆಯನ್ನು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ವೇಗದ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಪೇಪರ್ ಲೀಕ್ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು